ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕತೋಗೂರು ಬ್ರಿಡ್ಜ್ ಮೇಲಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ಓಮಿಕಾ ಮಿಶ್ರ (28) ಆತ್ಮಹತ್ಯೆಗೆ ಯತ್ನಿಸಿದವರು.
ಜರ್ಖಾಂಡ್ ಮೂಲದ ಓಮಿಕಾ ಮಿಶ್ರ, ವಾಕಿಂಗ್ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ ನೈಸ್ ರಸ್ತೆಯ ಬ್ರಿಡ್ಜ್ ಬಳಿ ಬಂದವಳೇ ಏಕಾಏಕಿ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ರಿಡ್ಸ್ ಮೇಲಿಂದ ಬಿದ್ದ ರಭಸಕ್ಕೆ ಮುಖಕ್ಕೆ ಗಂಭೀರವಾಗಿದ್ದು, ಕೈ-ಕಾಲು ಮೂಳೆಗಳು ಮುರಿದಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಓಮಿಕಾ ಮಿಶ್ರ ಪತಿ ಟೆಕ್ ಮಹೇಂದ್ರ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Shocking News : ಗರ್ಭಿಣಿ ಅಂತ ತವರಿಗೆ ಹೋದ ಹೆಂಡ್ತಿಗೆ ಬೇರೊಬ್ಬನ ಜತೆ ಮದ್ವೆ! ಗಂಡ ಶಾಕ್!
ಧಾರವಾಡ ಕರ್ನಾಟಕ ವಿವಿ ಸೂಪರಿಂಟೆಂಡೆಂಟ್ ಸೂಸೈಡ್
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಕಾಂತ ಸಾವಳಗಿ (55) ಮೃತ ದುರ್ದೈವಿ.
ಕಳೆದ ಶನಿವಾರ ನಡೆದ ಕವಿವಿ ನೌಕರರ ಸಹಕಾರ ಸಂಘದ ಚುನಾವಣೆಯಲ್ಲೂ ಚಂದ್ರಕಾಂತ ಸಾವಳಗಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಸಾವಳಗಿ ಮನನೊಂದು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡದ ಮುರುಘಾಮಠ ಬಳಿ ಇರುವ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣಕ್ಕೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಯಾನಿಗೆ ನೇಣು ಬಿಗಿದುಕೊಂಡ ಆಟೋ ಚಾಲಕ
ಫ್ಯಾನಿಗೆ ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಜ್ಯೂನಿಯರ್ ಕಾಲೇಜು ಮುಂಭಾಗದಲ್ಲಿ ಈ ದುರ್ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ನಗರದ ನಿವಾಸಿ ವೆಂಕಟೇಶ್ (50) ಮೃತ ದುರ್ದೈವಿ.
ಸರ್.ಎಂ ಆಟೋ ನಿಲ್ದಾಣದ ಸಮೀಪವೇ ರೂಮಿನೊಂದರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್ಐ ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾವೇರಿಯಲ್ಲಿ ಸಾಲಭಾದೆಗೆ ರೈತ ಆತ್ಮಹತ್ಯೆ
ಸಾಲಭಾದೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಾಬಾಳದಲ್ಲಿ ಘಟನೆ ನಡೆದಿದೆ. ಚಂದ್ರಪ್ಪ ನಂಡುಪ್ಪ ಚನ್ನಾಪುರ ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು.
ರೈತ ಚಂದ್ರಪ್ಪ ವಿವಿಧ ಬ್ಯಾಂಕ್, ಕೈ ಸಾಲ ಸೇರಿ 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ತಮ್ಮ 4.5 ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳ ಬೆಳೆ ಕೈಕೊಟ್ಟ ಕಾರಣಕ್ಕೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಬಂಕಾಪುರ ಆಸ್ಪತ್ರೆ ಎದುರು ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಇತರೆ ರೈತರು ಸಾಥ್ ನೀಡಿ, ಪರಿಹಾರಕ್ಕೆ ಆಗ್ರಹಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.