ಬೆಂಗಳೂರು: ರಾತ್ರಿ ವೇಳೆ ಬಸ್ ಇಲ್ಲ ಅಂತ ಸಿಕ್ಕ ಸಿಕ್ಕ ವಾಹನಗಳಲ್ಲಿ ಡ್ರಾಪ್ ಪಡೆದುಕೊಳ್ಳುವ (Hitch hiking) ಮುನ್ನ ಎಚ್ಚರವಿರಲಿ. ಡ್ರಾಪ್ ಕೊಡುವ ನೆಪದಲ್ಲಿ ದರೋಡೆ (Robbery Case) ಮಾಡುವ ಗ್ಯಾಂಗ್ ಆ್ಯಕ್ಟೀವ್ ಆಗಿದ್ದು, ಅಂಥ ಮೂವರನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ರಾತ್ರಿ ವೇಳೆ ಬಸ್ ಮಿಸ್ ಆಯ್ತು ಅಂತ ಸಿಕ್ಕ ಸಿಕ್ಕ ಗಾಡಿಗಳಿಗೆ ಕೈ ಅಡ್ಡ ಹಾಕುವ ಜನ ಓದಲೇಬೇಕಾದ ಸ್ಟೋರಿ ಇದು. ಬನ್ನಿ ಡ್ರಾಪ್ ಕೊಡ್ತೀವಿ ಅಂತ ಮೆಲ್ಲಗೆ ಕಾರು ಹತ್ತಿಸಿಕೊಳ್ತಾರೆ. ಸ್ವಲ್ಪ ದೂರ ಹೋಗ್ತಿದ್ದಂತೆ ಹಿಂದಿನ ಸೀಟ್‌ನಿಂದ ಕತ್ತು ಲಾಕ್ ಮಾಡಿ, ಕುತ್ತಿಗೆಗೆ ಚಾಕು ಇಡುತ್ತಾರೆ. ಮುಖ ಮೂತಿ ನೋಡದೇ ಹಲ್ಲೆ ಮಾಡಿ, ನಿಮ್ಮ ಬಳಿ ಇರುವುದನ್ನೆಲ್ಲ ಕಸಿದುಕೊಳ್ಳುತ್ತಾರೆ. ಹಲ್ಲೆ ಮಾಡುವಾಗ ಜೋರಾಗಿ ಎಫ್ಎಂ ಆನ್ ಮಾಡಿವುದರಿಂದ ನೀವು ಎಷ್ಟೇ ಕೂಗಾಡಿ ಕಿರುಚಾಡಿದರೂ ಹೊರಗಡೆ ನಿಮ್ಮ ಧ್ವನಿ ಕೇಳಿಸುವುದಿಲ್ಲ.
ಬೆಂಗಳೂರಿನ ಔಟರ್ ರಿಂಗ್ ರೋಡೇ ಈ ಖದೀಮರ ಹಾಟ್‌ಸ್ಪಾಟ್ ಆಗಿದೆ. ಲೇಟ್‌ನೈಟ್ ಕಾರನ್ನೇರಿ ಬಸ್ ನಿಲ್ದಾಣಗಳ ಬಳಿಯೇ ಇವರು ರೌಂಡ್ಸ್ ಹಾಕುತ್ತಾರೆ. ಆ ವೇಳೆ ಕಾರ್‌ಗೆ ಕೈ ಅಡ್ಡಹಾಕಿ ಡ್ರಾಪ್ ಕೊಡಿ ಅಂದ್ರೆ ನಿಮ್ಮ ಕಥೆ ಮುಗೀತು. ನೀವು ಒಂದು ಕಡೆ ಹೇಳಿದರೆ, ಅವರು ಇನ್ನೊಂದು ಕಡೆ ಕರೆದುಕೊಂಡು ಹೋಗುತ್ತಾರೆ. ಹೀಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದ ನಂಜುಂಡ, ಗಿರೀಶ್ ಹಾಗೂ ನವೀನ್ ಎಂಬ ಆಸಾಮಿಗಳು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಲೆಕ್ಟ್ರಿಕ್ ಕಾರ್ ಬಳಸಿಕೊಂಡು ಇವರು ದರೋಡೆ ಮಾಡುತ್ತಿದ್ದರು. ಇತ್ತೀಚೆಗೆ ಗೊರಗುಂಟೇಪಾಳ್ಯ ಸಿಗ್ನಲ್ ಬಳಿ ಇಬ್ಬರನ್ನು ಇವರು ಡ್ರಾಪ್ ಕೊಡುವುದಾಗಿ ಕಾರಿಗೆ ಹತ್ತಿಸಿಕೊಂಡಿದ್ದರು. ಬಳಿಕ ಮಾಳಗಾಳದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಕಾರಿನಲ್ಲೇ ಲಾಕ್ ಮಾಡಿ, ಬಡಪಾಯಿಗಳ ಹಣ ಮೊಬೈಲ್ ಮೂಲಕ ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಜೇಬಿನಲ್ಲಿರುವ ಹಣ ಅಲ್ಲದೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ವರ್ಗಾಯಿಸಿಕೊಂಡಿದ್ದರು. ಬಳಿಕ ಮೊಬೈಲ್‌ಗಳನ್ನು ಕಸಿದುಕೊಂಡು ಇವರನ್ನು ಹೊರತಳ್ಳಿ ಎಸ್ಕೇಪ್ ಆಗಿದ್ದರು.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಜ್ಞಾನಭಾರತಿ ಪೊಲೀಸರು ಶೋಧ ನಡೆಸುತ್ತಿದ್ದರು. ಈ ಮಧ್ಯೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಇವರು ಸಿಕ್ಕಿಹಾಕಿಕೊಂಡಿದ್ದಾರೆ. ಒಂದು ಟ್ರಾವೆಲ್ಸ್‌ಗೆ ಸೇರಿದ್ದ ಕಾರಿನಲ್ಲೇ ಕೃತ್ಯ ಎಸಗಿದ್ದ ಆರೋಪಿಗಳನ್ನು 23 ಕಿಲೋಮೀಟರ್ ಚೇಸ್ ಮಾಡಿ ಪೊಲೀಸರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರ್ ವಶಪಡಿಸಿಕೊಂಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ ನಗರ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ. ಇವರಲ್ಲಿ ಒಬ್ಬ ಆರೋಪಿ ಖಾಸಗಿ ಕಂಪನಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ.
ಇದನ್ನೂ ಓದಿ: Murder Case : ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಕೊಂದ ಮಹಿಳೆ! ಇವಳೆಂಥಾ ಹಂತಕಿ!