ಬೆಂಗಳೂರು: ನಾನು ಇಲ್ಲದೆ ಇದ್ದಿದ್ದರೆ ಕುರುಬ ಸಂಘ ಉಳಿಯುತ್ತಿರಲಿಲ್ಲ. ಯಾರಾದರೂ ಮಾರಿಕೊಂಡು ತಿಂದು ಬಿಡುತ್ತಿದ್ದರು. ಕನಕ ಗುರು ಪೀಠ ಮಾಡಿದ್ದು ನಾನು. ಆದರೆ ಬೇರೆಯವರು ನಾವು ಮಾಡಿದ್ದು ಎಂದು ಹೇಳುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಎಲ್ಲ ವರ್ಗಗಳನ್ನು ಸಮಾನವಾಗಿ ನೋಡಿದ್ದೆ. ಆದರೆ, ನನಗೂ ಕೊಲೆ ಬೆದರಿಕೆ (Death Threat) ಬಂದಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಸಂತ ನಗರದ ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕಣ್ಣು ಮುಚ್ಚಿಕೊಂಡು ಸಪೋರ್ಟ್ ಮಾಡಬೇಡಿ. ಅರ್ಹತೆ ಇದ್ದರೇ ಮಾತ್ರ ಸಪೋರ್ಟ್ ಮಾಡಿ. ನಾನು ಜಾತ್ಯತೀತನಾಗಿ ಐದು ವರ್ಷಗಳ ಸಿಎಂ ಆಗಿ ಸಮಾಜಕ್ಕೆ ಗೌರವ ತರುವ ಕೆಲಸ ಮಾಡಿದ್ದೇನೆ. ಕನಕ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ ಎಂದರು.
ಇದನ್ನೂ ಓದಿ | SCST ಐಕ್ಯತಾ ಸಮಾವೇಶ | ಬಿಜೆಪಿಯ ಮೀಸಲಾತಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ; ದಿನಾಂಕ, ಸ್ಥಳ ಫಿಕ್ಸ್
1988ರಲ್ಲಿ 500ನೇ ಕನಕ ಜಯಂತೋತ್ಸವ ಮಾಡಿದ ನಂತರ ಸಮಾಜದಲ್ಲಿ ಜಾಗೃತಿ ಮೂಡಿದೆ. ಕನಕ ಜಯಂತಿ ಎಲ್ಲಿ ನಡೆದರೂ ಹೋಗುತ್ತಿದ್ದೆ, ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಕನಕ ಗುರುಪೀಠ ಮಾಡುವಾಗ ಮೊದಲ ಸಭೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂದು ಪೀಠ ಮಾಡಲು ದುಡ್ಡು ಕೊಡಬೇಕು ಎಂದರು, ಎರಡನೇ ಸಭೆಗೆ ಆ ಗಿರಾಕಿ ಬರಲೇ ಇಲ್ಲ. ಆದರೆ ಅವ ನಮ್ಮವ ಎಂದು ನೀವು ಜೈಕಾರ ಹಾಕುತ್ತೀರಿ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ನಾನು ಓದುವಾಗ ಮಹಾರಾಜ ಹಾಸ್ಟೆಲ್‌ಗೆ ಸೇರಿಕೊಳ್ಳುತ್ತೇನೆ ಎಂದು ಕೇಳಿದೆ. ನಮ್ಮ ಅಪ್ಪ ಬೇಡ, ಅಷ್ಟು ದುಡ್ಡು ಕೊಡಲು ಆಗಲ್ಲ ಎಂದಿದ್ದರು. ನಂತರ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಎರಡು ಹೊತ್ತು ಅಡುಗೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ, ಆಗ ತಿಂಗಳಿಗೆ ಎರಡು ಹೊತ್ತು ಊಟ ಹೊಟೇಲ್‌ನಲ್ಲಿ 32 ರೂಪಾಯಿ ಇತ್ತು. ಊಟಕ್ಕಾಗಿ ಸಮಸ್ಯೆಯಾಗಿದ್ದರಿಂದ ನಾನು ಸಿಎಂ ಆದ ಮೇಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚು ಮಾಡಿದೆ. ಹಾಸ್ಟೆಲ್ ಸಿಗದೆ ಇರುವವರಿಗೆ ವಿದ್ಯಾಸಿರಿ ಯೋಜನೆ ಜಾರಿ ಮಾಡಿ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಈಗ ಬಿಜೆಪಿ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿಬಿಟ್ಟಿದೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಸಿಎಂ ಆಗಲು ಅಂಬೇಡ್ಕರ್ ಬರೆದ ಸಂವಿಧಾನ ಕಾರಣ. ಮೋದಿ ಪ್ರಧಾನಿ ಆಗಿದ್ದರೆ ಅದಕ್ಕೆ ಅಂಬೇಡ್ಕರ್ ಕಾರಣ. ಎಲ್ಲರೂ ಅಂಬೇಡ್ಕರ್ ಆಗಲು ಸಾಧ್ಯವಿಲ್ಲ, ಆದರೆ ಅಂಬೇಡ್ಕರ್ ದಾರಿಯಲ್ಲಿ ನಡೆಯಬೇಕು. ನಾನು ಸಿಎಂ ಆಗಿದ್ದಾಗ ಯಾವ ಅಧಿಕಾರಿಗೂ ಕಾನೂನು ಬಾಹಿರ ಕೆಲಸ ಮಾಡಿ ಎಂದು ಹೇಳಿಲ್ಲ, ಮುಂದೆಯೂ ಹೇಳಲ್ಲ. ಎಲ್ಲರೂ ಅಂಬೇಡ್ಕರ್ ಬಗ್ಗೆ ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಕೂಗು
ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಮಾತು ಕೇಳಿಬಂತು. ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸಿದ್ದರಾಮಯ್ಯಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಇದೆ. ಸಿದ್ದರಾಮಯ್ಯ ಬಲಿಷ್ಠ ನಾಯಕರಾಗಿರುವುದರಿಂದ ಕೂಗುಮಾರಿಗಳು ಬಲಿಷ್ಠ ಸಿದ್ದರಾಮಯ್ಯ ಮೇಲೆ ಮುಗಿಬೀಳುತ್ತಾರೆ. ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗುವ ಎಲ್ಲಾ ಅವಕಾಶ ಇದೆ. ಇವರು ಸಮಾಜಕ್ಕೆ ಸ್ವಾಭಿಮಾನ, ಧೈರ್ಯವನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾನಂದಪುರಿ ಸ್ವಾಮೀಜಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ