Site icon Vistara News

Shiradi Landslide: ಕೇರಳದ ಬೆನ್ನಿಗೇ ಶಿರಾಡಿ ಘಾಟಿಯಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ ಸಿಲುಕಿದ ಕಾರುಗಳು, ಟ್ಯಾಂಕರ್‌

Shiradi Landslide

ಹಾಸನ: ಕೇರಳದ ವಯನಾಡಿನಲ್ಲಿ (Wayanad Landslide) ಬೃಹತ್ ಭೂಕುಸಿತ ಸಂಭವಿಸಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಿನಲ್ಲಿಯೇ, ಹಾಸನದ ಶಿರಾಡಿ ಘಾಟಿಯಲ್ಲಿಯೂ ರಸ್ತೆಯ ಮೇಲೆ ಭಾರೀ ಭೂಕುಸಿತ (Shiradi Landslide) ಸಂಭವಿಸಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡಿದ್ದು, ಇನ್ನಷ್ಟು ಕುಸಿತದ ಆತಂಕ ಎದುರಾಗಿದೆ. ಘಾಟಿಯಲ್ಲಿ ವಾಹನ ಸಂಚಾರ ಪೂರ್ತಿ ರದ್ದುಗೊಳಿಸಲಾಗಿದೆ.

ಬೆಂಗಳೂರು- ಮಂಗಳೂರು ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಮತ್ತೆ ಬೃಹತ್‌ ಭೂಕುಸಿತವಾಗಿದೆ. ಕನಿಷ್ಠ ಎರಡು ಕಾರುಗಳು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಇದರಡಿ ಸಿಲುಕಿಕೊಂಡಿವೆ. ತಕ್ಷಣ ಸ್ಥಳದಲ್ಲಿದ್ದವರು ವಾಹನಗಳಲ್ಲಿ ಇದ್ದವರನ್ನು ಹೊರಗೆ ಎಳೆತಂದಿದ್ದಾರೆ. ಮಣ್ಣಿನಡಿ ಇನ್ನೂ ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.

ಸತತ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲೆ ಬಳಿ ಕಳೆದ ವಾರವೂ ಭೂಕುಸಿತವಾಗಿತ್ತು. ಕಳೆದ ಹದಿನೈದು ದಿನಗಳಿಂದ ಇಲ್ಲಿ ಮಣ್ಣಿನ ರಾಶಿ ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಕುಸಿದಿದೆ. ಹಲವು ಪ್ರಯಾಣಿಕರು ಕಾರಿನಲ್ಲೇ ಸಿಲುಕಿದ್ದಾರೆ. ಕಾರ್ಯಾಚರಣಾ ಸಿಬ್ಬಂದಿ ಜೆಸಿಬಿ ಮೂಲಕ‌ ಮಣ್ಣು ತೆರವು ಮಾಡುತ್ತಿದ್ದು, ಸ್ಥಳದಲ್ಲಿ ಆತಂಕ ಹೆಚ್ಚಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ನಡೆಯುವ ಭೀತಿಯಿದೆ. ಸಾಗರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನ ನಡೆಯುತ್ತಿದೆ.

ಕಳೆದ ತಿಂಗಳು ಉತ್ತರ ಕನ್ನಡದ ಅಂಕೋಲಾ ಶಿರೂರಿನಲ್ಲಿ ಗುಡ್ಡ ಕುಸಿದು ಹಲವಾರು ವಾಲಹನಗಳು ಹಾಗೂ ಜನರು ಜಲಸಮಾಧಿಯಾಗಿದ್ದರು. 11 ಜನ ಸತ್ತಿದ್ದು, ಇವರಲ್ಲಿ 8 ಜನರ ದೇಹಗಳು ದೊರೆತಿವೆ. ಇನ್ನೂ ಮೂವರು ದೇಹಗಳು ದೊರೆತಿಲ್ಲ. ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ದೇವರನಾಡು ಕೇರಳ (Kerala) ದಲ್ಲಿ ಭಾರೀ ಮಳೆಗೆ ಭೂಕುಸಿತಕ್ಕೆ (Kerala Landslide) ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 70ಕ್ಕೆ ಏರಿಕೆ ಆಗಿದ್ದು, ನೂರಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ಸಜ್ಜುಗೊಳಿಸಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳೊಂದಿಗೆ ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ ತೆರಳುತ್ತಿದೆ.

ಕರ್ನಾಟಕದ ಕೊಡಗು ಭಾಗ, ಹಾಸನ, ಚಿಕ್ಕಮಗಳೂರು ಭಾಘದ ಹಲವು ಕಡೆಗಳಲ್ಲಿ ಭೂಕುಸಿತದ ವರದಿಯಾಗುತ್ತಿದೆ. 2018ರಲ್ಲಿ ಕೊಡಗಿನಲ್ಲಿ ಭಾರೀ ಭೂಕುಸಿತ ಸಂಭವಿಸಿ ನೂರಾರು ಜನರು ಸತ್ತಿದ್ದರು. ಕೋಟ್ಯಂತರ ಆಸ್ತಿಪಾಸ್ತಿ ನಷ್ಟವಾಗಿತ್ತು. ಸಾವಿರಾರು ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಅದೇ ವರ್ಷ ಕೇರಳದಲ್ಲಿಯೂ ಜಲಪ್ರಳಯ ನಡೆದಿತ್ತು.

ಇದನ್ನೂ ಓದಿ: Wayanad Landslide: ಎಲ್ಲೆಂದರಲ್ಲಿ ಮಣ್ಣಿನ ರಾಶಿ: ಕೊಚ್ಚಿ ಹೋದ ಸೇತುವೆ, ರಸ್ತೆ: ವಯನಾಡಿನಲ್ಲಿ ಮೃತರ ಸಂಖ್ಯೆ 70ಕ್ಕೆ ಏರಿಕೆ

Exit mobile version