ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ (Road Accident) ಹಿರಿಯ ವಕೀಲರು ಮೃತಪಟ್ಟಿದ್ದಾರೆ. ಶಿವಮೊಗ್ಗ ಮೂಲದ ಹಿರಿಯ ವಕೀಲ ಕೆ.ಟಿ.ಡಾಕಪ್ಪ ಮೃತ ದುರ್ದೈವಿ. ಕಳೆದ ರಾತ್ರಿ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ಡಿವಿಜೆ ರಸ್ತೆಯ ಕಚೇರಿಗೆ ಹೋಗಿದ್ದರು. ಮನೆಗೆ ಹೋಗಲು ವಾಪಸ್ ಕಾರ್ ಬಳಿ ಬರುವಾಗ ಬೈಕ್‌ವೊಂದು ಡಿಕ್ಕಿ ಹೊಡೆದಿತ್ತು.
ಅತೀ ವೇಗವಾಗಿ ಕೆಟಿಎಂ ಬೈಕ್ ವಕೀಲ ಡಾಕಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಡಾಕಪ್ಪರ ತಲೆಗೆ ಗಂಭೀರ ಪೆಟ್ಟಾಗಿತ್ತು. ಹೀಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಮೂಲದ ತೀರ್ಥಹಳ್ಳಿಯ ಕೌರಿ ಮೂಲದ ಡಾಕಪ್ಪ ಅವರು ಹೈ ಕೋರ್ಟ್ ಹಾಗೂ ಇತರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದರು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದರು. ಆದರೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಬೈಕ್ ಸವಾರ ಆದಿತ್ಯಾ (21) ಎಂಬಾತನೂ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾನೆ. ಡಾಕಪ್ಪರಿಗೆ ಡಿಕ್ಕಿ ಹೊಡೆದ ಬಳಿಕ ಕಾರಿಗೆ ಗುದ್ದಿದ್ದಾನೆ. ಇದರಿಂದ ಆದಿತ್ಯಾಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದಿತ್ಯಾ ಕಳೆದ 20 ದಿನದ ಹಿಂದಷ್ಟೇ ಡ್ರೈವಿಂಗ್ ಲೆಸೆನ್ಸ್ ಪಡೆದಿದ್ದ ಎನ್ನಲಾಗಿದೆ. ಬಸವನಗುಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Murder Case : ಬಾಗಲಕೋಟೆಯಲ್ಲಿ ಹಳೆ ದ್ವೇಷಕ್ಕೆ ಹರಿದ ನೆತ್ತರು; ಒಬ್ಬ ಸಾವು, ಮತ್ತಿಬ್ಬರು ಗಂಭೀರ
ಬೈಕ್‌ಗಳ ಮುಖಾಮುಖಿ ಡಿಕ್ಕಿ; ಮದುವೆಗೆ ತೆರಳಿದ್ದ ತಾಯಿ- ಮಗ ಮೃತ್ಯು
ಬಾಗಲಕೋಟೆ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿ ಮದುವೆಗೆ ತೆರಳಿದ್ದ ತಾಯಿ ಮತ್ತು ಮಗ ದಾರುಣವಾಗಿ ಮೃತಪಟ್ಟಿದ್ದಾರೆ (Mother and son dead). ಒಂದು ಮಗು ಸೇರಿ ಮೂವರಿಗೆ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆಯ (Bagalakote news) ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ.
ಹನಮವ್ವ ಬಸಪ್ಪ ಕಠಾಣಿ (63), ಕೆಂಚಪ್ಪ ಬಸಪ್ಪ ಕಠಾಣಿ (32) ಮೃತ ತಾಯಿ ಮತ್ತು ಮಗ. ಹನಮವ್ವ ಮತ್ತು ಕೆಂಚಪ್ಪ ಅವರು ಮುಧೋಳದಿಂದ ಹಲಗಲಿ ಕಡೆ ಹೊರಟಿದ್ದರು. ಅವರು ಒಂದು ಮದುವೆ ಕಾರ್ಯಕ್ಕೆ ತೆರಳಿದ್ದರು. ಈ ನಡುವೆ, ಹಲಗಲಿಯಿಂದ ತೋಟಕ್ಕೆ ಮತ್ತೊಂದು ಬೈಕ್ ತೆರಳುತ್ತಿತ್ತು. ಈ ಎರಡೂ ಬೈಕ್‌ಗಳು (Bikes Rams each other) ಗ್ರಾಮದ ಹೊರವಲಯದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ.
ಘಟನೆಯಲ್ಲಿ ತಾಯಿ ಮತ್ತು ಮಗ ಮೃತಪಟ್ಟರೆ, ಮತ್ತೊಂದು ಬೈಕ್ ನಲ್ಲಿದ್ದ ಮಗು ಸೇರಿ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಧೋಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿ ರಭಸಕ್ಕೆ ಎರಡೂ ಬೈಕ್‌ಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲಗಲಿಯಲ್ಲಿ ನಡೆದಿರುವ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ