ಬೆಂಗಳೂರು: ಜನ ಓಡಾಡುವ ಪ್ರದೇಶದಲ್ಲೇ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ನಡೆದಿದೆ.
ನಲವತ್ತು ವರ್ಷದ ಮಾದೇವ ಮೃತ ವ್ಯಕ್ತಿ. ಚೆನ್ನಪಟ್ಟಣ ಮೂಲದ ಮಾದೇವನಿಗೆ ಮೂರು ಮದುವೆಯಾಗಿತ್ತು. ಕೊನೆಯ ಪತ್ನಿ ಯಶೋದಮ್ಮನ ಜೊತೆ ವಾಸವಾಗಿದ್ದ ಮಾದೇವ ಕೆಲಸವಿಲ್ಲದೆ ಕುಡಿತದ ಚಟಕ್ಕೆ ಬಿದ್ದಿದ್ದ. ಪ್ರತಿ ದಿನ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ. ಪತಿಯ ಕಿರಿಕಿರಿ ತಾಳಲಾಗದೆ ಪತ್ನಿ ಯಶೋದಮ್ಮ ಪೊಲೀಸರಿಗೆ ಹಲವು ಬಾರಿ ವಿಚಾರ ತಿಳಿಸಿ ಬುದ್ಧಿ ಹೇಳಿಸಿದ್ದಳು. ಒಂದೆರಡು ಬಾರಿ ಇದೇ ರೀತಿ ಕಿರಿಕ್ ಮಾಡಿಕೊಂಡು ಜೈಲಿಗೂ ಹೋಗಿ ಬಂದಿದ್ದ.
ಭಾನುವಾರ ಬೆಳಗಿನ ಜಾವ ಮಾದೇವ ದುಡ್ಡಿಲ್ಲ ಎಂದಾಗ ಪತ್ನಿ ತಾನು ದುಡಿದಿಟ್ಟಿದ್ದ ನೂರೈವತ್ತು ರೂಪಾಯಿ ನೀಡಿದ್ದರು. ಅದೇ ದುಡ್ಡಲ್ಲಿ ಮದ್ಯಪಾನ ಮಾಡಿ ಮತ್ತೆ ಪತ್ನಿ ಜೊತೆ ಜಗಳವಾಡಿದ್ದ. ಹೀಗಾಗಿ ಭಾನುವಾರ ಕೂಡ ಯಶೋದಮ್ಮ ಪೊಲೀಸರಿಗೆ ಕರೆ ಮಾಡಿ ಮನೆ ಬಳಿ ಕರೆಸಿಕೊಂಡಿದ್ದರು. ಪೊಲೀಸರು ಮತ್ತೆ ಮಾದೇವನಿಗೆ ಬುದ್ಧಿ ಹೇಳಿದ್ದರು. ಮಾದೇವ ಮದ್ಯದ ನಶೆಯಲ್ಲಿ ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ಬಂದು ತನ್ನ ಪಂಚೆಯಿಂದ ಸರ್ಕಲ್‌ನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Suicide Case: ಬೆಂಗಳೂರಿನಲ್ಲಿ 10 ಅಂತಸ್ತಿನ ಅಪಾರ್ಟ್‌ಮೆಂಟ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ