Site icon Vistara News

Sydney Kannada Sangha | ಸಿಡ್ನಿ ಕನ್ನಡ ಸಂಘದಿಂದ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ

Sydney Kannada Sangha

ಸಿಡ್ನಿ: ಪ್ರತಿ ವರ್ಷದಂತೆ ಈ ವರ್ಷವೂ ಸಿಡ್ನಿ ಕನ್ನಡ ಸಂಘದಿಂದ(Sydney Kannada Sangha) ನವೆಂಬರ್‌ 5ರಂದು ಇಲ್ಲಿನ ಎಪ್ಪಿಂಗ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪ್ರತಿಭಾವಂತ ಸ್ಥಳೀಯ ಕಲಾವಿದರ ಗಾಯನ ಹಾಗೂ ನೃತ್ಯ ಮೆರುಗು ನೀಡಿತು.

ಸಂಘದಿಂದ ಕಾರ್ಯಕ್ರಮದ ಪೂರ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ಡಾ. ನಾಗಮ್ಮ ಪ್ರಕಾಶ್ ಮತ್ತು ತಂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು. ಕಾರ್ಯದರ್ಶಿಗಳಾದ ವೇದಾ ದೇಸಾಯಿ ಅವರು ಸಭಿಕರನ್ನು ಸ್ವಾಗತಿಸಿದರು.

ಇದನ್ನೂ ಓದಿ | Indian Passport | ಪಾಸ್​ಪೋರ್ಟ್​​ನಲ್ಲಿ ಪೂರ್ಣ ಹೆಸರು ಇಲ್ಲದ ಭಾರತೀಯರಿಗೆ ಈ ದೇಶಕ್ಕೆ ಪ್ರಯಾಣಿಸಲು ಇಲ್ಲ ಅವಕಾಶ

ದೀಪ್ತಿ ಭಟ್‌ ಮತ್ತು ಭಾಸ್ಕರ್ ಅವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅತಿಥಿ ಜೋಡಿ ಮೆಕೆ ಅವರು ಕನ್ನಡ ದೀವಿಗೆಯನ್ನು ಬೆಳಗಿಸಿದರು.

ಸಿಡ್ನಿ ಕನ್ನಡ ಸಂಘದ ಅಧ್ಯಕ್ಷೆ ನಂದಾ ಶಿರೋಳ್, ಉಪಾಧ್ಯಕ್ಷೆ ಭಾಗ್ಯಾ ಶಂಕರ್‌, ಕಾರ್ಯದರ್ಶಿಗಳಾದ ವೇದಾ ದೇಸಾಯಿ ಹಾಗೂ ಟ್ರಸ್ಟಿಗಳಾದ ಓಂಕಾರಸ್ವಾಮಿ ಗೊಮ್ಮೇನಹಳ್ಳಿ, ಸ್ಯಾಮ್ ಗೋಪಿನಾಥ್ ಭಾಗವಹಿಸಿದ್ದರು. ಕನ್ನಡಾಭಿಮಾನಿಗಳು ಎದ್ದು ನಿಂತು ನಾಡಗೀತೆಗೆ ಗೌರವ ಸಲ್ಲಿಸಿದರು.

ಸಿಡ್ನಿ ಕನ್ನಡ ಸಂಘದ ಅಧ್ಯಕ್ಷೆ ನಂದಾ ಶಿರೋಳ ಸಭೆಯನ್ನುದ್ದೇಶಿಸಿ ಮಾತನಾಡಿ, ಸಿಡ್ನಿ ಕನ್ನಡ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು. ಇದರ ಆಧಾರಸ್ತಂಭವಾಗಿ ದುಡಿದ ಎಲ್ಲರಿಗೂ ಅಭಿನಂದಿಸಿದರು. ಮುಖ್ಯ ಅತಿಥಿ ಜೋಡಿ ಮೆಕೆ ಕನ್ನಡ ಸಭಿಕರನ್ನು ಉದ್ದೇಶಿಸಿ ಆತ್ಮೀಯವಾಗಿ ಮಾತನಾಡಿದರು. ಆಸ್ಟ್ರೇಲಿಯಾಗೆ ಕನ್ನಡಿಗರ ಅಪಾರ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘವು ಇತ್ತೀಚಿಗಷ್ಟೇ ಅಗಲಿದ ಪ್ರತಿಭಾವಂತ ಕನ್ನಡದ ಕಲಾವಿದರಿಗೆ ನಮನ ಸಲ್ಲಿಸಿತು. ನಗುಮುಖದ ಸರದಾರ ಪುನೀತ್ ರಾಜಕುಮಾರ್, ಮಗಳು ಜಾನಕಿ ಖ್ಯಾತಿಯ ಮಂಡ್ಯ ರವಿ ಹಾಗೂ ಸಂಚಾರಿ ವಿಜಯ್ ಅವರಿಗೆ ಅತ್ಯಂತ ಗೌರವದಿಂದ ಶ್ರದ್ಧಾಂಜಲಿಯನ್ನು ಸಲ್ಲಿಸಿತು.

ಕನ್ನಡಕ್ಕೆ ಸಲ್ಲಿಸಿರುವ ಅಪಾರ ಕೊಡುಗೆಯನ್ನು ಸ್ಮರಿಸಿ ಪ್ರೊಫೆಸರ್ ಸಿಡ್ನಿ ಶ್ರೀನಿವಾಸ ಅವರನ್ನು ಸಿಡ್ನಿ ಕನ್ನಡ ಸಂಘದ ಅಧ್ಯಕ್ಷೆ ನಂದಾ ಶಿರೋಳ್ ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಗೀತಾ ಗೋಪಿನಾಥ ಅವರು ನಡೆಸಿಕೊಟ್ಟರು. ನಂತರ ಸನ್ಮಾನಿತ ಪ್ರೊಫೆಸರ್ ಸಿಡ್ನಿ ಶ್ರೀನಿವಾಸ ಅವರು ಮಾತನಾಡಿ, ಅವರ ಸ್ವಕೃತಿ ಪ್ರಸ್ತಕಗಳನ್ನು ಕನ್ನಡ ಸಂಘಕ್ಕೆ ಕೊಡುಗೆಯಾಗಿ ನೀಡಿದರು.

ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಪುಟಾಣಿಗಳ ಭರತನಾಟ್ಯ, ಜಾನಪದ ನೃತ್ಯ, ಕೊಡವ ನೃತ್ಯ, ಗಾಯನ, ಹಾಸ್ಯ, ಹರಟೆ ಇನ್ನಿತರ ಕಾರ್ಯಕ್ರಮಗಳು ನಡೆದವು.

ಸಂಘದ ಉಪಾಧ್ಯಕ್ಷೆ ಭಾಗ್ಯಾ ಶಂಕರ್ ವಂದನಾರ್ಪಣೆ ಮಾಡಿದರು. ಅಮೃತ ಮಹೋತ್ಸವದ ನೆನಪಿನಲ್ಲಿ ಭಾರತದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

(ವರದಿ: ದೀಪ್ತಿ ಭಟ್, ಚಿತ್ರಗಳು: ಅನಂತನಾಗ್‌ ಭಟ್)

ಇದನ್ನೂ ಓದಿ | Anoushka Sunak Kuchipudi | ಲಂಡನ್‌ನಲ್ಲಿ ಕೇರಳದ ಕೂಚಿಪುಡಿ ನೃತ್ಯ ಮಾಡಿದ ರಿಷಿ ಸುನಕ್‌ ಪುತ್ರಿ

Exit mobile version