Site icon Vistara News

Sumanahalli Flyover | ಬಿರುಕು ಬಿಟ್ಟ ಸುಮನಹಳ್ಳಿ ಫ್ಲೈಓವರ್‌; ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ಬೆಂಗಳೂರು: ನಗರದ ಫ್ಲೈಓವರ್‌ಗಳು ಎಷ್ಟು ಸೇಫ್?‌ ಇಂತಹದ್ದೊಂದು ಪ್ರಶ್ನೆ ಸಹಜವಾಗಿ ಕಾಡುತ್ತದೆ. ಸುಮನಹಳ್ಳಿ ಮೇಲ್ಸೇತುವೆಯಲ್ಲಿ (Sumanahalli Flyover) ೨ನೇ ಬಾರಿ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಈಗ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಸುರಕ್ಷತೆಗೆ ಕ್ರಮವಹಿಸಲು ಮುಂದಾಗಿದೆ.

ಬಿಬಿಎಂಪಿ ಪ್ರಧಾನ ಅಭಿಯಂತರ ಬಿ.ಎಸ್.ಪ್ರಹ್ಲಾದ್ ನೇತೃತ್ವದಲ್ಲಿ ಆಡಿಟಿಂಗ್‌ ಕೆಲಸ ಶುರುವಾಗಿದೆ. ಅಲ್ಲದೆ, ಸಮಸ್ಯೆ ಕಾಣಿಸಿಕೊಂಡ ಫ್ಲೈಓವರ್‌ಗಳ ದುರಸ್ತಿ ಕಾರ್ಯವನ್ನೂ ನಡೆಸಲಿದ್ದಾರೆ.

2019ರಲ್ಲಿಯೇ ಸಲ್ಲಿಕೆಯಾಗಿತ್ತು ವರದಿ

ಬೆಂಗಳೂರಿನಲ್ಲಿ ಒಟ್ಟಾರೆ 60 ಸೇತುವೆಗಳ ಪೈಕಿ 42 ಮೇಲ್ಸೇತುವೆ, 18 ಕೆಳ ಸೇತುವೆಗಳಿವೆ. 2019ರಲ್ಲಿ 8 ವರ್ಷಕ್ಕಿಂತ ಹಳೆಯ ಫ್ಲೈಓವರ್‌ಗಳ ಸುರಕ್ಷತೆ ಸಂಬಂಧ ವರದಿ ಸಲ್ಲಿಕೆ ಆಗಿತ್ತು. ಆ ಆಡಿಟ್ ವರದಿಯ ಪ್ರಕಾರ 25 ಫ್ಲೈಓವರ್‌ಗಳಲ್ಲಿ ಸಮಸ್ಯೆ ಇದ್ದು, ಅದರಲ್ಲಿ ಎರಡು ಫ್ಲೈಓವರ್‌ ಹೆಚ್ಚು ಸಮಸ್ಯೆ ಇರುವುದು ಕಂಡು ಬಂದಿತ್ತು.

ಮೈಸೂರು ರಸ್ತೆಯ ಶಿರಸಿ ಸರ್ಕಲ್‌ನಲ್ಲಿರುವ ಫ್ಲೈಓವರ್‌ನ ಪಿಲ್ಲರ್‌ನಲ್ಲಿ ಬಿರುಕು ಕಂಡು ಬಂದಿತ್ತು. ಸೇತುವೆ ಪಕ್ಕದ ಗೋಡೆಯ ಕೆಲವೆಡೆ ಶಿಥಿಲವಾಗಿದ್ದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಸೇತುವೆ ಮೇಲ್ಭಾಗದಿಂದ ನೀರು ಹರಿದುಹೋಗುವ ಜಾಯಿಂಟ್ ಜಾಗ ಬ್ಲಾಕ್ ಆಗಿತ್ತು. ಹೀಗಾಗಿ ಸೇತುವೆ ಭಾರ ಹೊರುವ ಬೇರಿಂಗ್ ಬದಲಾವಣೆ ಮಾಡಿ, ಮಳೆ ನೀರು ಸರಾಗವಾಗಿ ಹರಿದುಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೇತುವೆ ನಿರ್ವಹಣೆ ಕಾರ್ಯ ಮಾಡಲು ಚಿತ್ರಸಹಿತ ಆಡಿಟ್ ವರದಿ ಸಲ್ಲಿಕೆ ಮಾಡಲಾಗಿತ್ತು.

ಮತ್ತೊಂದು ಎಂಇಎಸ್ ಫ್ಲೈಓವರ್ ಸಮಸ್ಯೆ ರೈಲ್ವೆ ಇಲಾಖೆ ಸರಿಪಡಿಸಿತ್ತು. ಉಳಿದಂತೆ ಫ್ಲೈಓವರ್ ಕಾಲಕಾಲಕ್ಕೆ ನಿರ್ವಹಣೆ ಕುರಿತು ವರದಿ ಸಲ್ಲಿಕೆಯಾಗಿದೆ. ಡಿಸೆಂಬರ್‌ನಲ್ಲಿ ಮತ್ತೊಂದು ಆಡಿಟ್ ವರದಿ ಬರಲಿದ್ದು, ಇನ್‌ಫ್ರಾ ಸಪೋರ್ಟ್ ಎಂಬ ಖಾಸಗಿ ಸಂಸ್ಥೆಯಿಂದ ಆಡಿಟ್ ನಡೆಯುತ್ತಿದೆ. ಆಡಿಟ್ ವರದಿ ಆಧಾರದ ಮೇಲೆ ಸೇತುವೆ ದುರಸ್ತಿ ಕಾರ್ಯವನ್ನು ಮಾಡಲಾಗುತ್ತದೆ.

ಸುಮನಹಳ್ಳಿ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ

ಸುಮನಹಳ್ಳಿ ಫ್ಲೈಓವರ್‌ನ ಸ್ಲಾಬ್‌ನಲ್ಲಿ ತೊಂದರೆ ಇರುವುದಾಗಿ 2019ರಲ್ಲಿ ಬ್ಯೂರೋ ವೆರಿಟಿಸಿ ಎಂಬ ಸಂಸ್ಥೆ ಸರ್ವೇ ನಡೆಸಿ ವರದಿ ನೀಡಿತ್ತು. ರೂಪ್ಸ್ ಸ್ಲ್ಯಾಬ್‌ನಲ್ಲಿ ತಾಂತ್ರಿಕ ತೊಂದರೆ ಇದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಈಗ ಸುಮನಹಳ್ಳಿ ಫ್ಲೈಓವರ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ತಾಂತ್ರಿಕ ತೊಂದರೆ ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಿದ್ದಾರೆ.

ಸೇಫ್‌ ಫ್ಲೈಓವರ್‌ ಯಾವುದು?

ಬಾಣಸವಾಡಿ ಮುಖ್ಯ ರಸ್ತೆಯ ಐಟಿಸಿ ಸರ್ಕಲ್‌, ರಿಚ್‌ಮಂಡ್‌ ಸರ್ಕಲ್‌ ಫ್ಲೈಓವರ್, ಲಿಂಗರಾಜಪುರ, ಯಶವಂತಪುರ, ಮತ್ತಿಕೆರೆ, ನ್ಯಾಷನಲ್‌ ಕಾಲೇಜ್‌, ಹೆಬ್ಬಾಳ ಜಂಕ್ಷನ್‌, ಆನಂದ್‌ ರಾವ್‌ ಸರ್ಕಲ್‌, ಆರ್‌ಎಂವಿ ಎಕ್ಸ್‌ಟೆನ್ಷನ್‌, ಡೈರಿ ಸರ್ಕಲ್‌, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ದೊಮ್ಮಲೂರು, ನಾಯಂಡನಹಳ್ಳಿ, ರಿಂಗ್‌ ರಸ್ತೆಯಲ್ಲಿರುವ ಎಚ್‌ಎಸ್‌ಆರ್‌ ಲೇಔಟ್‌, ಅಗರ (ರಿಂಗ್‌ ರಸ್ತೆ), ಬೆಳ್ಳಂದೂರು, ದೇವರಬೀಸನಹಳ್ಳಿ, ಕಲ್ಕೆರೆ ಫ್ಲೈಓವರ್‌ಗಳು ಸುರಕ್ಷಿತವಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Sumanahalli Flyover | ಸುಮನಹಳ್ಳಿ ಫ್ಲೈಓವರ್‌ ಮೇಲೆ ಸ್ಲ್ಯಾಬ್‌ ಪುಡಿಪುಡಿ; ಮತ್ತೊಮ್ಮೆ ಬಿರುಕು

Exit mobile version