ಬೆಂಗಳೂರು: ಬೆಂಗಳೂರಲ್ಲಿ ಕೆಎಸ್ಆರ್‌ಟಿಸಿ ಬಸ್ಸಿಗೆ (Road Accident) ಪಾದಾಚಾರಿ ಬಲಿಯಾಗಿದ್ದಾರೆ. 85 ವರ್ಷದ ವೃದ್ಧನ ಮೇಲೆ ಕೆಎಸ್‌ಆರ್‌ಸಿಟಿ ಬಸ್ (KSRTC Hit) ಹರಿದಿದೆ. ಗಂಗಾರೆಡ್ಡಿ (85) ಮೃತ ದುರ್ದೈವಿ.
ಆಂಧ್ರಪ್ರದೇಶ ಮೂಲದ ಗಂಗಾರೆಡ್ಡಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು. ಗುರುವಾರ ಮಧ್ಯಾಹ್ನ 12:30ರ ಸುಮಾರಿಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಬಳಿ ನಡೆದು ಹೋಗುತ್ತಿದ್ದಾಗ, ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ವೃದ್ಧನಿಗೆ ಡಿಕ್ಕಿ ಹೊಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಮೂಡಿಗೆರೆ ಡಿಪೋಗೆ ಸೇರಿದ್ದು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪ್ಪಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Murder Case : ಬೆಂಗಳೂರಲ್ಲಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿ, ವಿಕೃತವಾಗಿ ಕೊಂದ 18 ವರ್ಷದ ಕಾಮುಕ
ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಯಾದಗಿರಿ: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ (Road Accident) ಸ್ಥಳದಲ್ಲೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಕೊಟಗೇರಾ ಗ್ರಾಮದ ಸಮೀಪ ನಡೆದಿದೆ. ಗುರುಮಠಕಲ್ ಪಟ್ಟಣದ ನಿವಾಸಿ ನರಸಪ್ಪ (48) ಮೃತ ದುರ್ದೈವಿ.
ನರಸಪ್ಪ ಬೈಕ್‌ನಲ್ಲಿ ಯಾದಗಿರಿಯಿಂದ ಕೋಟಗೇರಾ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಹಾರಿ ಬಿದ್ದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ನರಸಪ್ಪ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ನರಸಪ್ಪ ಅವರ ಸಾವಿನ ವಿಷಯ ತಿಳಿದು ಆಸ್ಪತ್ರೆಯ ಶವಗಾರಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನರಸಪ್ಪರಿಗಾಗಿ ಚೀರುತ್ತಾ ರೋದಿಸಿದರು. ಸದ್ಯ ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: Snake Bites: ಹಾವು ಕಡಿತಕ್ಕೆ ವ್ಯಕ್ತಿ ಸಾವು; ಸಕಾಲಕ್ಕೆ ಆಂಬ್ಯುಲೆನ್ಸ್ ಸಿಕ್ಕಿದ್ದರೆ ಉಳಿತಿತ್ತು ಜೀವ
ಮತ್ತೆ ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಲಾಕ್
ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ಲಾಕ್ ಆಗಿದೆ. ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಲಾರಿ ಟರ್ನ್ ಆಗದೇ ನಿಂತಿದೆ. ಇದರಿಂದಾಗಿ ಗುರುವಾರ ಬೆಳಗ್ಗೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸವಾರರು ಪರದಾಡಿದ್ದಾರೆ.
ಬಳ್ಳಾರಿಯಿಂದ ಮಂಗಳೂರಿಗೆ ತೆರಳುತ್ತಿದ್ದ 12 ಚಕ್ರದ ಲಾರಿ ತಿರುವಿನಲ್ಲಿ ಹೋಗಲು ಆಗದೇ ಅಡ್ಡಕ್ಕೆ ನಿಂತಿದೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿಯಲ್ಲಿ ಭಾರೀ ವಾಹನಗಳಿಗೆ ನಿಷೇದವಿದೆ. ಚೆಕ್ ಪೋಸ್ಟ್ ಇದ್ದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿ ಬಂದಿದೆ. 2 ಗಂಟೆಗೂ ಹೆಚ್ಚು ಸಮಯ ತಿರುವಿನಲ್ಲಿ ಮುಂದೆ ಹೋಗಲಾಗದೆ ಲಾರಿ ಬಂದ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ