ಬೆಂಗಳೂರು: ನಗರದ ಪ್ರೆಸ್‌ಕ್ಲಬ್‌ನಲ್ಲಿ ಗ್ರೀನ್‌ಪೀಸ್ ಇಂಡಿಯಾ (Greenpeace India) ವತಿಯಿಂದ ‘ಲೆಟ್ಸ್ ಮೂವ್ ಬೆಂಗಳೂರು’ ನಾಗರಿಕರ ಸಮಾವೇಶ ಆಯೋಜಿಸಲಾಗಿತ್ತು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ʻಮಹಿಳೆಯರಿಗೆ ಉಚಿತ ಬಸ್ ಪ್ರಯಾಣ’ ಯೋಜನೆಯ ಸಮರ್ಪಕ ಅನುಷ್ಠಾನ, ಬಸ್ ಸೌಕರ್ಯ, ಸಂಚಾರ ದಟ್ಟಣೆ ಸಮಸ್ಯೆ ಮತ್ತಿತರರ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆದಿದ್ದು, ಜತೆಗೆ ನಗರದಲ್ಲಿ ಜಾರಿಗೆ ತರಬಹುದಾದ ಪ್ರಾಯೋಗಿಕ ಪರಿಹಾರಗಳ ಕುರಿತು ನೀತಿನಿರೂಪಕರ ಗಮನ ಸೆಳೆಯಲಾಯಿತು.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್, ಸ್ಲಂ ನಿವಾಸಿಗಳ ಒಕ್ಕೂಟ, ಪವರ್ ದಿ ಪೆಡಲ್ ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರ ಸಮುದಾಯ, ಸಂಗಮ, ಕೌನ್ಸಿಲ್ ಫಾರ್ ಆಕ್ಟಿವ್ ಮೊಬಿಲಿಟಿ ಮತ್ತು ಸಿಟಿಜನ್ಸ್ ಫಾರ್ ಸ್ಯಾಂಕಿ ಸೇರಿ ಸಿವಿಲ್ ಸೊಸೈಟಿ ಗುಂಪುಗಳು, ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂದರ್ಭದಲ್ಲಿ ಗ್ರೀನ್‌ಪೀಸ್ ಇಂಡಿಯಾ ಜನರ ಪ್ರಣಾಳಿಕೆಯಲ್ಲಿ ಸಲ್ಲಿಸಿದ್ದ ಸಾರ್ವಜನಿಕರ ಸಂಚಾರ ಸಾರಿಗೆಗೆ ಸಂಬಂಧಿಸಿದ ಬೇಡಿಕೆಗಳು ಮತ್ತು ಸರ್ಕಾರವು ಈಡೇರಿಸಿರುವ ಭರವಸೆಗಳ ಕುರಿತು ಚರ್ಚಿಸಲು ಈ ನಾಗರಿಕ ಸಮಾವೇಶವನ್ನು ಆಯೋಜಿಸಲಾಗಿತ್ತು.
ನಾಗರಿಕರು ವೈಯಕ್ತಿಕ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ, ಸೈಕಲ್ ಸವಾರಿ ಮತ್ತು ವಾಕಿಂಗ್‌ನಂತಹ ಮೋಟಾರುರಹಿತ ಸಾರಿಗೆ (ಎನ್‌ಎಂಟಿ) ಗೆ ಆದ್ಯತೆ ನೀಡಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತಮ್ಮ ಕಚೇರಿಗಳಲ್ಲಿ ಹೈಬ್ರಿಡ್ ಮಾದರಿಯ ಕೆಲಸದ ವ್ಯವಸ್ಥೆಯನ್ನು ಅನುಸರಿಸುವಂತೆ ಪ್ಯಾನೆಲಿಸ್ಟ್‌ಗಳು ಸಾರ್ವಜನಿಕರಿಗೆ ಸೂಚಿಸಿದರು. ಜತೆಗೆ ಕೊನೆಯ ನಿಲ್ದಾಣದ ಸಂಪರ್ಕ ಒದಗಿಸುವುದು, ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸುವುದು, ಪ್ರತ್ಯೇಕ ಬಸ್ ಲೇನ್‌ಗಳು ಮತ್ತು ನಗರದ ಹೊರವಲಯಕ್ಕೆ ಹೆಚ್ಚಿನ ಬಸ್‌ಗಳನ್ನು ಪರಿಚಯಿಸಲು ಸರ್ಕಾರವನ್ನು ಆಗ್ರಹಿಸಲಾಯಿತು.
ಇದನ್ನೂ ಓದಿ | Free Bus Pass: ಕೇವಲ 6 ತಿಂಗಳಲ್ಲಿ ಶ್ರಮಿಕ ವರ್ಗದ ಉಚಿತ ಬಸ್ ಪಾಸ್ ಯೋಜನೆಗೆ ತಿಲಾಂಜಲಿ
ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಳದ ಹೊರತಾಗಿಯೂ, ಬೆಂಗಳೂರಿನಲ್ಲಿ ಸಾರಿಗೆ ಸಂಚಾರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾರ್ವಜನಿಕ ಸಾರಿಗೆಯ ಪಾತ್ರವು ಸೀಮಿತವಾಗಿದೆ. ನಗರವು ಖಾಸಗಿ ವಾಹನಗಳ ಸಂಖ್ಯೆಯಲ್ಲಿ ನಗರದ ಸಾಮರ್ಥ್ಯವನ್ನೂ ಮೀರಿ ಬೆಳವಣಿಗೆಯನ್ನು ಕಂಡಿದೆ. ಇವುಗಳ ಸಂಖ್ಯೆ ಒಂದು ಕೋಟಿಯನ್ನೂ ದಾಟಿದ್ದು, ಇದು ಆಗಾಗ್ಗೆ ಸುದೀರ್ಘ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದೆ. ಮೂಲಸೌಕರ್ಯ ಹೂಡಿಕೆಯ ವಿಚಾರದಲ್ಲಿ ಸರ್ಕಾರದ ತಪ್ಪಿದ ಲೆಕ್ಕಾಚಾರವು ಈ ಬೆಳವಣಿಗೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಟೈನೇಬಲ್ ಟ್ರಾನ್ಸ್‌ಪೋರ್ಟೇಶನ್ ಲ್ಯಾಬ್‌ನ ಪ್ರೊಫೆಸರ್ ಆಶಿಶ್ ವರ್ಮಾ, “ಕಳೆದ 25 ವರ್ಷಗಳಲ್ಲಿ ಸರ್ಕಾರವು, ಫ್ಲೈಓವರ್‌ಗಳು ಮತ್ತು ಎಲಿವೇಟೆಡ್ ರಸ್ತೆಗಳಂತಹ ಕಾಂಕ್ರೀಟ್ ಆಧಾರಿತ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ ಮತ್ತು ಹೆಚ್ಚಿನ ಖಾಸಗಿ ವಾಹನಗಳ ಖರೀದಿಯನ್ನು ಉತ್ತೇಜಿಸುತ್ತಿದೆ. ಇವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಆದರೆ. ಸಂಚಾರ ದಟ್ಟಣೆಯ ಮೂಲ ಕಾರಣವನ್ನು ಪರಿಹರಿಸುವುದಿಲ್ಲ. ಇದಲ್ಲದೆ, ಈ ಯೋಜನೆಗಳಿಂದಾಗಿ ಸಾಮಾನ್ಯವಾಗಿ ಪರಿಸರ ನಾಶ, ಜನರ ಸ್ಥಳಾಂತರ ಮತ್ತು ಹಸಿರು ಸ್ಥಳಗಳ ನಾಶ ಉಂಟಾಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ಗ್ರೀನ್‌ಪೀಸ್ ಪ್ರಚಾರಕಿ ಅಮೃತಾ ನಾಯರ್ ಮಾತನಾಡಿ, ಕಾರು-ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಆದ್ಯತೆಯ ಕುರಿತು ಕಳವಳ ವ್ಯಕ್ತಪಡಿಸಿದರು. ಇದು ಸಂಚಾರ ವ್ಯವಸ್ಥೆಯನ್ನು ಪ್ರತ್ಯೇಕಿಸುತ್ತದೆ ಮತ್ತು ಖಾಸಗಿ ಸಾರಿಗೆಯನ್ನು ಪಡೆಯಲು ಸಾಧ್ಯವಾಗದ ಜನರ ಗುಂಪುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಈ ಸಂಚಾರ ವ್ಯವಸ್ಥೆ ಪಡೆಯಲು ಸಾಧ್ಯವಾಗುವುದಿಲ್ಲ. ಸಮಗ್ರ ಮಹಾನಗರ ಯೋಜನೆಯಡಿ ಡಲ್ಟ್ (DULT) ಕಲ್ಪಿಸಿರುವ 11 ಬಸ್ ಆದ್ಯತಾ ಲೇನ್‌ಗಳ ಮರುಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಗಾರ್ಮೆಂಟ್ಸ್ ಉದ್ಯೋಗಿ ಯಮುನಾ ಗಣೇಶ್ ಮಾತನಾಡಿ, ಶಕ್ತಿ ಯೋಜನೆಯು ಸಾಕಷ್ಟು ಮೆಚ್ಚುಗೆ ಪಡೆದಿದೆ. ಆದರೆ ನಗರದಲ್ಲಿ ಬಸ್‌ಗಳ ಕೊರತೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ. ಹೆಚ್ಚಿನ ಬಸ್ ಬಳಕೆದಾರರು ಮತ್ತು ಕಾರ್ಖಾನೆಗಳು ನಗರದ ಹೊರವಲಯದಲ್ಲಿದ್ದರೆ, ಬಿಎಂಟಿಸಿ ಬಸ್ ಸೇವೆಗಳು ನಗರ ಕೇಂದ್ರೀಕೃತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ನಾಗರಿಕ ಹಕ್ಕುಗಳ ಹೋರಾಟಗಾರ ಶ್ರೀನಿವಾಸ ಅಲವಿಲ್ಲಿ ಮಾತನಾಡಿ, ನಗರದ ಸುಮಾರು ಒಂದು ಕೋಟಿ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಬಿಎಂಟಿಸಿಯಲ್ಲಿರುವ 6700 ಬಸ್‌ಗಳ ಪಾಲು ಶೇ.1 ಕ್ಕಿಂತ ಕಡಿಮೆಯಿದೆ. ಇದು ಬಸ್‌ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳದ ಅಗತ್ಯವನ್ನು ಸೂಚಿಸುತ್ತದೆ. ಉತ್ತಮ ಬಸ್ ಸೇವೆ ಪಡೆಯಲು ಪ್ರತಿ ಲಕ್ಷ ಜನಸಂಖ್ಯೆಗೆ ಕನಿಷ್ಠ 120 ಬಸ್‌ಗಳ ಅಗತ್ಯವಿದೆ. ಬಸ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಇದು ಸಕಾಲ ಎಂದು ಹೇಳಿದರು.
ಉಚಿತ ಬಸ್‌ಗಳ ಹೊರತಾಗಿ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಎಲ್ಲರಿಗೂ ಪ್ರವೇಶ ಸಿಗುವಂತೆ ಮಾಡುವುದು ಹೇಗೆ ಎಂದು ತಿಳಿಯಲು ಗ್ರೀನ್‌ಪೀಸ್ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಲ್ಲಿ ಒಂದು ಸರ್ವೇ ನಡೆಸಿತು. ಅದರ ಫಲಿತಾಂಶ ಹೀಗಿದೆ.
- ಸರ್ವೇಯಲ್ಲಿ ಪಾಲ್ಗೊಂಡಿದ್ದವರು- 162 ಜನ
- ಮಹಿಳೆಯರಿಗಾಗಿ ವಿಶೇಷ ಬಸ್ಗಳು ಬೇಕು – ಶೇ.15 (24 ಜನ)
- ಕೊನೆಯ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲು ಮಿನಿ ಬಸ್‌ಗಳನ್ನು ಒದಗಿಸಿ- ಶೇ.25 (40)
- ಪ್ರತ್ಯೇಕ ಬಸ್ ಲೇನ್ಗಳನ್ನು ಒದಗಿಸುವ ಹಾಗೂ ಹೆಚ್ಚು ಬಸ್‌ಗಳನ್ನು ಒದಗಿಸುವ ಮೂಲಕ ಬಸ್ಗಾಗಿ ಕಾಯುವ ಸಮಯವನ್ನು ಕಡಿಮೆಗೊಳಿಸಿ- ಶೇ.59 (98)