Site icon Vistara News

Sam Bahadur: ತೆರೆಗೆ ಬರ್ತಿದೆ ‘ಸ್ಯಾಮ್ ಬಹದ್ದೂರ್’! ಯಾರು ಈ ಫೀಲ್ಡ್ ಮಾರ್ಷಲ್ ಮಾಣೆಕ್‌ ಶಾ?

sam

sam

ಬೆಂಗಳೂರು: ಬೆಂಗಳೂರಿನಲ್ಲಿರುವ ಮಾಣೆಕ್‌ ಶಾ ಪರೇಡ್‌ ಮೈದಾನ (Manekshaw Parade Ground) ಕನ್ನಡಿಗರಿಗೆಲ್ಲ ಚಿರ ಪರಿಚಿತ. ಪ್ರತಿ ವರ್ಷ ರಾಜ್ಯ ಮಟ್ಟದ ಸ್ವಾತಂತ್ರ್ಯೋತ್ಸವ ಸೇರಿದಂತೆ ಇಲ್ಲಿ ಬಹುಮುಖ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೀಗ ಸ್ಯಾಮ್‌ ಮಾಣೆಕ್‌ ಶಾ (Sam Manekshaw) ಜೀವನ್ನಾಧರಿಸಿ ಬಾಲಿವುಡ್‌ನಲ್ಲಿ ಚಿತ್ರವೊಂದು ತಯಾರಾಗಿದೆ. ವಿಕ್ಕಿ ಕೌಶಲ್‌ (Vicky Kaushal) ಅಭಿನಯದ ʻಸ್ಯಾಮ್ ಬಹದ್ದೂರ್ʼ (Sam Bahadur) ಚಿತ್ರ ಸ್ಯಾಮ್‌ ಮಾಣೆಕ್‌ ಶಾ ಅವರ ಸಾಹಸಗಾಥೆಯನ್ನು ತೆರೆ ಮೇಲೆ ಅನಾವರಣಗೊಳಿಸಲಿದೆ. ಡಿಸೆಂಬರ್‌ 1ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

ಖ್ಯಾತ ಭಾರತೀಯ ಮಿಲಿಟರಿ ಅಧಿಕಾರಿ ಸ್ಯಾಮ್ ಮಾಣೆಕ್ ಶಾ ಅಸಾಧಾರಣ ನಾಯಕತ್ವ ಕೌಶಲ್ಯ ಮತ್ತು ಕಾರ್ಯತಂತ್ರಕ್ಕೆ ಹೆಸರಾದವರು. ಅವರು 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹಾಗಾದರೆ ಅವರ ಹಿನ್ನಲೆ ಏನು? ಅವರ ಜೀವನದ ರೋಮಾಂಚನಕಾರಿ ಪಯಣ ಹೇಗಿತ್ತು? ಮುಂತಾದ ಆಸಕ್ತಿದಾಯಕ ವಿವರ ಇಲ್ಲಿದೆ.

ಸ್ಯಾಮ್ ಮಾಣೆಕ್ ಶಾ (ಏಪ್ರಿಲ್ 3, 1914-ಜೂನ್ 27, 2008) ಅವರನ್ನು ಸ್ಯಾಮ್ ಬಹದ್ದೂರ್ (ಸ್ಯಾಮ್ ದಿ ಬ್ರೇವ್) ಎಂದೂ ಕರೆಯಲಾಗುತ್ತದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಭಾರತೀಯ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ಬಡ್ತಿ ಪಡೆದ ಮೊದಲ ಭಾರತೀಯ ಸೇನಾಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಂಜಾಬ್‌ ಹುಟ್ಟೂರು

ಮಾಣೆಕ್ ಶಾ ಅವರು 1914ರ ಏಪ್ರಿಲ್ 3ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದರು. ಅವರು 1932ರಲ್ಲಿ ಬ್ರಿಟಿಷ್ ಭಾರತೀಯ ಸೇನೆಗೆ ಸೇರಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ವಿಶೇಷ ಸೇವೆ ಸಲ್ಲಿಸಿದರು. ಯುದ್ಧದ ನಂತರ ಅವರು ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆಯ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಾಂಗ್ಲಾದೇಶದ ರಚನೆ

1969ರಲ್ಲಿ ಮಾಣೆಕ್ ಶಾ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಭಾರತೀಯ ಸೇನೆಯನ್ನು ಆಧುನೀಕರಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು ಮತ್ತು ಪಾಕಿಸ್ತಾನದೊಂದಿಗಿನ ಯುದ್ಧಕ್ಕೆ ಸೇನೆಯನ್ನು ಅವರು ಸಜ್ಜುಗೊಳಿಸಿದರು. 1971ರಲ್ಲಿ ಪೂರ್ವ ಪಾಕಿಸ್ಥಾನದ ಬಂಗಾಳಿ ರಾಷ್ಟ್ರೀಯತಾವಾದಿ ಚಳುವಳಿಯನ್ನು ಭಾರತ ಬೆಂಬಲಿಸಿತು. ಇದರೊಂದಿಗೆ ಭಾರತ-ಪಾಕಿಸ್ಥಾನದೊಂದಿಗೆ ಯುದ್ಧ ಆರಂಭವಾಯಿತು. ಈ ಸಂದರ್ಭದಲ್ಲಿ ಮಾಣೆಕ್ ಶಾ ಭಾರತೀಯ ಸೇನೆಯನ್ನು ವಿಜಯದತ್ತ ಮುನ್ನಡೆಸಿದರು. ಇದು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು.

ಸಂದ ಗೌರವ ಅನೇಕ

ಮಾಣೆಕ್ ಶಾ ಸೇನೆಗೆ ಸಲ್ಲಿಸಿದ ಅಪ್ರತಿಮ ಸೇವೆಯನ್ನು ಗುರುತಿಸಿ ಅವರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಮಿಲಿಟರಿ ಕ್ರಾಸ್ ಪ್ರಶಸ್ತಿ ನೀಡಲಾಯಿತು. ಮಾಣೆಕ್ ಶಾ ಧೈರ್ಯ, ಕಾರ್ಯತಂತ್ರ ಮಾತ್ರವಲ್ಲ ಹಾಸ್ಯ ಪ್ರಜ್ಞೆಗೂ ಹೆಸರುವಾಸಿಯಾಗಿದ್ದರು. ಅವರು ಭಾರತದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಬಲವಾದ ಪ್ರತಿಪಾದಕರಾಗಿದ್ದರು.

ಇದನ್ನೂ ಓದಿ: Vicky Kaushal: ರಣಬೀರ್‌ ಸಿನಿಮಾ ಜತೆ ಕ್ಲ್ಯಾಶ್‌; ವಿಕ್ಕಿ ಕೌಶಲ್ ಹೇಳಿದ್ದೇನು?

ಮಾಣೆಕ್ ಶಾ ಪಾತ್ರದಲ್ಲಿ ವಿಕ್ಕಿ ಕೌಶಲ್‌

ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ʻಸ್ಯಾಮ್ ಬಹದ್ದೂರ್ʼ ಚಿತ್ರದಲ್ಲಿ ಮಾಣೆಕ್ ಶಾ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರತಿಭಾವಂತ ನಿರ್ದೇಶಕಿ ಮೇಘನಾ ಗುಲ್ಜಾರ್ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಟ್ರೈಲರ್‌ ಮೂಲಕವೇ ಕುತೂಹಲ ಮೂಡಿಸಿರುವ ಈ ಸಿನಿಮಾ ತೆರೆ ಮೇಲೆ ಯಾವ ರೀತಿಯ ಮ್ಯಾಜಿಕ್‌ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version