Site icon Vistara News

Republic Day : ಭದ್ರತೆ ಭೇದಿಸಿ ಸಿಎಂ ಕಡೆ ನುಗ್ಗಿದ ವ್ಯಕ್ತಿ; ಅವರಿಗೆ ಅಳಿಯನ ಬಗ್ಗೆ ಹೇಳಬೇಕಿತ್ತಂತೆ!

Republic Day : CM Security Lapse one taken into Custody

ಬೆಂಗಳೂರು: ಗಣ ರಾಜ್ಯೋತ್ಸವ ಆಚರಣೆ (Republic Day) ನಿಮಿತ್ತ ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ (Manek Shaw Parade Maidan) ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು ಪೊಲೀಸರ ಬಿಗಿ ಭದ್ರತೆಯನ್ನು (High police Security) ಭೇದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಡೆ ನುಗ್ಗಿದ (Man runs towards CM Siddaramaiah) ಘಟನೆ ನಡೆದಿದೆ. ಕೂಡಲೇ ಪೊಲೀಸರು ಆತನನ್ನು ಪಡೆದು ವಿಚಾರಣೆ ನಡೆಸಿದರು. ಹಾಗಂತ, ಹೀಗೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥನೇನೂ ಅಲ್ಲ, ಈ ಸಂದರ್ಭದಲ್ಲಿ ಸಿಎಂ ಗಮನ ಸೆಳೆಯಲು ಈ ರೀತಿ ಮಾಡಿದ್ದಾನೆ. ಆ ವ್ಯಕ್ತಿ ಉದ್ದೇಶವೇ ಬೇರೆಯಾಗಿತ್ತು.

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಲಾಗಿತ್ತು. ದೊಡ್ಡ ಪ್ರಮಾಣದಲ್ಲಿ ಪೊಲೀಸರು ಇದ್ದರು.‌ ಅಷ್ಟರ ನಡುವೆಯೇ ವ್ಯಕ್ತಿಯೊಬ್ಬ ಪೊಲೀಸರ ಭದ್ರತೆಯ ಕಣ್ಗಾವಲು ತಪ್ಪಿಸಿ ಸಿಎಂ ಅವರತ್ತ ಧಾವಿಸಿದ್ದಾನೆ. ಕೈಯಲ್ಲಿ ಪತ್ರವೊಂದನ್ನು ಹಿಡಿದಿದ್ದ ಆತ ಅದನ್ನು ಸಿಎಂ ಕಡೆಗೆ ಎಸೆಯಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಕೂಡಲೇ ಅಪಾಯವನ್ನು ಗ್ರಹಿಸಿ ಅವನನ್ನು ಹಿಡಿದುಕೊಂಡರು. ದೂರಕ್ಕೆ ಕರೆದುಕೊಂಡುಹೋಗಿ ವಿಚಾರಿಸಿದರು. ಆಗ ತಿಳಿದುಬಂದ ಸಂಗತಿ ಇಂಟ್ರೆಸ್ಟಿಂಗ್‌ ಆಗಿದೆ.

ಪೊಲೀಸರು ವಿಚಾರಣೆ ನಡೆಸಿದಾಗ ತಿಳಿದುಬಂದ ಸಂಗತಿ ಏನೆಂದರೆ, ಹೀಗೆ ಏಕಾಏಕಿಯಾಗಿ ಸಿಎಂ ಬಳಿಗೆ ನುಗ್ಗಲು ಯತ್ನಿಸಿದವರು ಮೈಸೂರು ಮೂಲದ ಪರಶು ರಾಮ್ ಎಂಬವರು. ಬಹಳ ದಿನಗಳಿಂದ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಒಂದು ವಿಷಯವನ್ನು ಹೇಳಿ ಸಹಾಯ ಮಾಡಿ ಎಂದು ಕೇಳಲು ಬಂದಿದ್ದರು.

ಪರಶುರಾಮ್‌ ಅವರು ಮೊದಲೇ ನನಗೆ ಸಿಎಂಗೆ ಒಂದು ಮನವಿ ಕೊಡಲಿಕ್ಕಿದೆ. ಹೋಗಲು ಬಿಡಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದರು. ಆದರೆ, ಪೊಲೀಸರು ಬಿಟ್ಟಿರಲಿಲ್ಲ. ಹೀಗಾಗಿ ಅವರು ಪೊಲೀಸರ ಕೋಟೆಯನ್ನು ಬೇಧಿಸಿ ಮುಖ್ಯಮಂತ್ರಿಗಳ ಬಳಿಗೆ ಹೋಗಿದ್ದರು. ಅಲ್ಲಿ ಹೋಗಿ ಮನವಿ ಪತ್ರ ತೋರಿಸುತ್ತಿದ್ದಂತೆಯೇ ಪೊಲೀಸರು ಅವರನ್ನು ಹಿಡಿದುಕೊಂಡು ಹೋದರು.

Republic Day : ಹಾಗಿದ್ದರೆ ಅವರು ಹೇಳಬೇಕಿದ್ದ ವಿಷಯ ಯಾವುದು?

ಪರಶುರಾಮ್‌ ಅವರು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪ ಮಾಡಬೇಕಾದ ವಿಷಯ ತುಂಬ ಗಂಭೀರವಾದುದೇ ಆಗಿತ್ತು. ಅದೇನೆಂದರೆ ಅವರ ಅಳಿಯನಿಗೆ ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission)ದಿಂದ ನೇಮಕಾತಿ ಆಗಿದೆ. ಆದರೆ, ಇನ್ನೂ ನೇಮಕಾತಿ ಆದೇಶ ಬಂದಿಲ್ಲ. ಅದನ್ನು ಆದಷ್ಟು ಬೇಗನೆ ಮಾಡಬೇಕು ಎಂದು ಆಗ್ರಹಿಸುವುದಕ್ಕಾಗಿ ಅವರು ಅಲ್ಲಿ ಬಂದಿದ್ದರು.

ಇದನ್ನೂ ಓದಿ : Republic Day 2024: ʻಗಣರಾಜ್ಯೋತ್ಸವʼ ದಿನದಂದು ಮಿಸ್​ಮಾಡದೇ ನೋಡಿ ರಣಬೀರ್, ವಿಕ್ಕಿ ಕೌಶಲ್‌ʼ ಸಿನಿಮಾಗಳು!

ಕೆಪಿಎಸ್‌ಸಿ ನೇಮಕಾತಿ ಆದೇಶ ಮಾಡಲು ವಿಳಂಬ ಮಾಡುತ್ತಿರುವುದನ್ನು ಆಕ್ಷೇಪಿಸಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವರು ಬಂದಿದ್ದರು. ಆದರೆ ಸಿಎಂ ಬಳಿ ಪೊಲೀಸರು ಬಿಡದಿದ್ದಾಗ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದರು.

ಪೊಲೀಸರು ಈಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

Exit mobile version