Site icon Vistara News

Sad Demise : NTTF ಸಂಸ್ಥೆಯ ಎಕ್ಸಿಕ್ಯುಟಿವ್‌ ವೈಸ್‌ ಚೇರ್ಮನ್ ಡಾ. ರೇಗುರಾಜ್‌ ನಮಶಿವಾಯಂ ಇನ್ನಿಲ್ಲ

Sad Demise Dr Regurajan

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆ ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನದ (Nettur Technical Training Foundation-NTTF) ಎಕ್ಸಿಕ್ಯುಟಿವ್‌ ವೈಸ್‌ ಚೇರ್ಮನ್ ಡಾ. ರೇಗುರಾಜ್‌ ನಮಶಿವಾಯಂ (Dr Reguraj Namashivayam) ಅವರು ಶಿವರಾತ್ರಿಯ ಮುನ್ನಾದಿನ ಅಂದರೆ ಮಾರ್ಚ್‌ 7ರಂದು ರಾತ್ರಿ ನಿಧನರಾದರು (Sad Demise). ಅವರಿಗೆ 82 ವರ್ಷ ಆಗಿತ್ತು.

ಡಾ. ರೇಗುರಾಜ್‌ ನಮಶಿವಾಯಂ ಅವರು ಉತ್ತಮ ಆಡಳಿತಕ್ಕೆ ಹೆಸರಾದವರು. ಅವರು ಎನ್‌ಟಿಟಿಎಫ್‌ ಸಂಸ್ಥೆಯನ್ನು (NTTF institute) ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಅದನ್ನು ಯಶಸ್ಸಿನ ಕಡೆಗೆ ನಡೆಸುವಲ್ಲಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಸಂಸ್ಥೆ ನೆನಪಿಸಿಕೊಂಡಿದೆ.

ದೂರದೃಷ್ಟಿತ್ವ ಹೊಂದಿರುವ ನಾಯಕತ್ವ, ಕೌಶಲ ಅಭಿವೃದ್ಧಿ ಬಗೆಗಿನ ಅವರ ಕಲ್ಪನೆಗಳು ಮತ್ತು ಯುವಜನತೆಯನ್ನು ಕೌಶಲಗಳಿಂದ ಗಟ್ಟಿಗೊಳಿಸಿ ವೃತ್ತಿಪರಗೊಳಿಸುವುದು ಮತ್ತು ಅವರಿಗೆ ಉತ್ತಮ ಉದ್ಯೋಗ ದೊರೆಯುವಂತೆ ಮಾಡುವ ಅವರ ಕಲ್ಪನೆಗಳು ಆಗಲೇ ಭಾರಿ ಜನಪ್ರಿಯತೆ ಪಡೆದಿದ್ದವು.

ಅವರ ನಿಧನದ ಹೊತ್ತಿನಲ್ಲಿ ಅವರ ಅಸದೃಶ ನಾಯಕತ್ವ, ಇತರರನ್ನು ಬೆಳೆಸುವ ರೀತಿ ಮತ್ತು ಅಪರೂಪದ ವ್ಯಕ್ತಿತ್ವಕ್ಕಾಗಿ ನೆನಪಿಸಿಕೊಳ್ಳುತ್ತೇವೆ. ಅವರ ಸ್ಪೂರ್ತಿಯುತ ನಾಯಕತ್ವ ಸಂಸ್ಥೆಗೆ ಮುಂದಕ್ಕೂ ಮಾರ್ಗದರ್ಶಕವಾಗಲಿದೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ : Death News: ಶಾಸಕ ರಾಜಾ ವೆಂಕಟಪ್ಪ ನಾಯಕ ಸಾವಿನ ಸುದ್ದಿ ಕೇಳಿ ಅಭಿಮಾನಿಗೆ ಹಾರ್ಟ್‌ ಅಟ್ಯಾಕ್‌

ಎಂಜಿನಿಯರಿಂಗ್‌ ಪದವೀಧರ ಡಾ. ರೇಗುರಾಜ್‌

ಡಾ. ರೇಗುರಾಜ್‌ ಅವರು ಹುಟ್ಟಿದ್ದು ತಮಿಳುನಾಡಿನ ಕೋರ್ಟಲ್ಲಂನಲ್ಲಿ, 1942ರ ಆಗಸ್ಟ್‌ 6ರಂದು. ಅವರ ತಂದೆ ಕೆ. ನಮಶಿವಾಯಂ ಅವರು ತಮಿಳುನಾಡಿನ ಹೌಸಿಂಗ್‌ ಬೋರ್ಡ್‌ನಲ್ಲಿ ಪ್ರತಿಷ್ಠಿತ ಎಂಜಿನಿಯರ್‌ ಆಗಿದ್ದರು.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಅವರು, 1963ರಿಂದ 1967ರಲ್ಲಿ ಚೆನ್ನೈನ ಸರ್ಕಾರಿ ಟೂಲ್‌ ರೂಮ್‌ನಲ್ಲಿ ಉದ್ಯೋಗಿಯಾಗಿದ್ದರು. ಆಗ ಪ್ರೆಸ್‌ ಟೂಲ್‌ಗೆ ಸಂಬಂಧಿಸಿ ಅಮೆರಿಕದ ಒಬ್ಬ ತಜ್ಞನ ಜತೆಗೆ ಕಲಿಯುವ ಅವಕಾಶ ಸಿಕ್ಕಿತು. ಬಳಿಕ ಅವರು ಯೂನಿಯನ್‌ ಕಾರ್ಬೈಡ್‌ ಕಂಪನಿಯಲ್ಲಿ ಟೂಲ್‌ ರೂಮ್‌ ಇನ್‌ಚಾರ್ಜ್‌ ಆಗಿದ್ದರು.

1967ರಲ್ಲಿ ಎನ್‌ಟಿಟಿಎಫ್‌ ನಲ್ಲಿ ತನ್ನ ವೃತ್ತಿ ಬದುಕು ಆರಂಭಿಸಿದ ಅವರು ನಿಧನರಾಗುವವರೆಗೂ ಅಂದರೆ ಸುಮಾರು 67 ವರ್ಷಗಳ ಕಾಲ ಸಂಸ್ಥೆ ಜತೆಗಿದ್ದರು. ಟೂಲ್‌ ಮೇಕಿಂಗ್‌ ಮತ್ತು ಡೈ ಮೇಕಿಂಗ್‌ನಲ್ಲಿ ತನಗೆ ಇರುವ ಅನುಭವವನ್ನು NTTF ಗೆ ಧಾರೆ ಎರೆದು ಬೆಳೆಸಿದ್ದಾರೆ ಡಾ. ರೇಗುರಾಜ್‌ ಅವರು.

ಕೇರಳದ ಸಣ್ಣ ಊರಿನಲ್ಲಿ ಒಂದು ಸಣ್ಣ ತರಬೇತಿ ಕೇಂದ್ರವಾಗಿ ಹುಟ್ಟಿದ ಎನ್‌ಟಿಟಿಎಫ್‌ ಇಂದು ದೇಶದ ಪ್ರಮುಖ ತರಬೇತಿ ಕೇಂದ್ರವಾಗಿ ಬೆಳೆಯುವಲ್ಲಿ ಡಾ. ರೇಗುರಾಜ್‌ ಅವರ ಪ್ರಯತ್ನ ದೊಡ್ಡದಿದೆ. ಇಂದು ದೇಶದಲ್ಲಿ 17 ಕೇಂದ್ರಗಳನ್ನು NTTF ಹೊಂದಿದೆ. ಎನ್‌ಟಿಟಿಎಫ್‌ನಲ್ಲಿ ಕಲಿತು ಬೆಳೆದ ಯುವಕರು ವಿಶ್ವಾದ್ಯಂತ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಎನ್‌ಟಿಟಿಎಫ್‌ ಜಗತ್ತಿನ ಹಲವು ಭಾಗಗಳಲ್ಲಿ ಜಂಟಿ ಯೋಜನೆಗಳನ್ನು ರೂಪಿಸಲು ಕಾರಣಕರ್ತರಾಗಿದ್ದಾರೆ.

ದೈಹಿಕ ನ್ಯೂನತೆಯುಳ್ಳ ಯುವಕರಿಗೆ ಸೂಕ್ತವಾದ ಕೌಶಲ ತರಬೇತಿ ನೀಡಿ ಸಬಲೀಕರಣ ಮಾಡಿದ್ದಕ್ಕಾಗಿ ಡಾ. ರೇಗುರಾಜ್‌ ಅವರಿಗೆ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದಿದ್ದಾರೆ.

Exit mobile version