Site icon Vistara News

Road Accident : ಅವಸರ ತಂದ ಆಪತ್ತು; ಬಸ್‌ ಇಳಿಯುವಾಗ ಜಾರಿ ಬಿದ್ದ ಕಂಡಕ್ಟರ್‌ನ ಕಾಲು ಕಟ್‌!

BMTC conductors leg cut off

ಬೆಂಗಳೂರು: ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಕಂಡಕ್ಟರ್‌ವೊಬ್ಬರ ಕಾಲಿನ ಪಾದವೇ ಕಟ್ ಆಗಿದೆ. ಬೆಂಗಳೂರಿನ ಜಯನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಫೆ.19ರ ಬೆಳಗ್ಗೆ 11:45ಕ್ಕೆ ಅಪಘಾತ (Road Accident) ನಡೆದಿದೆ.

ಕಂಡಕ್ಟರ್‌ವೊಬ್ಬರು ಕೆಲಸಕ್ಕೆಂದು ಬಿಎಂಟಿಸಿ ಬಸ್‌ನಲ್ಲಿ ಬರುತ್ತಿದ್ದರು. ಡ್ಯುಟಿಗೆ ಟೈಮ್ ಆಯಿತೆಂದು ಆತುರದಲ್ಲಿ ಜಯನಗರದ ಬಿಎಂಟಿಸಿ ಬಸ್ ಸ್ಟ್ಯಾಂಡ್ ಸಮೀಪಿಸುತ್ತಿದ್ದಂತೆ ಇಳಿಯಲು ಮುಂದಾದರು. ಬಸ್ ಸ್ಟ್ಯಾಂಡ್ ಸಮೀಪ ರಸ್ತೆ ತಡೆ ಇದ್ದ ಕಾರಣಕ್ಕೆ ಚಾಲಕ ಬಸ್ ನಿಧಾನ ಮಾಡಿದ್ದರು. ಡಿಪೊ ಎಂಟ್ರಿ ಪಡೆಯುತ್ತಿದ್ದಂತೆ ಕೆಲಸದ ಅವಸರದಲ್ಲಿ ಇಳಿಯಲು ಹೋದಾಗ ಕಾಲು ಜಾರಿದೆ.

ಈ ವೇಳೆ ಬಸ್ ಚಕ್ರಕ್ಕೆ ಸಿಲುಕಿದ ಸಿಬ್ಬಂದಿಯ ಕಾಲಿನ ಪಾದವೇ ಕಟ್ ಆಗಿದೆ. ಕಂಡಕ್ಟರ್‌ ಚೀರಾಟವನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಗಾಯಾಳುವನ್ನು ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಕಂಡಕ್ಟರ್‌ಗೆ ಚಿಕಿತ್ಸೆ ಮುಂದುವರಿದಿದೆ.

ಹಿಂಬದಿ ಬಸ್‌ಗೆ ಮತ್ತೊಂದು ಬಸ್ ಡಿಕ್ಕಿ

ವಿಜಯಪುರ ಜಿಲ್ಲೆಯ ಚಡಚಣ ಬಳಿ ಬಸ್‌ಗಳ ಮಧ್ಯೆ ಅಪಘಾತ ನಡೆದಿದೆ. ಶಾಲಾ ವಾಹನವೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಚಾಲಕ ಬ್ರೇಕ್‌ ಹಾಕಿದಾಗ ಹಿಂಬದಿ ಬಸ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಎಂಟು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.

ಶಾಲಾ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನುಳಿದ ಗಾಯಾಳುಗಳಿಗೆ ಚಡಚಣ ತಾಲೂಕು ಆಸ್ಪತ್ರೆಗೆ ಸೇರಿದಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Road Accident : ಆಂಬ್ಯುಲೆನ್ಸ್‌ ಟೈರ್‌ ಸಿಡಿದು, ಬೈಕ್‌ಗೆ ಬಡಿದು ಸವಾರ ಸ್ಥಳದಲ್ಲೇ ಮೃತ್ಯು

ಅಡ್ಡಲಾಗಿ ಬಂದ ಲಾರಿ ತಪ್ಪಿಸಲು ಪಾದಚಾರಿಗೆ ಡಿಕ್ಕಿ ಹೊಡೆದ ಕಾರು;‌ ವಿಲವಿಲ ಒದ್ದಾಡಿದ ಯುವಕ

ಆನೇಕಲ್: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಅಡ್ಡಲಾಗಿ ಬಂದ ಲಾರಿಯನ್ನು ತಪ್ಪಿಸಲು ಹೋದ ಕಾರುವೊಂದು, ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಾದಚಾರಿ ಸಮೇತ ಕಾರು ಡಿವೈಡರ್‌ಗೆ ಗುದ್ದಿದೆ.

ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನ ಪಟ್ಟಲಪಲ್ಲಿ ಬಳಿ ಅಪಘಾತ ನಡೆದಿದೆ. ಯುವಕನ ಸಮೇತ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಡಿವೈಡರ್‌ನಲ್ಲಿದ್ದ ಕಬ್ಬಿಣದ ತುಂಡಿಗೆ ಕಾಲು ಸಿಲುಕಿತ್ತು. ಇದರಿಂದ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕ ವಿಲವಿಲನೆ ಒದ್ದಾಡಿದ್ದಾನೆ.

ಇತರೆ ವಾಹನ ಸವಾರರು ಹಾಗೂ ಸ್ಥಳೀಯರಿಂದ ಅಪಘಾತಕ್ಕೊಳಗಾಗಿದ್ದ ಯುವಕನ ರಕ್ಷಣೆ ಮಾಡಿದರು. ಕಬ್ಬಿಣದ ತುಂಡು ಎಡಗಾಲನ್ನೇ ಸೀಳಿ ಹೋಗಿತ್ತು, ಇದರಿಂದಾಗಿ ಕಬ್ಬಿಣದಿಂದ ಕಾಲ ಅನ್ನು ಬೇರೆಪಡಿಸಲು ಸ್ಥಳೀಯರು ಮುಂದಾದರು. ಆಗದೇ ಇದ್ದಾಗ ಆಂಬ್ಯುಲೇನ್ಸ್‌ನ ವೈದ್ಯರು ಅನಸ್ತೇಶಿಯಾ ನೀಡಿ, ನಂತರ ಕಬ್ಬಿಣದಲ್ಲಿ ಸಿಲುಕಿದ್ದ ಆತನನ್ನು ಬಿಡಿಸಿದ್ದರು. ಈ ವೇಳೆ ತೀವ್ರ ರಕ್ತಸ್ರಾವವಾಗಿದ್ದರಿಂದ ಯುವಕ ಅರೇ ಪ್ರಜ್ಞೆಯಲ್ಲಿದ್ದ ಅವನನ್ನು ಕೂಡಲೇ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೆದ್ದಾರಿಯಲ್ಲಿ ನಡೆದ ಈ ಅಪಘಾತದಿಂದ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಹೊಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಟ್ರ್ಯಾಕ್ಟರ್‌- ಬಸ್‌ ನಡುವೆ ಭೀಕರ ಅಪಘಾತ; ಒಬ್ಬ ಸಾವು, 6 ಮಂದಿ ಗಂಭೀರ

ಚಾರ್ಮಾಡಿಯಲ್ಲಿ ಕಂದಕಕ್ಕೆ ಬಿದ್ದ ಕಾರು

ಚಿಕ್ಕಮಗಳೂರು :ಚಾಲಕನ ನಿಯಂತ್ರಣ ತಪ್ಪಿ ಕಾರುವೊಂದು 30 ಅಡಿ ಕಂದಕಕ್ಕೆ ಬಿದ್ದು ಪಲ್ಟಿ ಹೊಡೆದಿದೆ. ಚಾರ್ಮಾಡಿ ಘಾಟ್‌ನ ಮಲಯಮಾರುತ ಸಮೀಪ ಈ ಅಪಘಾತ ಸಂಭವಿಸಿದೆ. ಮೇಲಿಂದ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜು-ಗುಜ್ಜಾಗಿತ್ತು.

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ‌ವಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರು ಮಂದಿ ಪ್ರವಾಸಿಗರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದರು. ಈ ವೇಳೆ ತಡೆಗೋಡೆ ಇಲ್ಲದ ಕಾರಣಕ್ಕೆ ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದ. ಹೀಗಾಗಿ ಏಕಾಏಕಿ ಕಾರು ಕಂದಕ್ಕೆ ಬಿದ್ದಿತ್ತು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಘಟನೆ ನಡೆದಿದ್ದು, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಕ್ಕೆ ಬಿದ್ದಿದ್ದ ಕಾರನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version