Site icon Vistara News

Student Letter to CM : ನಮಗೆ ತೀರ್ಥಪ್ರಸಾದ ಬೇಡ, ಶಾಲೆಗೆ ಹೋಗಲು ಬಸ್‌ ಬೇಕು; ಸಿಎಂಗೆ ವಿದ್ಯಾರ್ಥಿನಿ ಪತ್ರ

Student letter to CM

ಬೆಂಗಳೂರು: ನೀವು ದೇವಾಲಯಗಳಿಗೆ ಹೋಗಲು ಸಾಕಷ್ಟು ಬಸ್‌ ಬಿಡುತ್ತೀರಿ (Bus to Temple) ಆದರೆ, ಮಕ್ಕಳಿಗೆ ಶಾಲೆಗೆ ಹೋಗಲು ಸರಿಯಾದ ಬಸ್‌ ವ್ಯವಸ್ಥೆ (Bus Facility) ಮಾಡುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಎಂಟನೇ ತರಗತಿಯ ವಿದ್ಯಾರ್ಥಿನಿ (Student letter to CM), ನಮಗೆ ದೇವಸ್ಥಾನದ ತೀರ್ಥ ಪ್ರಸಾದ ಬೇಡ , ನಮಗೆ ಉನ್ನತ ವ್ಯಾಸಂಗಕ್ಕಾಗಿ ಸಾರಿಗೆ ಬಸ್‌ಗಳನ್ನು (Bus Transport to School) ವ್ಯವಸ್ಥೆ ಮಾಡಿ ಎಂದು ಕೋರಿದ್ದಾಳೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಈ ಪತ್ರವನ್ನು ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೂ ಕಳುಹಿಸಿಕೊಟ್ಟಿದ್ದಾಳೆ. ಹೀಗೆ ಪತ್ರ ಬರೆದಿರುವ ಹುಡುಗಿಯ ಹೆಸರು ವಿ.ವೈ ವರ್ಷಿಣಿ, ಎಂಟನೇ ತರಗತಿ ವಿದ್ಯಾರ್ಥಿನಿ. ಅವಳ ಡಿಮ್ಯಾಂಡ್‌ ಏನೆಂದರೆ, ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ ಬೆಂಗಳೂರಿನ ಹೋಗಲು ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಬೇಕು ಎನ್ನುವುದು.

ಇದನ್ನೂ ಓದಿ: Constitution and National Unity: ಸಂವಿಧಾನಕ್ಕೆ ಧಕ್ಕೆಯಾದ್ರೆ ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಮಲ್ಲಿಕಾರ್ಜುನ ಖರ್ಗೆ

ಹಾಗಿದ್ದರೆ ಹರ್ಷಿಣಿ ಬರೆದ ಪತ್ರದಲ್ಲಿ ಏನಿದೆ?

  1. ನಾನು ಕುಮಾರಿ ವಿ.ವೈ. ಹರ್ಷಿಣಿ, 8 ನೇ ತರಗತಿ ವಿದ್ಯಾರ್ಥಿನಿ. ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ನಾನು ಮತ್ತು ನನ್ನ ತಾಯಿ ಹಲವು ಬಾರಿ ತಮ್ಮ ಸಂಸ್ಥೆಯ ಅಧಿಕಾರಿಗಳಿಗೆ ತಾವರೆಕೆರೆಯಿಂದ ಮಾಗಡಿ ರಸ್ತೆಯ ಮುಖಾಂತರ ಶ್ರೀನಗರ ಬಸ್‌ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯ ಬಸ್‌ ಬಿಡಬೇಕೆಂದು ಮನವಿ ಮಾಡಿಕೊಂಡಿರುತ್ತೇವೆ. ಈ ಪತ್ರಕ್ಕೆ ಸಂಸ್ಥೆಯ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಿರುವುದಿಲ್ಲ.
  2. ಪ್ರತಿ ಗುರುವಾರ ಹಾಗೂ ಭಾನುವಾರ ಸುಮ್ಮನಹಳ್ಳಿಯಿಂದ ಕಡಬಗೆರೆ ಮಾರ್ಗವಾಗಿ ರಾಯರ ಕಾಮಧೇನು ದೇವಾಲಯಕ್ಕೆ ಪ್ರತಿ ಗಂಟೆಗೆ ಒಂದು ಬಸ್ ಬಿಡಲಾಗುತ್ತಿದೆ. ನಮಗೆ ದೇವಾಲಯದ ತೀರ್ಥಪ್ರಸಾದ ಬೇಡ, ನಮಗೆ ಉನ್ನತ ಶಿಕ್ಷಣಕ್ಕಾಗಿ ಸಂಸ್ಥೆಯ ಸಾರಿಗೆ ವಾಹನಗಳು ಬೇಕಾಗಿರುತ್ತದೆ.
  3. ಈ ದೇಶದ ರಾಷ್ಟ್ರಪತಿ ಮಹಿಳೆಯಾಗಿದ್ದಾರೆ.. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸುರಕ್ಷಿತ ಸಿಗುವಂತೆ ಮಾಡಿರುವುದು ಬಾಬಾಸಾಹೇಬ್‌ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಅವರ ಆಶೀರ್ವಾದವಾಗಿರುತ್ತದೆ.
  4. ಬಾಬಾಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪ್ರತಿ ಜಿಲ್ಲೆ ಮತ್ತು ತಾಲೂಕು ಹಳ್ಳಿಯ ಶಾಲಾ ಮಕ್ಕಳಿಗೆ ವಿಶೇಷ ಸಾರಿಗೆ ಬಸ್‌ಗಳನ್ನು ಆರಂಭಿಸಬೇಕಾಗಿ ತಮ್ಮಲ್ಲಿ ಕಳಕಳಿಯವಾಗಿ ಮನವಿ ಮಾಡಿಕೊಳ್ಳುತ್ತೇನೆ.

ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರಗಳು ತಲುಪಿರುವ ಸಾಧ್ಯತೆಗಳಿವೆ. ಅವರು ಯಾವ ಉತ್ತರವನ್ನು ಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

Exit mobile version