Site icon Vistara News

School recognition : ಮಾನ್ಯತೆ ನವೀಕರಿಸದ ಪ್ರೌಢ ಶಾಲೆಗಳ SSLC ವಿದ್ಯಾರ್ಥಿಗಳಿಗೆ ಸಂಕಷ್ಟ

School recognition1

ಬೆಂಗಳೂರು: 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ (School Recognition) ಆಗದೇ ಇರುವ ಖಾಸಗಿ ಪ್ರೌಢ ಶಾಲೆಗಳ (Private High School) ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಸದ್ಯವೇ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ -1ರ (SSLC Exam) ಕರಡು ಪ್ರವೇಶ ಪತ್ರಗಳನ್ನು (Exam Hall Ticket) ತಡೆ ಹಿಡಿದಿರುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಮೂಲಕ ತಿಳಿಸಿದೆ.

ರಾಜ್ಯದಲ್ಲಿ ಸುಮಾರು 129 ಶಾಲೆಗಳ ಮಾನ್ಯತೆ ನವೀಕರಣ ಆಗಿಲ್ಲ. ಈ ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರವೇಶಪತ್ರವನ್ನು ತಡೆ ಹಿಡಿದಿರುವುದಾಗಿ ಪ್ರಕಟಿಸಲಾಗಿದೆ.

ಮಾರ್ಚ್ \ಏಪ್ರಿಲ್ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಕ್ಕೆ ಮಕ್ಕಳ ನೊಂದಣಿ ಮಾಡಿಕೊಂಡಿರುವ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳು ಮಾನ್ಯತೆ ನವೀಕರಣ ಆಗಿದೆಯೇ / ಇಲ್ಲವೇ ಎಂಬುದರ ಬಗ್ಗೆ ಮಂಡಳಿಗೆ ಮಾಹಿತಿ ನೀಡಲು ಉಲ್ಲೇಖ-1ರಲ್ಲಿ ತಿಳಿಸಲಾಗಿರುತ್ತದೆ. ಅದರಂತೆ ಉಲ್ಲೇಖ-2ರಂತೆ ಶಾಲೆಗಳ ಮಾನ್ಯತೆ ನವೀಕರಣದ ಬಗ್ಗೆ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) | ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಂಡಲಿಗೆ ಸಲ್ಲಿಕೆಯಾಗಿರುತ್ತದೆ. ಸದರಿ ಪಟ್ಟಿಯನ್ನು ಪರಿಶೀಲಿಸಲಾಗಿ ರಾಜ್ಯದ ಒಟ್ಟು 129 ಶಾಲೆಗಳ ಮಾನ್ಯತೆ ನವೀಕರಣ ಆಗದೇ ಇರುವುದು ಕಂಡು ಬಂದಿದೆ. ಈ ಶಾಲೆಗಳ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಕರಡು ಪ್ರವೇಶ ಪತ್ರಗಳನ್ನು ತಡೆಹಿಡಿಯಲಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಾಗಿದ್ದರೆ ಮುಂದೇನು?

ಒಂದು ವೇಳೆ 129 ಶಾಲೆಗಳಲ್ಲಿ ಯಾವುದಾದರೂ ಶಾಲೆಯು ಮುಂದಿನ ದಿನಗಳಲ್ಲಿ ಮಾನ್ಯತೆ ನವೀಕರಣ ಹೊಂದಿದಲ್ಲಿ (ಆ ಶಾಲೆಯ ಮಕ್ಕಳು ಈಗಾಗಲೇ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿರಬೇಕು) ಅದರ ಮಾಹಿತಿಯನ್ನು ಮಂಡಲಿಯಿಂದ ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವುದಕ್ಕೆ 15 ದಿನಗಳ ಮುಂಚಿತವಾಗಿ ನಿಮ್ಮ ಮುಖಾಂತರ ಸಲ್ಲಿಕೆಯಾದಲ್ಲಿ ಆ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ಪರಿಶೀಲನೆಗೆ ಬಿಡುಗಡೆ ಮಾಡಲಾಗುವುದು. ಈ ಮಾಹಿತಿಯನ್ನು ಸಂಬಂಧಿಸಿದ ಶಾಲೆಗಳಿಗೆ ತಿಳಿಸಲು ಸೂಚಿಸಿದೆ.

School recognition

ಇದನ್ನೂ ಓದಿ: Exam Time Table : 5, 8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಇದರಲ್ಲಿ ನಮಾಜ್‌ ವಿವಾದ ಇಲ್ಲ!

ರಾಜ್ಯ‌ ಸರ್ಕಾರ ಶಾಲೆಗಳ ನವೀಕರಣ ಮತ್ತು ಇತರ ವಿಚಾರಗಳಲ್ಲಿ ಭಾರಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಕೆಲವು ಪ್ರೌಢ ಶಾಲೆಗಳು ಸಿಬಿಎಸ್‌ಇ ಶಿಕ್ಷಣ ಎಂದು ಘೋಷಣೆ ಮಾಡಿ ಮಾನ್ಯತೆಯನ್ನೇ ಪಡೆಯದೆ ಮಕ್ಕಳನ್ನು ಪರೀಕ್ಷೆಗೆ ಕುಳ್ಳಿರಿಸಲು ಪ್ರಯತ್ನ ನಡೆಸುತ್ತವೆ. ಆದರೆ, ಈಗ ಅಂತ ಪ್ರಯತ್ನಗಳಿಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಪೋಷಕರೇ ಹೈಸ್ಕೂಲುಗಳು ಯಾವ ಮಾನ್ಯತೆಯನ್ನು ಪಡೆದಿವೆ ಎನ್ನುವುದನ್ನು ಗಮನಿಸಿಕೊಂಡೇ ಮಕ್ಕಳನ್ನು ಶಾಲೆಗಳಿಗೆ ಸೇರ್ಪಡೆ ಮಾಡಬೇಕು ಎಂದು ಕಿವಿ ಮಾತು ಹೇಳಲಾಗಿದೆ. ಇದನ್ನು ತಾಂತ್ರಿಕ ಕಾರಣಗಳಿಗಾಗಿ ಮಾನ್ಯತೆ ಸಿಗದೆ ಹೋಗಿದ್ದರೆ ಅದನ್ನು ಸರಿಪಡಿಸುವ ಕೆಲಸವೂ ನಡೆಯಲಿದೆ.

Exit mobile version