ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ (Government Schools) ಶಿಕ್ಷಣ ಮೌಲ್ಯವರ್ಧನೆ, ಕಲಿಕಾ ಗುಣಮಟ್ಟ ಹೆಚ್ಚಳ ಮತ್ತು ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಉದ್ದೇಶದಿಂದ ಶಿಕ್ಷಕರು (School Teachers) ನಿಗದಿತ ಅವಧಿಗಿಂತ ಅರ್ಧ ಗಂಟೆ (Teachers Should attend schools half an hour Early) ಮೊದಲೇ ಶಾಲೆಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ (Education Department Order) ಮಹತ್ವದ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ 9.30ಕ್ಕೆ ಶಾಲೆ ಆರಂಭವಾಗುತ್ತದೆ. ಪಾಠ ಪ್ರವಚನ 10 ಗಂಟೆಗೆ ಆರಂಭವಾಗುತ್ತದೆ. ಆದರೆ, ಹೆಚ್ಚಿನ ಕಡೆ ಶಿಕ್ಷಕರು ಪಾಠ ಆರಂಭವಾಗುವ ಹೊತ್ತಿಗಷ್ಟೇ ಶಾಲೆ ತಲುಪುತ್ತಾರೆ. ಹೀಗಾಗಿ ಕನಿಷ್ಠ ಅಧ್ಯಯನ ಅವಧಿ ಆರಂಭವಾಗುವ 9.30ಕ್ಕೆ ಅಥವಾ ಅದಕ್ಕಿಂತಲೂ ಮೊದಲೇ ಶಾಲೆಗಳಿಗೆ ಬಂದು ಇರಬೇಕು ಎನ್ನುವುದು ಆದೇಶದ ಸಾರ ಎಂದು ತಿಳಿದುಬಂದಿದೆ. ಇದರ ಜತೆಗೆ ಒಮ್ಮೆ ಶಾಲೆಗೆ ಬಂದ ಬಳಿಕ ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿರುವ ಬಿ.ಬಿ. ಕಾವೇರಿ (B B Kaveri) ಅವರು ಕಳೆದ ಮಾರ್ಚ್ 7ರಂದು ಈ ಆದೇಶವನ್ನು ಹೊರಡಿಸಿದ್ದಾರೆ. ಅದರಲ್ಲಿ ಈಗಾಗಲೇ ನಡೆಯುತ್ತಿರುವ 5,8, 9ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗಳು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗಳನ್ನು ಕೂಡಾ ಉಲ್ಲೇಖಿಸಲಾಗಿದೆ.
ಆದೇಶದಲ್ಲಿರುವ ಪ್ರಮುಖ ಅಂಶಗಳು
- ಶಾಲೆಗಳಲ್ಲಿ ಶಿಕ್ಷಕರು ನಿಗಧಿತ ಅವಧಿಯೊಳಗೆ ದೈನಂದಿನ ಕರ್ತವ್ಯಕ್ಕೆ ಹಾಜರಾಗಿ, ಬೋಧನಾ-ಕಲಿಕಾ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಿರ್ವಹಿಸುವುದರೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಕರ್ತವ್ಯನಿರ್ವಹಿಸಲು ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ.
- 5,8 ಮತ್ತು 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆಗಳು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲು ಕ್ರಮವಹಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.
- ಪ್ರತಿ ಶಾಲೆಯ ಭೌತಿಕ ಹಾಗೂ ಮಾನವ ಸಂಪನ್ಮೂಲ, ಬೋಧನಾ ಕಲಿಕಾ ಅಂಶಗಳು, ಶಾಲಾ ಶೈಕ್ಷಣಿಕ ಪರಿಸರ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯ ಎಲ್ಲಾ ಮಕ್ಕಳು ನಿರೀಕ್ಷಿತ ಕಲಿಕಾ ಮಟ್ಟ ಹೊಂದಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಬೇಕು.
- ಶಾಲೆಯಲ್ಲಿನ ಪ್ರತಿ ಮಗುವಿನ ದೈಹಿಕ, ಮಾನಸಿಕ ಬೌದ್ಧಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಗಮನಿಸಿ, ಪ್ರಗತಿಯನ್ನು ನಿರಂತರವಾಗಿ ಅರ್ಥೈಸಿಕೊಂಡು. ಮಕ್ಕಳನ್ನು ಶೈಕ್ಷಣಿಕವಾಗಿ ಪರಿಪೂರ್ಣಗೊಳಿಸಲು ಶಿಕ್ಷಕರ ಪಾತ್ರ ಗಮನಾರ್ಹವಾಗಿದೆ.
- ಶಾಲೆಯಲ್ಲಿ ಮಕ್ಕಳ ಬೋಧನಾ-ಕಲಿಕೆ ಉತ್ತಮೀಕರಿಸಲು ಶಿಕ್ಷಕರ ಪೂರ್ವಸಿದ್ಧತೆ, ಕಲಿಕಾ ಪರಿಸರ, ಬೋಧನಾ ಪದ್ಧತಿ ಸುಧಾರಿಸುವುದು. ಬೋಧನಾ ಕಲಿಕಾ ಸಾಮಗ್ರಿಗಳನ್ನು ಸಮಯೋಚಿತವಾಗಿ ಬಳಸಿಕೊಂಡು ಕಲಿಕೆಯನ್ನು ಸದೃಡಗೊಳಿಸಬೇಕು.
- ಮಕ್ಕಳಲ್ಲಿ ಭಾಷೆ ಮತ್ತು ಮತ್ತು ಗಣಿತ ಮತ್ತು ವಿಜ್ಞಾನದ ಮೂಲ ಸಾಮರ್ಥ್ಯದ ಕಲಿಕೆಯನ್ನು ಖಚಿತಪಡಿಸಿಕೊಂಡು, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನ ಇತ್ಯಾದಿಗಳ ನಿರ್ವಹಣೆಯಲ್ಲಿ ಶಾಲೆಗಳ ಮುಖ್ಯ ಶಿಕ್ಷಕರು ಪ್ರಥಮ ಹಂತದ ಮೇಲ್ವಿಚಾರಕರಾಗಿದ್ದು. ಶಾಲೆಯಲ್ಲಿ ಮಕ್ಕಳ ಕಲಿಕಾ ಸಾರ್ವತ್ರೀಕರಣದತ್ತ ಸಾಗಲು ಶಾಲಾ ಹಂತದಲ್ಲಿಯೇ ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅತ್ಯವಶ್ಯವಿದೆ.
- – ಎಂದು ವಿವರಣೆ ನೀಡಲಾಗಿದೆ.
ಇದನ್ನೂ ಓದಿ : Public Exam Big Breaking : 5,8,9ನೇ ಕ್ಲಾಸ್ ಪಬ್ಲಿಕ್ ಪರೀಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ, ಎಕ್ಸಾಂ ಮುಂದಕ್ಕೆ
ಶಾಲೆಗೆ ಬೇಗನೆ ಬರಬೇಕು, ಅನ್ಯ ಕೆಲಸಗಳಲ್ಲಿ ತೊಡಗಬಾರದು
- ಇಲಾಖಾ ಮಾರ್ಗಸೂಚಿಯಲ್ಲಿ ಸೂಚಿಸಿರುವಂತೆ ಮುಖ್ಯ ಶಿಕ್ಷಕರು ಶಾಲೆ ಪ್ರಾರಂಭಕ್ಕೆ ಅರ್ಧ ಗಂಟೆ ಮುಂಚಿತವಾಗಿ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಾಗಿ, ಎಲ್ಲಾ ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡು ಪಾಠಬೋಧನೆ ವೇಳಾಪಟ್ಟಿಯಂತೆ ನಡೆದುಕೊಳ್ಳಬೇಕು.
- ಶಿಕ್ಷಕರು ಕಡ್ಡಾಯವಾಗಿ ಪೂರ್ವ ಮಂಜೂರಾತಿ ಪಡೆದು ರಜೆ ಮೇಲೆ ತೆರಳುವುದು.
- ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಎಲ್ಲಾ ಶಿಕ್ಷಕರು ನಿಗಧಿತ ಸಮಯದೊಳಗೆ ಕರ್ತವ್ಯಕ್ಕೆ ಹಾಜರಾಗಿ ಇಲಾಖಾ ಮಾರ್ಗಸೂಚಿಗಳು ಹಾಗೂ ಕಾಲ ಕಾಲಕ್ಕೆ ನೀಡುವ ಸೂಚನೆಗಳಂತೆ ಮಕ್ಕಳ ಗುಣಮಟ್ಟ ಶಿಕ್ಷಣವನ್ನು ಸಾಧಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು.
- ಮಧ್ಯಾಹ್ನ ಉಪಹಾರ, ಕ್ಷೀರ ಭಾಗ್ಯ ಯೋಜನೆ ಇನ್ನಿತರೇ ಕಾರ್ಯಕ್ರಮಗಳನ್ನು ಪ್ರತಿದಿನ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಮೇಲುಸ್ತುವಾರಿ ವಹಿಸಿ ಯಶಸ್ವಿಗೊಳಿಸುವುದು.
- ಶಾಲಾವಧಿ ಮುಗಿದ ನಂತರ ಮಕ್ಕಳು ಸುರಕ್ಷತೆಯಿಂದ ಶಾಲೆಯಿಂದ ನಿರ್ಗಮಿಸುವ ಬಗ್ಗೆ ಕಾಳಜಿ ವಹಿಸುವುದು ಹಾಗೂ ಶಾಲಾ ದಾಸ್ತಾನು, ಶಾಲಾ ಸಾಮಗ್ರಿ, ಸುರಕ್ಷಿತವಾಗಿ ಕಾಪಾಡಲು ಕ್ರಮವಹಿಸುವುದು.
- ಕೆಲವು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿಗಳು ಶಾಲೆಗೆ ಹಾಜರಾಗಿ, ಶಾಲಾವಧಿಯಲ್ಲೇ ಮುಖ್ಯ ಶಿಕ್ಷಕರ ಸಹಕಾರ ಪಡೆದು ಸಂಘ-ಸಂಸ್ಥೆ, ಹಾಗೂ ವೈಯಕ್ತಿಕ ಕೆಲಸಗಳು, ಖಾಸಗಿ ವ್ಯವಹಾರಗಳು, ಖಾಸಗಿ ಕಾರ್ಯಕ್ರಮಗಳಲ್ಲಿ ತೊಡಗುತ್ತಿರುವ ಬಗ್ಗೆ ದೂರು ಬಂದಿದೆ. ಇದನ್ನು ನಿಲ್ಲಿಸಬೇಕು.
- ಕೆಲವು ಶಾಲಾ ಉಸ್ತುವಾರಿ ಅಧಿಕಾರಿ, ಸಿಬ್ಬಂದಿಗಳು ಶಿಕ್ಷಕರನ್ನು ತಮ್ಮೊಂದಿಗೆ ಅನಾವಶ್ಯಕವಾಗಿ ಕರೆದೊಯ್ಯುತ್ತಿರುವ ಕುರಿತಂತೆ ದೂರುಗಳನ್ನು ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
- ಶಾಲೆಗಳಲ್ಲಿ ಮುಖ್ಯ ಶಿಕ್ಷಕರ, ಸಹ ಶಿಕ್ಷಕರ ಮತ್ತು ಸಿಬ್ಬಂದಿಗಳು ಶಾಲಾವಧಿಯಲ್ಲಿ ತರಗತಿಗಳಿಗೆ ಗೈರುಹಾಜರಾಗಿ ಮಕ್ಕಳ ಶೈಕ್ಷಣಿಕ ಹಿನ್ನೆಡೆಗೆ ಕಾರಣರಾಗಿ ಕರ್ತವ್ಯಲೋಪವೆಸಗುವ ದೂರುಗಳು ಸ್ವೀಕೃತವಾದಲ್ಲಿ ಸಂಬಂಧಿಸಿದ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಸಂಬಂಧಿಸಿದ ವ್ಯಾಪ್ತಿಯ ಮೇಲುಸ್ತುವಾರಿ ಅಧಿಕಾರಿಗಳನ್ನು ಹೊಣೆಗಾರನ್ನಾಗಿಸಿ ಗಂಭೀರ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡುತ್ತಾ ಕಟ್ಟು ನಿಟ್ಟಿನ ಸೂಚನೆ ನೀಡಿದೆ.