Site icon Vistara News

Sumanahalli Flyover | ತಿಂಗಳ ದುರಸ್ತಿ ಬಳಿಕ ಸುಮನಹಳ್ಳಿ ಫ್ಲೈಓವರ್‌ ನಾಳೆಯಿಂದ ಸಂಚಾರಕ್ಕೆ ಮುಕ್ತ?

flyover

ಬೆಂಗಳೂರು: ಸೋಮವಾರದಿಂದ ಸುಮನಹಳ್ಳಿ ಫ್ಲೈಓವರ್‌ (Sumanahalli Flyover) ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ನಾಗರಬಾವಿಯಿಂದ ಗೊರಗುಂಟೆಪಾಳ್ಯವನ್ನು ಸಂಪರ್ಕಿಸುವ ರಸ್ತೆಯ ಫ್ಲೈಓವರ್‌ ಇದಾಗಿದೆ. ನೆಲ‌ ಕಾಣಿಸುವ ಮಟ್ಟಕ್ಕೆ ಕಾಂಕ್ರಿಟ್ ಸ್ಲ್ಯಾಬ್ ಕಳೆದ ತಿಂಗಳು ಕಿತ್ತು ಹೋಗಿತ್ತು. ಫ್ಲೈಓವರ್‌ ಮೇಲಿಂದ ನೆಲಕ್ಕೆ ಸಿಮೆಂಟ್ ಕಲ್ಲುಗಳು ಬೀಳುತ್ತಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಾಹನ ಓಡಾಟಕ್ಕೆ ಬ್ರೇಕ್‌ ಹಾಕಲಾಗಿತ್ತು.

ಫ್ಲೈಓವರ್‌ ಮೇಲೆ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿ, ಭಾರಿ ವಾಹನಗಳ ಓಡಾಟಕ್ಕೆ ಫ್ಲೈಓವರ್‌ ಕೆಳ ಭಾಗದ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿತ್ತು. ಪದೇಪದೆ ಫ್ಲೈಓವರ್‌ ಬಿರುಕು ಬಿಡುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸಿತ್ತು. ಜೀವಕ್ಕೆ ಅಪಾಯ ಆಗುವ ಮುಂಚೆ ದುರಸ್ತಿ ಮಾಡುವಂತೆ ಒತ್ತಾಯಗಳು ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಸೋಮವಾರ ಮತ್ತೊಮ್ಮೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನಂತರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಿದ್ದಾರೆ.

ಸುಮನಹಳ್ಳಿ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ
ಸುಮನಹಳ್ಳಿ ಫ್ಲೈಓವರ್‌ನ ಸ್ಲ್ಯಾಬ್‌ನಲ್ಲಿ ತೊಂದರೆ ಇರುವುದಾಗಿ 2019ರಲ್ಲಿ ಬ್ಯೂರೋ ವೆರ‍್ಯಾಸಿಟಿ ಎಂಬ ಸಂಸ್ಥೆ ಸರ್ವೇ ನಡೆಸಿ ವರದಿ ನೀಡಿತ್ತು. ರೂಫ್ಸ್‌ ಸ್ಲ್ಯಾಬ್‌ನಲ್ಲಿ ತಾಂತ್ರಿಕ ತೊಂದರೆ ಇದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಸುಮನಹಳ್ಳಿ ಫ್ಲೈಓವರ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆಯೇ ತಾಂತ್ರಿಕ ತೊಂದರೆ ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು.

2019 ರಲ್ಲಿಯೂ ಸುಮನಹಳ್ಳಿ ಫ್ಲೈಓವರ್‌ ಸ್ಲ್ಯಾಬ್ ಕುಸಿದಿತ್ತು. ಪರಿಣಾಮ 6 ತಿಂಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸ್ಲ್ಯಾಬ್ ಬಿದ್ದ ಪಕ್ಕದ ರಸ್ತೆಯಲ್ಲಿ ಪ್ರಧಾನಿ ಮೋದಿಗಾಗಿ ಗುಣಮಟ್ಟದ ಡಾಂಬರೀಕರಣ ಮಾಡಲಾಗಿತ್ತು. ಸ್ಲ್ಯಾಬ್ ಬಿದ್ದ ರಸ್ತೆಗೆ ಡಾಂಬರರೀಕರಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಕ್ಕೆ, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು.

ಸಿರ್ಸಿ ಫ್ಲೈಓವರ್‌ ದುರಸ್ತಿ ಶೀಘ್ರ
1998ರಲ್ಲಿ ಬಿಬಿಎಂಪಿಯು 2.68 ಕಿ.ಮೀ. ಉದ್ದದ ಸಿರ್ಸಿ ಫೈಓವರ್‌ ನಿರ್ಮಿಸಿದೆ. ಆದರೆ ಕಂಬಗಳು, ಗರ್ಡರ್ ಹಾಗೂ ಕಾಲಂಗಳಲ್ಲಿ ಬಿರುಕು ಬಿಟ್ಟಿದೆ.ಕೂಡಲೇ ಸರಿಪಡಿಸುವುದಕ್ಕೆ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ದುರಸ್ತಿ ಕಾಮಗಾರಿಗೆ 15 ರಿಂದ ಕೋಟಿ 20 ಅನುದಾನ ಬೇಕಿದೆ. ನಿರ್ವಹಣೆಗಾಗಿ ಟೆಂಡರ್ ನೀಡುವುದಕ್ಕೆ ಬಿಬಿಎಂಪಿಯು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ | Sumanahalli Flyover | ಬಿರುಕು ಬಿಟ್ಟ ಸುಮನಹಳ್ಳಿ ಫ್ಲೈಓವರ್‌; ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

Exit mobile version