Site icon Vistara News

Street Dogs : ಬೀದಿನಾಯಿಗಳ ಹಸಿವು ನೀಗಿಸಲು ಮುಂದಾದ ಬಿಬಿಎಂಪಿ; ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ

BBMP plans to make arrangements for food in areas where stray dogs do not get food

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ (Street dogs) ಆಹಾರ ಸಿಗದಂತಹ ಪ್ರದೇಶದಲ್ಲಿ ಆಹಾರದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿಯ ಪಶುಸಂಗೋಪನಾ ವಿಭಾಗದಿಂದ ಪ್ರಾಯೋಗಿಕವಾಗಿ ಹೊಸ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಬೀದಿನಾಯಿಗಳ ಅಟ್ಯಾಕ್‌ಗೆ ಕಾರಣ ಹಸಿವು?

ನಗರದಲ್ಲಿ ಅನೇಕ ಸ್ಥಳಗಳಲ್ಲಿ ಸಮುದಾಯ ಪ್ರಾಣಿಗಳಿಗೆ ದಿನಕ್ಕೆ ಒಂದು ಹೊತ್ತಿನ ಆಹಾರವೂ ಸಹ ಸಿಗದಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಇದರಿಂದ ಬೀದಿ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಬೀದಿ ನಾಯಿಗಳು ಸಾರ್ವಜನಿಕರಿಗೆ ಕಚ್ಚುವ ಪ್ರಕರಣಗಳು ಕಂಡಬರುತ್ತಿದ್ದು, ಅದನ್ನು ನಿಂಯಂತ್ರಿಸಬೇಕಿದೆ. ಆದ್ದರಿಂದ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲು ಪಾಲಿಕೆಯು ಪ್ರಾಣಿ ಪಾಲಕರು, ಪೌರಕಾರ್ಮಿಕರು, ಹೋಟೆಲ್ ಮಾಲಿಕರು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಇತರೆ ಆಸಕ್ತರೊಂದಿಗೆ ಸಮನ್ವಯ ಸಾಧಿಸಿ ಇದನ್ನು ಮಾಡಲಾಗುತ್ತಿದೆ.

ಯೋಜನೆಯ ಜಾರಿ ವಿಧಾನ

ಪ್ರಾಣಿಗಳಿಗೆ ಆಹಾರ ನೀಡುವ ಪ್ರಾಣಿ ಪ್ರಿಯರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ನಂತರ ಪೌರ ಕಾರ್ಮಿಕರು ಮತ್ತು ಖಾಸಗಿ ಹೋಟೆಲ್ ಮಾಲಿಕರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಆಹಾರ ನೀಡುವ ಸ್ಥಳಗಳನ್ನು ಗುರುತಿಸಿ ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡುವುದು. ಅದಾದ ಬಳಿಕ ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಆಯ್ದ ಸ್ಥಳಗಳಲ್ಲಿ ಅನುಷ್ಟಾನಗೊಳಿಸಿ ಎಲ್ಲಾ ಪಾಲುದಾರರ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುವುದು. ಯೋಜನೆ ಯಶಸ್ವಿಯಾದಲ್ಲಿ ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ಈ ಅಭಿಯಾನವನ್ನು ಅನುಷ್ಟಾನಗೊಳಿಸುವುದು ಎಂದು ಆಯಕ್ತರು ಮಾಹಿತಿ ನೀಡಿದ್ದಾರೆ.

ವಿವರವಾದ ಯೋಜನೆಯ ಶೀಘ್ರ ಬಿಡುಗಡೆ:

ಸಮುದಾಯದ ಪ್ರಾಣಿಗಳಿಗೆ ಉತ್ತಮ ಸಹಾಯ ಮಾಡಲು ಕೇರ್‌ಟೇಕರ್‌ಗಳನ್ನು ಬಲಪಡಿಸುವುದರ ಜೊತೆಗೆ, ಪ್ರಾಣಿಗಳ ಸಂರಕ್ಷಣೆ ಕಾರ್ಯಾಚರಣೆ ಹಾಗೂ ಶಸ್ತ್ರಚಿಕಿತ್ಸಾ ನಂತರದ ಆರೈಕೆ, ವೈದ್ಯಕೀಯ ಮೇಲ್ವಿಚಾರಣೆಗೆ ಅಗತ್ಯವಿರುವ ಸಂದರ್ಭಗಳಲ್ಲಿ ಪ್ರತ್ಯೇಕ ವಲಯಗಳಲ್ಲಿ ರಕ್ಷಣೆ ಮತ್ತು ಚೇತರಿಸಿಕೊಳ್ಳುವಿಕೆಯನ್ನು ಬೆಂಬಲಿಸುವ ಸಾಮರ್ಥ್ಯವನ್ನು ಪಾಲಿಕೆ ನಿರ್ಮಿಸುತ್ತಿದೆ. ಈ ಕುರಿತು ವಿವರವಾದ ಯೋಜನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.

ಪ್ರಾಣಿ ಪಾಲಕರು ನೋಂದಣಿ ಮಾಡಿಕೊಳ್ಳಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವ ಪ್ರಾಣಿ ಪಾಲಕರು ಪಾಲಿಕೆ ಪಶುಸಂಗೋಪನಾ ಇಲಾಖೆಯಿಂದ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪಶಸಂಗೋಪನೆ ವಿಬಾಗದ ಸಾಮಾಜಿಕ ಜಾಲತಾಣವಾದ X, Facebook ಮತ್ತು Instagram (@bbmp_animalhusbandry) ಪುಟಗಳಲ್ಲಿ ನೋಂದಣಿಯ ಮಾಡಿಕೊಳ್ಳುವ ಲಿಂಕ್ ಅನ್ನು ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸಲು ಪಾಲಿಕೆ ಜೊತೆ ಕೈಜೋಡಿಸುವಂತೆ ಎಲ್ಲಾ ಸಮುದಾಯ ಪ್ರಾಣಿ ಪಾಲಕರಲ್ಲಿ ಕೋರಲಾಗಿದೆ.

ನೋಂದಣಿ ಕಡ್ಡಾಯವಲ್ಲ:

ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ಪಾಲಕರ ನೋಂದಣಿಯು 2ನೇ ಅಕ್ಟೋಬರ್ 2024 ರಿಂದ ಪ್ರಾರಂಭವಾಗಲಿದ್ದು, 31ನೇ ಅಕ್ಟೋಬರ್ 2024ರವರೆಗೆ ನೊಂದಣಿಯಾಗಲು ಅವಕಾಶವಿರುತ್ತದೆ. ಪ್ರಾಣಿ ಪಾಲಕರ ನೋಂದಣಿ ಕಡ್ಡಾಯವಾಗಿರುವುದಿಲ್ಲ. ಈ ನೋಂದಣಿಯು ಅಭಿಯಾನವನ್ನು ಯೋಜಿಸಲು ಮತ್ತು ಅದನ್ನು ಸಮರ್ಥನೀಯವಾಗಿ ಡೇಟಾಬೇಸ್ ರಚಿಸುವ ದೃಷ್ಟಿಯಿಂದ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ.

ಪಾಲಿಕೆ ಜೊತೆ ಕೈ ಜೋಡಿಸಿ:

ಬೀದಿ ನಾಯಿಗಳಿಗೆ ಆಹಾರ ನೀಡುವ ಅಭಿಯಾನದ ಮೂಲಕ, ನಾಗರೀಕರಲ್ಲಿ ಸಹಾನುಭೂತಿಯ ಅರ್ಥವನ್ನು ಹಾಗೂ ಪ್ರಾಣಿಗಳೊಂದಿಗಿನ ಸಹಬಾಳ್ವೆಯ ಅನುಕೂಲವನ್ನು ಮನವರಿಕೆ ಮಾಡಲು Coexisting Champion ಆಗಿ ಪಾಲಿಕೆ ಜೊತೆ ಕೈ ಜೋಡಿಸಲು ಕೋರುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸ್ಥಳೀಯರು ತಮ್ಮ ಪ್ರದೇಶದಲ್ಲಿ ಸಮುದಾಯದ ಪ್ರಾಣಿಗಳ ಆರೈಕೆಯ ಸಾಮಾಜಿಕ ಕಾಳಜಿಯ ಕಾರ್ಯವನ್ನು ಕೈಗೊಳ್ಳಲು ಪ್ರೋತ್ಸಾಹಿಸಲು ಕೋರಿದೆ.

1533ಗೆ ಕರೆ ಮಾಡಿ:

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಪಾಲಿಕೆಯ ಪಶಸಂಗೋಪನಾ ವಿಭಾಗದಿಂದ ಸಾಕಷ್ಟು ಉಪ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಾಗರೀಕರಿಗೆ ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆಯಾದ 1533 ಗೆ ಸಂಪರ್ಕಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version