ಬೆಂಗಳೂರು: ಶ್ರೀ ಕೃಷ್ಣ ಸಂಗೀತ ಸಭಾ, ಸಮನ್ವಯ ಕಲಾಕೇಂದ್ರ, ಜಯರಾಮಸೇವಾ ಮಂಡಳಿ, ಅನೂರು ಅನಂತಕೃಷ್ಣ ಶರ್ಮ ಫೌಂಡೇಶನ್ ಫಾರ್ ಮ್ಯೂಸಿಕ್, ಅನನ್ಯ ಜಿ.ಎಂ.ಎಲ್. ಕಲ್ಬರಲ್ ಅಕಾಡೆಮಿ, ಹಾಗೂ ಗಾನಕಲಾಭೂಷಣ ವಿ. ವೀರಭದ್ರಯ್ಯನವರ ಕುಟುಂಬದ ಸಹಯೋಗದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಯನಗರದಲ್ಲಿ ʼಗಾನಕಲಾಭೂಷಣ ಎ. ವೀರಭದ್ರಯ್ಯನವರ ಶತಮಾನೋತ್ಸವʼ (A Veerabhadrayya) ಆಯೋಜಿಸಲಾಗಿದೆ.
ಜಯನಗರದ 8ನೇ ಹಂತದ 1ನೇ ಮುಖ್ಯರಸ್ತೆಯ 40ನೇ ಅಡ್ಡ ರಸ್ತೆಯ ಜಯರಾಮ ಸೇವಾ ಮಂಡಳಿಯಲ್ಲಿ ಸಮಾರಂಭ ನಡೆಯಲಿದ್ದು, ಈ ವೇಳೆ ಶಾಸ್ತ್ರೀಯ ಸಂಗೀತ, ಗೀತೆ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ಸೆ. 9ರಂದು ಶನಿವಾರ ಸಂಜೆ 4.30ಕ್ಕೆ ಸಮಾರಂಭವನ್ನು ಸಂಗೀತ ಕಲಾರತ್ನ ಎ.ವಿ.ಆನಂದ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಾನ ಕಲಾಭೂಷಣ ಪ್ರೊ. ಡಾ. ನಾಗಮಣಿ ಶ್ರೀನಾಥ್, ಗಾನಕಲಾಶ್ರೀ ಎಚ್.ಕೆ. ವೆಂಕಟರಾಮ್ ಭಾಗವಹಿಸಲಿದ್ದಾರೆ. ಸಂಜೆ 6.15ರಿಂದ 7.15ರವರೆಗೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 7.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಆಧಾರಿತ ಚಲನಚಿತ್ರ ಗೀತೆ ಗಾಯನ ಕಾರ್ಯಕ್ರಮ ನೆರವೇರಲಿದೆ.
ಇದನ್ನೂ ಓದಿ | ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!
ಅದೇ ರೀತಿ ಸೆ.10ರಂದು ಭಾನುವಾರ ಬೆಳಗ್ಗೆ 10 ಗಂಟೆ, 11 ಗಂಟೆ ಹಾಗೂ ಮಧ್ಯಾಹ್ನ 12ಗಂಟೆಗೆ ಖ್ಯಾತ ಕಲಾವರಿದರು ಪ್ರತ್ಯೇಕ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 40 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ಹಿರಿಯ ಪಿಟೀಲು ವಾದಕರಾದ ಗಾನಕಲಾಭೂಷಣ ಎಸ್.ಶೇಷಗಿರಿರಾವ್ ಹಾಗೂ ಸಿ.ನಟರಾಜನ್ ಅವರನ್ನು ಸನ್ಮಾನಿಸಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಗಾನಕಲಾಭೂಷಣ ಡಾ. ಆರ್. ಕೆ. ಪದ್ಮನಾಭ, ಕರ್ನಾಟಕ ಕಲಾಶ್ರೀ ಡಿ.ಬಿ.ನಾಗರಾಜ್, ಡಾ. ಅನನ್ಯ ರಾಘವೇಂದ್ರ ಉಪಸ್ಥಿತರಿರಲಿದ್ದಾರೆ. ನಂತರ ಲಯಲಹರಿ ತಂಡದಿಂದ ತಾಳವಾದ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಗಾನಕಲಾಭೂಷಣ ವಿ. ವೀರಭದ್ರಯ್ಯ ಸಂಕ್ಷಿಪ್ತ ಪರಿಚಯ
ಗಾನಕಲಾಭೂಷಣ ವಿ. ವೀರಭದ್ರಯ್ಯ ಅವರು ಹಾರ್ಮೋನಿಯಂ ವಾದಕ ಅರುಣಾಚಲಪ್ಪ ಮತ್ತು ಅನ್ನಪೂರ್ಣಮ್ಮ ದಂಪತಿ ಪುತ್ರರಾಗಿ 1923ರ ಡಿಸೆಂಬರ್ 4ರಂದು ಜನಿಸಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವೀಧರರಾಗಿದ್ದಾರೆ.
ಸಂಗೀತಾಭ್ಯಾಸ: ಸಂಗೀತ ಕಲಾ ಮನೆತನದಲ್ಲಿ ಜನಿಸಿದ ಇವರು ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿ ಹಿರಿಯ ವಿದ್ವಾಂಸರಾದ ನಾರಾಯಣಸ್ವಾಮಿ ಭಾಗವತರಲ್ಲಿ ಪಿಟೀಲು ಅಭ್ಯಾಸ ಮಾಡಿ, ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು. ಗುರುಗಳ ಕಚೇರಿಯಲ್ಲಿ ಸಹವಾದಕರಾಗಿ ನುಡಿಸುತ್ತಿದ್ದರು. ತಂದೆ ಅರುಣಾಚಲಪ್ಪ ಹಾಗೂ ಗಾನಸುಧಾಕರ ಎ. ಸುಬ್ಬರಾಯರ ಜತೆ ಸಹಸ್ರಾರು ಸಂಗೀತ ಕಛೇರಿಗಳನ್ನು ನೀಡಿದ್ದರು. ತಮ್ಮ ಗುರುಬಂಧುಗಳಾದ ವಿದ್ವಾನ್ ಎಚ್. ವಿ ಕೃಷ್ಣಮೂರ್ತಿ ಹಾಗೂ ವಿದ್ವಾನ್ ಆನೂರು ಎಸ್. ರಾಮಕೃಷ್ಣರವರೊಂದಿಗೆ ಭಾರತಾದದ್ಯಂತ ಅನೇಕ ಸಭೆಗಳಲ್ಲಿ ಪಿಟೀಲು ತ್ರಯ ಕಾರ್ಯಕ್ರಮಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ ನಮ್ಮ ನಾಡಿನ ಮತ್ತು ಹೊರ ನಾಡಿನ ಅನೇಕ ವಿದ್ವಾಂಸರ ಸಂಗೀತ ಕಚೇರಿಗಳಿಗೆ ಪಿಟೀಲು ಸಹಕಾರ ನೀಡಿದ್ದರು.
ತಂದೆಯವರು ಸ್ಥಾಪಿಸಿ ಬೆಳೆಸಿದ ಸಂಗೀತ ಕಲಾವಾದ್ಯಗಳ ತಯಾರಿಕಾ ಘಟಕವಾದ “ಅರುಣಾ ಮ್ಯೂಸಿಕಲ್ಸ್” ಅನ್ನು ಭಾರತದ ಕಲಾಭಿಮಾನಿಗಳ ಗಮನ ಸೆಳೆಯುವಂತೆ ಕಾರ್ಯನಿರ್ವಹಿಸಿದರು. ವಿಜಯ ಸಂಗೀತ ಶಾಲೆಯ ಸ್ಥಾಪಕ ಕಾರ್ಯದರ್ಶಿಗಳಾಗಿ ಹಾಗೂ ವಾಣಿ ಸಂಗೀತ ವಿದ್ಯಾಲಯದ ಅಧ್ಯಕ್ಷರಾಗಿ ಅನೇಕ ಶಿಷ್ಯರಿಗೆ ಸಂಗೀತ ಪಾಠ ಹೇಳಿಕೊಟ್ಟ ಹಿರಿಮೆ ಇವರಿಗೆ ಸಲ್ಲುತ್ತದೆ.
ವಾದ್ಯ ನಿರ್ಮಾಣದಲ್ಲಿ ಕ್ರಾಂತಿಕಾರಿಯಾದ ಫೈಬರ್ ಗ್ಲಾಸ್ ಕೊಡದ ವೀಣೆ ಮತ್ತು ತಂಬೂರಿ ತಯಾರಿಕೆ, ಎಲ್ಲಾ ಸಂಗೀತಗಾರರಿಗೂ ಅವಶ್ಯವಾದ “ಪಿಚ್ ಪೈಪ್” ಗಳನ್ನೂ ಪ್ರಪ್ರಥಮಬಾರಿಗೆ ಭಾರತದಲ್ಲಿ ತಯಾರಿಸಿದ ಹೆಗ್ಗಳಿಕೆ ಇವರದ್ದು. ತಂತಿಗಳನ್ನು ಜರ್ಮನ್ ದೇಶದಿಂದ ತರಿಸುತ್ತಿದ್ದರು, ಹಾಗಾಗಿ ಇವರನ್ನು “ಕಿಂಗ್ ಆಫ್ ಸ್ಪ್ರಿಂಗ್ಸ್’ ಎಂದು ಕರೆಯುತ್ತಿದ್ದರು. ಕರ್ನಾಟಕ ಗಾನಕಲಾಪರಿಷತ್ತಿನ ಸ್ಥಾಪಕ ಸದಸ್ಯರಾಗಿ ಅನೇಕ ವರ್ಷಗಳು ಕಲಾಸೇವೆ ಸಲ್ಲಿಸಿ, 20ನೇಯ ಸಂಗೀತ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಗಾನಕಲಾಭೂಷಣ ಬಿರುದನ್ನು ಪಡೆದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಕೃಷ್ಣ ಮತ್ತು ಕೃಷ್ಣಾ ಸಂಬಂಧವೇ ಮಹಾಭಾರತದ ಪಂಚಾಂಗ; ದ್ರೌಪದಿ ಕಟ್ಟಿದ ಸೆರಗಿನ ತುಂಡೇ ರಕ್ಷಾಬಂಧನ!
ಸಂಗೀತ ಕಲಾವಿಶಾರದ, ಗಾನಕಲಾಪ್ರಪೂರ್ಣ, ನಾದಗಂಭೀರ, ಗಾನಕಲಾಪ್ರವೀಣ, ನಾದಚಿಂತಾಮಣಿ, ಗಾಯನ ಲಯ ಸಾಮ್ರಾಟ್, ಸಂಗೀತನಾದ ಕಲಾವಿತಂಸ, ಧನುರ್ವೀಣಾ ಕಲಾಭೂಷಣ, ಚಂದ್ರಹಾಸ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಹೀಗೆ ಅನೇಕ ಬಿರುದು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಹೀಗೆ ತಮ್ಮ ಇಡೀ ಜೀವನವನ್ನೇ ಸಂಗೀತ ಲೋಕಕ್ಕೆ ಸಮರ್ಪಿಸಿಕೊಂಡ ಮಹಾ ಚೇತನ ಎ. ವೀರಭದ್ರಯ್ಯನವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.