ಬೆಂಗಳೂರು: ಮನುಷ್ಯನ ಎಲ್ಲ ಸಾಧನೆಗೂ ಪೂರಕವಾಗಿ ಆರೋಗ್ಯ ಸ್ಥಿರತೆ ಮುಖ್ಯವಾದುದು. ಸಮರ್ಥ ಚಿಕಿತ್ಸೆಯ ಮೂಲಕ ಸುಲಲಿತವಾಗಿ ಬದುಕನ್ನು ನಿರ್ವಹಿಸುವ ಆಧುನಿಕ ವ್ಯವಸ್ಥೆಗಳು ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಅತ್ಯುಚ್ಚ ರೀತಿಯಲ್ಲಿ ಲಭಿಸುವ ನೂತನ ಪರಿಕಲ್ಪನೆಯ ರಾಷ್ಟ್ರೋತ್ಥಾನ ಪರಿಷತ್‌ನ ಆಸ್ಪತ್ರೆ (Rashtrotthana parishat) ಸಾಕಾರಗೊಂಡಿರುವುದು ಚಿಕಿತ್ಸಾ ಕ್ಷೇತ್ರದ ಹೊಸ ಭರವಸೆ ಎಂದು ಮೈಸೂರು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ನಗರದ ರಾಜರಾಜೇಶ್ವರಿ ನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ನೂತನವಾಗಿ ನಿರ್ಮಿಸಿರುವ ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಸಾಮಾಜಿಕ ಪರಿಕಲ್ಪನೆಯಲ್ಲಿ ಸಮಾಜಕ್ಕೆ ನೀಡುತ್ತಿರುವ ಬಹು ಆಯಾಮಗಳ ಕೊಡುಗೆಗಳು ಎಂದಿಗೂ ಸ್ತುತ್ಯರ್ಹವಾದುದು. ಈ ಮೂಲಕ ರೂಪುಗೊಂಡ ಹಲವಾರು ಮಹತ್ತರ ರಾಷ್ಟ್ರಾರಾಧಕರ ಪೈಕಿ ಮೈ.ಚ. ಜಯದೇವ ಅವರು ಪೂರ್ಣ ಬದುಕನ್ನು ರಾಷ್ಟ್ರ ಸೇವೆಗೆ ಮುಡಿಪಾಗಿಟ್ಟವರು. ಸರಳ ಬದುಕು, ವ್ಯಕ್ತಿತ್ವದ ಮೂಲಕ ಮಾದರಿಯಾಗಿದ್ದವರು. ಯುವ ಸಮಾಜದಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸುವಲ್ಲಿ ಅವರ ಸೇವೆ ಮಹತ್ತರ. ಅವರ ಸ್ಮರಣಾರ್ಥ ಈ ಆಸ್ಪತ್ರೆ ರೂಪುಗೊಂಡಿರುವುದು ಸ್ತುತ್ಯರ್ಹ.ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯ ಸಿಗುವ ಆಸ್ಪತ್ರೆಗಳ ಪಟ್ಟಿಗೆ ರಾಷ್ಟ್ರೋತ್ಥಾನ ಆಸ್ಪತ್ರೆಯ ಸೇರ್ಪಡೆಯಾಗಿ ಜನಸಾಮಾನ್ಯರಿಗೆ ಸುಲಲಿತ ಚಿಕಿತ್ಸೆ ಲಭಿಸುವಂತಾಗಬೇಕು ಎಂದು ಆಶಿಸಿದರು.
ಇದನ್ನೂ ಓದಿ | Prof. K S Rangappa | ಮೈಸೂರು ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪಗೆ ವಿಜ್ಞಾನ ಕ್ಷೇತ್ರದ ಜಾಗತಿಕ ಫೆಲೋಶಿಪ್
ಮುಖ್ಯ ಅತಿಥಿ ಇನ್ಫೋಸಿಸ್ ಫೌಂಡೇಶನ್‌ನ ಸಂಸ್ಥಾಪಕಿ, ಮೂರ್ತಿ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ರಾಷ್ಟ್ರೋತ್ಥಾನದ ಹತ್ತು ಹಲವು ಯೋಜನೆಗಳು ಸ್ತುತ್ಯರ್ಹವಾದುದು. ಕಳೆದ 35 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ರಾಷ್ಟ್ರೋತ್ಥಾನದೊಂದಿಗಿನ ಸಂಬಂಧ ಗಮನಾರ್ಹ. ಈ ಆಸ್ಪತ್ರೆ ಆರಂಭವಾಗಿರುವುದರಿಂದ ಮೈ.ಚ.ಜಯದೇವರ ಆತ್ಮ ತೃಪ್ತಿಹೊಂದುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಮಹಿಳೆಯರ ಆರೋಗ್ಯ ಸಂರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಳಿಕೆಯ ಒಂದಂಶವನ್ನು ದಾನ ಮಾಡುವ ಮನೋಭಾವ ಬೆಳೆಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಂಗಳೂರು ನಾರಾಯಣ ಹೆಲ್ತ್‌ನ ಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಆಸ್ಪತ್ರೆ ನಿರ್ಮಾಣ, ಆರೋಗ್ಯ ಕ್ಷೇತ್ರದ ನಿರ್ವಹಣೆ ಜಗತ್ತಿನ ಅತಿ ಸವಾಲಿನ ಮತ್ತು ಮಹತ್ತರ ಕ್ಷೇತ್ರವಾಗಿ ಬೆಳೆದಿದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತ ಜಗತ್ತಿನ ಅತ್ಯುತ್ತಮ ಸ್ವಾವಲಂಬಿ ಚಿಕಿತ್ಸಾ ಸೌಲಭ್ಯಗಳ ರಾಷ್ಟ್ರವಾಗಿ ಮೂಡಿಬರಲಿದೆ. ಜಗತ್ತಿನಾದ್ಯಂತ ಭಾರತೀಯ ಮೂಲದ ನಿಪುಣ ವೈದ್ಯರು ಅದ್ವಿತೀಯ ಸೇವೆ ನೀಡುತ್ತಿರುವುದು ಭಾರತೀಯ ಜ್ಞಾನಪರಂಪರೆ, ಸಂಶೋಧನೆ, ಸಂವೇದನೆಯ ಸಂಕೇತ. ಆರೋಗ್ಯ ಕ್ಷೇತ್ರದ ದಾದಿಯರ ಸೇವಾ ನಿರತರೆಲ್ಲ ಬಹುಪಾಲು ಭಾರತೀಯರೆಂಬುದು ಹೆಮ್ಮೆ ತಂದಿದೆ. ಆಯುಷ್ಮಾನ್ ಭಾರತ ಯೋಜನೆಯ ಮೂಲಕ ಸಾಮಾನ್ಯ ರೋಗಿಗಳಿಗೂ ಅತ್ಯುತ್ತಮ ಚಿಕಿತ್ಸೆ ಸೌಲಭ್ಯಗಳು ಲಭಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಸಮಾಜದ ಆರೋಗ್ಯ ಸಂರಕ್ಷಣೆಯಲ್ಲಿ ರಾಷ್ಟ್ರೋತ್ಥಾನ ನಿರ್ವಹಿಸುತ್ತಿರುವ ಅಮೂಲ್ಯ ಕೊಡುಗೆಗೆ ಜನರ ಸ್ವಾಥ್ಯ ನಿರ್ವಹಣೆಯ ನಿಟ್ಟಿನಲ್ಲೂ ತೊಡಗಿಕೊಂಡಿರುವುದು ಈ ಮೂಲಕ ಸಾಕಾರಗೊಂಡಿದೆ. ಸೇವೆ, ಶಿಕ್ಷಣ, ಜಾಗೃತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್, ಅದರ ಚೇತನರಾಗಿದ್ದ ಮೈ.ಚ ಜಯದೇವರ ಸ್ಮರಣಾರ್ಥ ಆರಂಭಿಸಲಾದ ಈ ಆಸ್ಪತ್ರೆ ವ್ಯಾಪಕ ಕ್ರಾಂತಿ ಸೃಷ್ಟಿಸಲಿದೆ ಎಂದರು.
ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ಸಾಗಿಬಂದ ಸುದೀರ್ಘ ಪಥದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ. ಕುಮಾರ್ ಉದ್ಘಾಟನೆಗೊಂಡ ರಾಷ್ಟ್ರೋತ್ಥಾನ ಆಸ್ಪತ್ರೆ ಮೂಡಿಬಂದ ಪರಿಕಲ್ಪನೆ, ಉದ್ದೇಶಗಳ ಬಗ್ಗೆ ವಿವರಿಸಿದರು. ಸುಧೀರ್ ಪೈ ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ವಿವರಿಸಿದರೆ, ಸಮಗ್ರ ಚಿಕಿತ್ಸೆಯ ಬಗ್ಗೆ ಡಾ. ಸಂಧ್ಯಾ ರವಿ ಮಾಹಿತಿ ನೀಡಿದರು. ಶೃಂಗೇರಿ ಮಠದ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಅನುಗ್ರಹ ಸಂದೇಶಗಳ ವೀಡಿಯೋಗಳನ್ನು ಪ್ರದರ್ಶಿಸಲಾಯಿತು.
ಆಸ್ಪತ್ರೆ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಸುಧೀರ್ ಪೈ, ಡಾ. ಕಿಶೋರ್, ಎಸ್. ವಿ.ಎಸ್. ಸುಬ್ರಹ್ಮಣ್ಯ ಗುಪ್ತ, ಡಾ. ಶ್ರೀನಾಥ್, ಸಲಹಾ ಮಂಡಳಿ ಸದಸ್ಯ, ಡಾ. ಎಚ್ ಆರ್. ನಾಗೇಂದ್ರ, ಡಾ. ಬಿ.ಎನ್.ಗಂಗಾಧರ್, ಡಾ. ನರೇಶ್ ಭಟ್, ಡಾ. ಸರಳರೇಖ, ಡಾ. ಆರ್ ನಾಗರತ್ನ, ಡಾ. ಸಂಧ್ಯಾ ನಂಜುಡಯ್ಯ, ಡಾ. ಲತಾ ವೆಂಕಟರಾಮನ್, ಡಾ. ತಿಮ್ಮಪ್ಪ ಹೆಗಡೆ, ಡಾ. ರವೀಶ್, ಡಾ. ಟಿ.ಎನ್. ಶ್ರೀಧರ್, ಡಾ. ಕೆ.ಎಸ್.ಸತೀಶ್, ಡಾ. ಶೇಖರ ಪಾಟೀಲ್, ಡಾ. ವತ್ಸಲ, ಡಾ. ದೀಪಕ್ ಹಳದೀಪುರ್, ಮಹದೇವ ಅಯ್ಯರ್, ಡಾ. ಗಿರಿಧರ ಕಜೆ, ಡಾ. ಬಿ. ಟಿ. ರುದ್ರೇಶ್, ಸಂಘದ ಪ್ರಮುಖರಾದ ಮುಕುಂದ, ವಿ. ನಾಗರಾಜ್, ನಾ.ತಿಪ್ಪೇಸ್ವಾಮಿ, ಸುಧೀರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ, ಸಚಿವರಾದ ಸುಧಾಕರ್, ಆರಗ ಜ್ಞಾನೇಂದ್ರ, ಡಾ. ಅಶ್ವತ್ಥನಾರಾಯಣ, ಮುನಿರತ್ನ, ರಾಷ್ಟ್ರೋತ್ಥಾನ ಪರಿಷತ್ ಹಿರಿಯ, ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕ ನಾಡೋಜ ಎಸ್. ಆರ್. ರಾಮಸ್ವಾಮಿ, ಪ್ರಮುಖರಾದ ಅಶೋಕ್, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಪರಿಷತ್ ಕೋಶಾಧ್ಯಕ್ಷ ಕೆ.ಎಸ್. ನಾರಾಯಣ ಸ್ವಾಗತಿಸಿ, ಡಾ. ಕಿಶೋರ್ ಕುಮಾರ್ ವಂದಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಶ್ರೀ ವಿಘ್ನೇಶ್ವರ ಭಟ್ ನಿರೂಪಿಸಿದರು. ಕು. ಮೈಥಿಲಿ ಪ್ರಾರ್ಥನಾಗೀತೆ ಹಾಡಿದರು.
ಇದನ್ನೂ ಓದಿ | Aero India 2023 | ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಪರಿಶೀಲಿಸಿದ ರಕ್ಷಣಾ ಸಚಿವಾಲಯದ ಅಧಿಕಾರಿಗಳ ತಂಡ