ಬೆಂಗಳೂರು: ಉತ್ತರ ವಿಭಾಗ ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ವೊಬ್ಬ (Rowdy Sheeter) ಪೊಲೀಸ್‌ರಿಂದ ತಪ್ಪಿಸಿಕೊಂಡಿದ್ದಾನೆ. ರೋಹಿತ್ ಅಲಿಯಾಸ್ ಒಂಟೆ ರೋಹಿತ್ ಎಸ್ಕೇಪ್ ಆದವನು. 110 ಸೆಕ್ಷನ್ ಬಾಂಡ್ ಹಾಕಲು ಸುಬ್ರಹ್ಮಣ್ಯ ನಗರ ಠಾಣೆ ರೌಡಿಶೀಟರ್ ಆಗಿರುವ ಒಂಟೆ ರೋಹಿತ್‌ನನ್ನು ಕರೆಸಿಕೊಂಡಿದ್ದರು. ಒಂದು ವಾರದ ಹಿಂದೆ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಇಂದು ಠಾಣೆಯಿಂದ ಡಿಸಿಪಿ ಮುಂದೆ ಕರೆದೊಯ್ದಿದ್ದರು.
ಇತ್ತ ಒಂಟೆ ರೋಹಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಮುಂಚೆಯೇ ಡಿಸಿಪಿ ಕಚೇರಿ ಬಳಿ ಕಾಯುತ್ತಿದ್ದರು. ಸಿಸಿಬಿ ಪೊಲೀಸರನ್ನು ನೋಡಿದ ಕೂಡಲೇ ಒಂಟೆ ರೋಹಿತ್ ಸುಬ್ರಹ್ಮಣ್ಯ ನಗರ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ.
ಈ ಒಂಟೆ ರೋಹಿತ್, ಸೈಲೆಂಟ್ ಸುನಿಲ್ ಅಸೋಸಿಯೇಟ್ ಆಗಿದ್ದ. ಕೊಲೆ, ಕೊಲೆ ಯತ್ನ ಸೇರಿ ಹಲವು ಕೇಸಿನಲ್ಲಿ ಫಿಟ್ ಆಗಿದ್ದ. ಸದ್ಯ ಪೊಲೀಸರ ಕೈಯಿಂದ ಎಸ್ಕೇಪ್ ಆಗಿರುವ ಒಂಟೆ ರೋಹಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Road Accident : ಟಿಪ್ಪರ್ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ
ಏನಿದು 110 ಸೆಕ್ಷನ್
ಬೆಂಗಳೂರಿನಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಲೇ ಇದೆ. ಅಪರಾಧ ಕೃತ್ಯಗಳನ್ನು ತಡೆಯಲು ಆಗದಷ್ಟು ಪೊಲೀಸರು ಕೈ ಚೆಲ್ಲಿ ಕುಳಿತಂತೆ ಇದೆ. ಸದ್ಯ ರೌಡಿಗಳ ಪಾಲಿಗೆ ದುಸ್ವಪ್ನವಾಗಿರುವ ಸೆಕ್ಷನ್ 110 ಪ್ರಕಾರ ಪೊಲೀಸರು ರೌಡಿಗಳಿಂದ ತಾವು ಯಾವುದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸೋದಿಲ್ಲ ಎಂದು ಬಾಂಡ್ ಬರೆಸಿಕೊಳ್ಳುತ್ತಾರೆ.
ಈ ಮೊದಲು ಕೂಡ ಬಾಂಡ್ ಬರೆಸಿಕೊಂಡು ಸುಮ್ಮನೆ ಇರುತ್ತಿದ್ದರು. ಅದರ ಕಾರ್ಯ ರೂಪ ಮಾತ್ರ ಆಗುತ್ತಿರಲಿಲ್ಲ. ಪೊಲೀಸರು ಕೂಡಾ ಇಷ್ಟು ದಿನ ಸುಮ್ಮನೆ ಇದ್ದರು. ಆದರೆ ನಗರದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿರುವುದರಿಂದ ಈ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ.
ಈ ಬಾಂಡಿನಲ್ಲಿ ರೌಡಿಗಳಿಂದ 3-5ಲಕ್ಷದವರೆಗೆ ಕುಟುಂಬ ಸಮೇತವಾಗಿ ಬಾಂಡ್ ಬರೆಸಿಕೊಳ್ಳಲಾಗುತ್ತದೆ. ರೌಡಿಶೀಟರ್ ಬಾಂಡ್ಗೆ ಸಹಿ ಹಾಕಿದ ಮೇಲೆ ಕೊಲೆ, ಕಳ್ಳತನ, ದರೋಡೆಯಂತಹ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಬಾಂಡ್ ಮೀರಿ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಅಂಥ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಅಗತ್ಯ ಇಲ್ಲ. ಬದಲಿಗೆ ಯಾವುದೇ ರೀತಿಯ ಕೇಸ್ ದಾಖಲಿಸದಯೇ ಡಿಸಿಪಿ ಅಧಿಕಾರಿ ಉಪಯೋಗಿಸಿ ನೇರವಾಗಿ 3ರಿಂದ 10 ತಿಂಗಳವರೆಗೆ ಜೈಲಿಗೆ ಅಟ್ಟಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ