Site icon Vistara News

DK Shivakumar : ಸ್ವಂತಕ್ಕೆ ಸತ್ರೆ ರೈತರ ಆತ್ಮಹತ್ಯೆ ಹೇಗಾಗ್ತದೆ?; ಶಿವಾನಂದ ಪಾಟೀಲ್‌ಗೆ ದನಿಗೂಡಿಸಿದ ಡಿ.ಕೆ. ಶಿವಕುಮಾರ್

Amit Malaviya DKS

ಬೆಂಗಳೂರು: ಪ್ರೀತಿಯಲ್ಲಿ ಸಿಲುಕಿ ಆತ್ಮಹತ್ಯೆ (suicide due to love Failure) ಮಾಡಿಕೊಂಡವರು, ಮದ್ಯಪಾನ ಮಾಡಿ ಮೃತಪಟ್ಟವರನ್ನೂ ರೈತರ ಆತ್ಮಹತ್ಯೆ ಪಟ್ಟಿಗೆ ಸೇರಿಸಲಾಗುತ್ತದೆ ಎಂಬ ಕೃಷಿ ಮಾರುಕಟ್ಟೆ ಸಚಿವ (Agriculture Marketing Minister) ಶಿವಾನಂದ ಪಾಟೀಲ್‌ (Shivananda Pateel) ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದ ಬೆನ್ನಿಗೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೂಡಾ ಇದೇ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸಚಿವ ಶಿವಾನಂದ ಪಾಟೀಲ್‌ ಅವರು ಹಾವೇರಿಯಲ್ಲಿ ಈ ಹೇಳಿಕೆ ನೀಡಿದ್ದರೆ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ, ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎಂದು ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ʻಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ? ಎಲ್ಲ ಸುಳ್ಳು’ ಎಂದು ಡಿ.ಕೆ. ಶಿವಕುಮಾರ್‌ ಅವರು ಹೇಳಿರುವ ವಿಡಿಯೋ ಬಯಲಾಗಿದೆ. ಡಿಕೆ ಶಿವಕುಮಾರ್ ಅವರು ಈ ರೀತಿ ಹೇಳಿರುವ ವಿಡಿಯೋ ತುಣುಕನ್ನು ‘ಇಂಡಿಯಾ ಟುಡೆ’ ಹಂಚಿಕೊಂಡಿದೆ. ಇಂಡಿಯಾ ಟುಡೇಯ ವರದಿಯನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸಾಮಾಜಿಕ ಜಾಲತಾಣವಾದ ಎಕ್ಸ್​​​​ನಲ್ಲಿ ಹಾಕಿಕೊಂಡು ಕೆಣಕಿದ್ದಾರೆ.

ಅಮಿತ್‌ ಶಾ ಅವರ ಎಕ್ಸ್‌ ಫೋಸ್ಟ್‌ನಲ್ಲಿ ಏನಿದೆ?

ಕರ್ನಾಟಕದ ಸಚಿವರೊಬ್ಬರು ರೈತರ ಆತ್ಮಹತ್ಯೆ ನಕಲಿ ಎಂದಿದ್ದರು. ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೈತರ ಆತ್ಮಹತ್ಯೆಯನ್ನು ‘ನಕಲಿ’ ಎಂದಿದ್ದಾರೆ. ನಕಲಿ ಆತ್ಮಹತ್ಯೆಯ ನಂತರ ಪರಿಹಾರ ಪಡೆಯಲು ಬದುಕುವುದು ಹೇಗೆ? ಇದು ಕೇವಲ ವಿಲಕ್ಷಣವಾದ ಕಾಮೆಂಟ್ ಅಲ್ಲ, ರೈತರನ್ನು ಅವಹೇಳನ ಮಾಡಿದಂತಾಗಿದೆ. ಹಳ್ಳಿಯ ಜನರ ಸಂಕಷ್ಟ ಮತ್ತು ರೈತರ ಆತ್ಮಹತ್ಯೆಯನ್ನು ಕಾಂಗ್ರೆಸ್‌ ನಿರಾಕರಿಸುವಂತಿಲ್ಲ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದೇನು?

ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿದೆ ಎಂಬ ವಿಷಯ ಬಂದಾಗ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು, ನೀವು ಯಾರೇ ಸತ್ತರೂ ರೈತರ ಆತ್ಮಹತ್ಯೆ ಎಂದು ಬಿಂಬಿಸುತ್ತೀರಿ. ಹಾವು ಕಡಿದು ಸತ್ತರೂ, ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ, ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರೂ ಸಂಕಷ್ಟದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸುತ್ತೀರಿ ಎಂದು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 2015ರಲ್ಲಿ ಪರಿಹಾರವನ್ನು 5 ಲಕ್ಷ ರೂ.ಗಳಿಗೆ ಏರಿಸಿದ ಬಳಿಕವಂತೂ ಆತ್ಮಹತ್ಯೆ ಪ್ರಕರಣ ವಿಪರೀತ ಹೆಚ್ಚಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ : Farmers suicide : ಲವ್‌ ಕೇಸಲ್ಲಿ ಸತ್ತಿದ್ದೆಲ್ಲ ರೈತರ ಆತ್ಮಹತ್ಯೆ ಆಗಲ್ಲ, 5 ಲಕ್ಷ ಪರಿಹಾರಕ್ಕೆ ಸುಸೈಡ್ ಜಾಸ್ತಿ ಆಗ್ತಿದೆ ಅಂದ ಸಚಿವ!

ಶರಣಬಸಪ್ಪ ದರ್ಶನಾಪುರ ಆಕ್ಷೇಪ

ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನುವ ಶಿವಾನಂದ ಪಾಟೀಲ್‌ ಹೇಳಿಕೆಗೆ ಸಚಿವ ಶರಣಬಸಪ್ಪ ದರ್ಶನಾಪೂರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ʻʻಪರಿಹಾರಕ್ಕಾಗಿ ಹಾಗೆ ಮಾಡಿಕೊಳ್ತಾರೆ ಅನ್ನೋದು ತಪ್ಪು. ಒಮ್ಮೆ ಜೀವ ಹೋದರೆ ವಾಪಸ್ ಸಿಗೊದಿಲ್ಲ, ಏನಾದರೂ ತೊಂದರೆ ಇದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಲೆ ಏರಿಕೆಯಿಂದ ರೈತರು ಕಷ್ಟಕ್ಕೆ ಒಳಗಾಗಿರುವುದನ್ನು ನೋಡ್ತಾ ಇದ್ದೇವೆ. ಗ್ಯಾಸ್, ಎಣ್ಣೆ, ಕಾಳು ಬೆಲೆ ಏರಿಕೆಯಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆʼʼ ಎಂದು ನೆನಪಿಸಿದರು.‌

Exit mobile version