ಬೆಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳಲು ಬೈಕ್ ತೆಗೆಯುವಾಗ ಮತ್ತೊಂದು ರಾಯಲ್ ಎನ್ಫೀಲ್ಡ್ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ (Road Accident) ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಧಾಕರ್ ಮತ್ತು ಗಣಿ ಎಂಬ ಸವಾರರು ಮೃತ ಪಟ್ಟಿದ್ದಾರೆ.
ಸುಧಾಕರ್ ಬಿಎಸ್‌ಎಫ್ ಉದ್ಯೋಗಿಯಾಗಿದ್ದರೆ, ಗಣಿ ಯೂಟ್ಯೂಬರ್ ಆಗಿದ್ದರು. ಸುಧಾಕರ್ ಕೆಲಸ ಮುಗಿಸಿ ಬಿಎಸ್ಎಫ್ ಕಾಂಪೌಂಡ್‌ನಿಂದ ಹೊರಗೆ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸುಧಾಕರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಾಯಾಳು ಗಣಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತನೂ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
ಇದನ್ನೂ ಓದಿ: Killer BMTC : ಪತ್ನಿ ಸೀಮಂತಕ್ಕೆ ಹೂ ತರಲು ಹೋದವನ ಬಲಿ ಪಡೆದ ಬಿಎಂಟಿಸಿ!
ತಡೆಗಂಬಕ್ಕೆ ಕ್ಯಾಂಟರ್ ಡಿಕ್ಕಿ
ಸದಾಶಿವನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಕ್ಯಾಂಟರ್ ಚಾಲಕನೊಬ್ಬ ಪ್ಯಾಲೆಸ್ ರಸ್ತೆ ಅಂಡರ್ ಪಾಸ್‌ಗೆ ಅಳವಡಿಸಿದ್ದ ತಡೆಗಂಬ ಗುದ್ದಿಕೊಂಡು ಹೋಗಿದ್ದಾನೆ. ಅಂಡರ್ ಪಾಸ್‌ನಲ್ಲಿ ಭಾರೀ ವಾಹನಗಳು ಹೋಗದಂತೆ ಸೂಚಿಸಲು ಹೈಟ್ ಬ್ಯಾರಿಯರ್ಸ್ ನಿರ್ಮಾಣ ಮಾಡಲಾಗಿದೆ. ಆದರೂ ಅಂಡರ್ ಪಾಸ್ ಮೂಲಕ ಹೋಗಿ ಹೈಟ್ ಬ್ಯಾರಿಯರ್ಸ್ ಡಿಕ್ಕಿ ಹೊಡೆದು ಡ್ಯಾಮೇಜ್ ಮಾಡಿದ್ದಾನೆ. ಇತ್ತ ಕ್ಯಾಂಟರ್ ಹಿಂದೆ ಬರುತ್ತಿದ್ದ ಕಾರು, ಬೈಕ್ ಸವಾರರು ಒಮ್ಮೆಲೆ ಹಿಂದಕ್ಕೆ ಸರಿದಿದ್ದಾರೆ. ಇದರಿಂದ ಕೂದಲೆಳೆ ಅಂತರಲ್ಲಿ ಸವಾರರು ಪಾರಾಗಿದ್ದಾರೆ. ಅಪಘಾತದ ಎಲ್ಲಾ ದೃಶ್ಯ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಸದಾಶಿವನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್!
ಬೆಂಗಳೂರು: ಬಿಎಂಟಿಸಿ ಬಸ್ (Killer BMTC) ಹರಿದು ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ (Road Accident) ನಡೆದಿದೆ. ವೀಣಾ ಬಿಎಂಟಿಸಿ ಬಸ್‌ಗೆ ಬಲಿಯಾದ ಮಹಿಳೆ.
ವೀಣಾ ಅವರು ರಸ್ತೆ ದಾಟುವಾಗ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ