Site icon Vistara News

ಇದು ಆಧ್ಯಾತ್ಮಿಕ ಅನುಭವ ನೀಡುವ ವಾದ್ಯ: ರುದ್ರವೀಣೆ ಕಲಾವಿದೆ ಜ್ಯೋತಿ ಹೆಗಡೆ

rudraveena

ಇಂದು, ನಾಳೆ ಬೆಂಗಳೂರಿನಲ್ಲಿ ರುದ್ರವೀಣೆಯ ಝೇಂಕಾರ

ಸಂದರ್ಶನ: ಹರೀಶ್‌ ಕೇರ

ರಾಜಧಾನಿ ಬೆಂಗಳೂರು ಎರಡು ದಿನಗಳ ʼರುದ್ರವೀಣೆ ಉತ್ಸವʼಕ್ಕೆ ಸಾಕ್ಷಿಯಾಗುತ್ತಿದೆ. ವಾದ್ಯಗಳಲ್ಲೇ ಅತಿ ವಿಶಿಷ್ಟವಾದ, ವಿರಳವಾದ ರುದ್ರವೀಣೆಯ ನುಡಿಸಾಣಿಕೆಯನ್ನು ಇಂದು ಹಾಗೂ ನಾಳೆ ಕಲಾರಸಿಕರು ಕೇಳಿಸಿಕೊಳ್ಳಬಹುದಾಗಿದೆ. ಈ ರುದ್ರವೀಣೆ ಉತ್ಸವದ ರೂವಾರಿಯಾಗಿರುವವರು ದೇಶದ ಪ್ರಥಮ ರುದ್ರವೀಣೆ ಕಲಾವಿದೆ ಎನ್ನಿಸಿಕೊಂಡಿರುವ ಜ್ಯೋತಿ ಹೆಗಡೆ ಅವರು. ವಿಸ್ತಾರ ನ್ಯೂಸ್‌ಗೆ ಅವರು ನೀಡಿರುವ ಸಂದರ್ಶನದಲ್ಲಿ ಈ ಉತ್ಸವದ ಮಹತ್ವದ ಕುರಿತು ಅವರು ಮಾತನಾಡಿದ್ದಾರೆ.

ಸಂ: ಅಪರೂಪವಾಗಿ ಕೇಳಿಸುವ ದನಿ ರುದ್ರವೀಣೆಯದು. ನಿಮಗೆ ಅದರ ಬಗ್ಗೆ ಒಲವು ಬಂದುದು ಹೇಗೆ?

ಜ್ಯೋತಿ ಹೆಗಡೆ: ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಇದನ್ನು ಮೊದಲ ಬಾರಿಗೆ ಆಲಿಸಿದೆ. ಕರ್ನಾಟಕದಲ್ಲಂತೂ ಇದನ್ನು ನುಡಿಸುವ, ಕೇಳುವ ಪರಿಪಾಠವೇ ಇಲ್ಲ. ನನ್ನ ಗುರುಗಳಾದ ಬಿಂದುಮಾಧವ ಪಾಠಕ್‌ ಅವರು ಮೊದಲ ಬಾರಿಗೆ ನುಡಿಸುವುದನ್ನು ಕೇಳಿ ನಾನು ಆಕರ್ಷಿತಳಾದೆ. ಅದನ್ನು ಕಲಿಯಬೇಕು ಅನಿಸಿ ಅವರ ಶಿಷ್ಯತ್ವ ಪಡೆದೆ. ಕರ್ನಾಟಕದಲ್ಲಿ ಮತ್ತು ದೇಶಾದ್ಯಂತ ಇದರ ಜನಪ್ರಿಯತೆಗಾಗಿ ಬಿಂದುಮಾಧವ ಪಾಠಕ್‌ ಮತ್ತು ಇನೊಬ್ಬ ಮಹಾನ್‌ ಗುರು, ಸಂತ ದತ್ತಾತ್ರೇಯ ಪರ್ವತೀಕರ್‌ ಅವರು ಶ್ರಮಿಸಿದ್ದಾರೆ. ಹಾಗಾಗಿ ಪರ್ವತೀಕರ್‌ ಅವರ ನೆನಪಿಗೆ ಈ ಉತ್ಸವವನ್ನು ಸಮರ್ಪಿಸಿದ್ದೇನೆ.

ಸಂ: ರುದ್ರವೀಣೆ ನುಡಿಸುವವರೂ ಸೀಮಿತ, ಅದರ ನುಡಿಸಾಣಿಕೆಯೂ, ಜನಪ್ರಿಯತೆಯೂ ಸೀಮಿತ ಅಲ್ವೇ?

ಜ್ಯೋತಿ ಹೆಗಡೆ: ರುದ್ರವೀಣೆ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ, ಅದರಲ್ಲೂ ದ್ರುಪದ್‌ ಘರಾನೆಯಲ್ಲಿ ನುಡಿಸುವಂಥದ್ದು. ಕರ್ನಾಟಕ ಸಂಗೀತದಲ್ಲಿ ಇದನ್ನು ಬಳಸುವ ಪರಿಪಾಠವಿಲ್ಲ. ರುದ್ರವೀಣೆಯನ್ನು ಈಗೀಗ ಖ್ಯಾಲ್‌ನಲ್ಲಿ ನುಡಿಸುವವರೂ ಇದ್ದಾರೆ. ಅದು ಹೊಸ ಪದ್ಧತಿ. ಮೊದಲು ಇರಲಿಲ್ಲ. ಇನ್ನು ಜನಪ್ರಿಯತೆ ನಿಧಾನವಾಗಿ ಹೆಚ್ಚುತ್ತಿದೆ. ಮೊದಮೊದಲು ಶಿಷ್ಯರೂ ಹೆಚ್ಚು ಬರುತ್ತಿರಲಿಲ್ಲ. ಈಗೀಗ ಇದನ್ನೇ ಹುಡುಕಿ ಕಲಿಯಲು ಬರುವವರ ಸಂಖ್ಯೆ ಹೆಚ್ಚುತ್ತಿದೆ.

ಸಂ: ರುದ್ರವೀಣೆಗೆ ಒಂದು ಆಧ್ಯಾತ್ಮಿಕ ಆಯಾಮವೂ ಇದೆಯಲ್ವಾ?

ಜ್ಯೋತಿ ಹೆಗಡೆ: ಹೌದು, ಅದೇ ಮುಖ್ಯವಾದದ್ದು. ರುದ್ರವೀಣೆಯಿಂದ ಕಲಾರಸಿಕರು ಸಂತೋಷಪಡುತ್ತಾರೆ ಎನ್ನುವುದು ನಿಜ. ಆದರೆ ಇದರ ಆಲಿಸುವಿಕೆಯಿಂದ ಆಗುವ ಆಧ್ಯಾತ್ಮಿಕ ಆನಂದ, ಅನುಭವ ಕಲಾರಸಿಕತೆಗಿಂತ ಮಿಗಿಲು. ಇದರಿಂದ ಆಳವಾದ ಧ್ವನಿ ಹೊಮ್ಮುತ್ತದೆ, ಇದಕ್ಕೆ ಆಧ್ಯಾತ್ಮಿಕ ಆಯಾಮವಿದೆ. ಇದನ್ನೇ ಇಷ್ಟಪಡುವವರು ಇದ್ದಾರೆ. ಇದರ ಧ್ವನಿ ನಿಮ್ಮನ್ನು ಧ್ಯಾನದತ್ತ ಕೊಂಡೊಯ್ಯುತ್ತದೆ. ಇದರಿಂದ ಸಿಗುವ ಸಾವಧಾನದ ಸ್ಥಿತಿ ಮುಖ್ಯ ಎಂದುಕೊಂಡವರು ಇದನ್ನೇ ಇಷ್ಟಪಡುತ್ತಾರೆ.

#image_title

ಸಂ: ಈ ವಾದ್ಯದ ಚರಿತ್ರೆ ಸ್ವಲ್ಪ ಹೇಳಿ.

ಜ್ಯೋತಿ ಹೆಗಡೆ: ತುಂಬ ಮೂಲದಲ್ಲಿ ಇದನ್ನು ಪರಮೇಶ್ವರ ಕಂಡುಹಿಡಿದದ್ದು ಎನ್ನುತ್ತಾರೆ. ಇದನ್ನು ಪಾರ್ವತಿಗೆ ಶಿವ ಉಡುಗೊರೆಯಾಗಿ ನೀಡಿದನಂತೆ. ಇದನ್ನು ನಾರದ ಭೂಲೋಕಕ್ಕೆ ತಂದ ಎಂಬ ಕಥೆಯಿದೆ. ತುಂಬ ಹಿಂದೆ ಇದನ್ನು ಯೋಗಿಗಳು, ಸಾಧುಗಳು ಬಳಸುತ್ತಿದ್ದರು. ಯಜ್ಞ ಯಾಗಾದಿಗಳಿಗೆ ಬಳಸುತ್ತಿದ್ದರು. ವೇದಸೂಕ್ತಗಳನ್ನು, ಶ್ಲೋಕಗಳನ್ನು ಇದರಲ್ಲಿ ನುಡಿಸುತ್ತಿದ್ದರು. ಇದರ ಧ್ವನಿ ಆಳವಾಗಿರುವುದರಿಂದ ಅದಕ್ಕೆ ಬಳಕೆಯಾಗುತ್ತಿತ್ತು. ನಂತರ ಇದನ್ನು ದೇವಾಲಯಗಳಲ್ಲಿ ನುಡಿಸಲಾಗುತ್ತಿತ್ತು. ಮೊಗಲ್‌ ಆಡಳಿತ ಬಂದ ಬಳಿಕ ಇದು ರಾಜರ ಆಸ್ಥಾನಗಳಿಗೆ ಬಂತು. ಬ್ರಿಟಿಷರು ಇಲ್ಲಿಂದ ತೆಗೆದುಕೊಂಡು ಹೋದ ರುದ್ರವೀಣೆಯನ್ನು ಲಂಡನ್‌ನ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ಅದನ್ನು ಅಲ್ಲಿ ನುಡಿಸುವವರಲಿಲ್ಲ. ನಾನು ಅದನ್ನು ನೋಡಿ ಬಂದಿದ್ದೇನೆ.

ಸಂ: ಈ ಉತ್ಸವದ ಹಿನ್ನೆಲೆಯಲ್ಲಿ ಏನು ಆಶಯವಿದೆ?

ಜ್ಯೋತಿ ಹೆಗಡೆ: ಮುಖ್ಯವಾಗಿ ರುದ್ರವೀಣೆ ನಮ್ಮ ಪರಂಪರೆ. ಅದನ್ನು ಸಂರಕ್ಷಿಸಬೇಕು ಮಾತ್ರವಲ್ಲ, ಬೆಳೆಸಬೇಕು, ಜನಪ್ರಿಯತೆಯನ್ನೂ ಹೆಚ್ಚಿಸಬೇಕು. ಅದಕ್ಕಾಗಿಯೇ ನನ್ನೂರು ಶಿರಸಿಯ ಬಿಸಿಲಕೊಪ್ಪದಲ್ಲಿ ಸ್ವಾಮಿ ರಾಮ ವೀಣಾ ಗ್ರಾಮ ಮಾಡಿ ಅಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ರುದ್ರವೀಣೆ ತರಬೇತಿ ನೀಡುತ್ತಿದ್ದೇನೆ. ಅಲ್ಲಿ ಕಲಿತು ಪಳಗಿದವರು ಈ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ರಾಜ್ಯದವರು, ಪರರಾಜ್ಯದವರು, ಪರದೇಶದವರು ಕೂಡ ಇದ್ದಾರೆ. ಜರ್ಮನಿ, ಆಸ್ಟ್ರೇಲಿಯ, ಫ್ರಾನ್ಸ್‌ನ ಕಲಾವಿದರು ಕೂಡ ಇಲ್ಲಿ ಕಲಿತಿದ್ದಾರೆ. ಹಿಮಾಲಯನ್‌ ಯೂನಿವರ್ಸಲ್‌ ಟ್ರಸ್ಟ್‌ ವತಿಯಿಂದ ಈ ಉತ್ಸವ ನಡೆಯುತ್ತಿದೆ.

ಎಲ್ಲಿ, ಯಾವಾಗ ಉತ್ಸವ?

ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

ಸಮಯ: ಸಂಜೆ 5ರಿಂದ

ಕಲಾವಿದರು: ಬಹಾವುದ್ದೀನ್‌ ಡಾಗರ್‌, ಜ್ಯೋತಿ ಹೆಗಡೆ, ಸುವೀರ್‌ ಮಿಶ್ರಾ, ಕಿರಿಸ್ಟೆನ್‌ ವಿಕೆ, ಝಹೀದ್‌ ಫರಿದಿ ದೇಸಾಯಿ, ಮೃಣಾಲಿನಿ ದೇಸಾಯಿ, ಪಂಕಜ್‌ ಮಹಾರಾಜ್‌, ಸೌರಭ್‌ ನಗ್ರೆ, ಸಿಮ್ರನ್‌ಪ್ರೀತ್‌ ಸಿಂಗ್

Exit mobile version