Site icon Vistara News

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

SSLC Exam Result 2024 Announce

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Exam Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಮಂಡಳಿ ಅಧ್ಯಕ್ಷೆ ಎನ್. ಮಂಜು ಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲ ಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್‌ನಲ್ಲಿ https://karresults.nic.in ಮೇ 9ರ ಬೆಳಗ್ಗೆ 10.30ರ ನಂತರ ವೀಕ್ಷಿಸಬಹುದಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶವನ್ನು ತಡವಾಗಿ ಬಿಡುಗಡೆ ಮಾಡಲಾಗಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಕ್ಕೆ ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದಿದೆ. ಪಾಸಾಗಲಿ, ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪಾಸಾದರು ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತವಾಗಿದೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.25ರಿಂದ ಏ.6ರ ವರೆಗೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8,59,967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6, 31,204 ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಶೇ. 73.40 ರಷ್ಟು ಫಲಿತಾಂಶ ಬಂದಿದೆ.

ಎಸ್ಎಸ್ಎಲ್‌ಸಿ ಫಲಿತಾಂಶ ನೋಡುವುದು ಹೇಗೆ?

-ಅಧಿಕೃತ ವೆಬ್‌ಸೈಟ್‌ karresults.nic.in ಗೆ ಭೇಟಿ ನೀಡಿ
-ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
-ಹೊಸ ಲಾಗಿನ್ ಪುಟವು ತೆರೆಯುತ್ತದೆ
-ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
-ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ.
-ಅಲ್ಲಿ ಡೌನ್ಲೋಡ್ ಮಾಡುವ ಅವಕಾಶವಿದೆ
-10.30 ನಂತರ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ನೋಡಬಹುದು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version