ಬೆಂಗಳೂರು: ಕೈ ಚೀಲಕ್ಕೆ 20 ರೂ. ಶುಲ್ಕ (Carry Bag Charges) ವಿಧಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಗೃಹ ಪೀಠೋಪಕರಣ ಸಂಸ್ಥೆಗೆ ಗ್ರಾಹಕ ನ್ಯಾಯಾಲಯ 3 ಸಾವಿರ ದಂಡ ವಿಧಿಸಿದೆ. ಕ್ಯಾರಿ ಬ್ಯಾಗ್ ನೀಡಲು ಶುಲ್ಕ ಪಡೆದಿದ್ದರಿಂದ ನಗರದ ಮಹಿಳೆಯೊಬ್ಬರು ಮಳಿಗೆ ವಿರುದ್ಧ ಕೇಸ್ ಹಾಕಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿರುವ ನ್ಯಾಯಾಲಯವು, ಗ್ರಾಹಕಿಗೆ 3 ಸಾವಿರ ನೀಡುವಂತೆ ಪೀಠೋಪಕರಣ ಸಂಸ್ಥೆಗೆ ಸೂಚಿಸಿದೆ.
ಬೆಂಗಳೂರಿನ ಜೋಗುಪಾಳ್ಯ ನಿವಾಸಿಯಾಗಿರುವ ಸಂಗೀತಾ ಬೋಹ್ರಾ ಎಂಬ ಮಹಿಳೆ ಕಳೆದ ವರ್ಷ ಅಕ್ಟೋಬರ್ 6 ರಂದು ನಾಗಸಂದ್ರದಲ್ಲಿರುವ ಐಕಿಯಾ ಮಳಿಗೆಗೆ ಭೇಟಿ ನೀಡಿದ್ದರು. ಮಹಿಳೆ 2,428 ರೂಪಾಯಿ ಮೊತ್ತದ ವಸ್ತುಗಳನ್ನು ಖರೀದಿಸಿದ್ದರು. ಆದರೆ ಕ್ಯಾರಿ ಬ್ಯಾಗ್‌ಗೂ 20 ರೂ. ಶುಲ್ಕ ವಿಧಿಸಿದ್ದನ್ನು ಪ್ರಶ್ನಿಸಿ, ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ್ದರು. ಆದರೆ, ಇದು ಕಂಪನಿ ರೂಲ್ಸ್ ಎಂದು ಸಿಬ್ಬಂದಿ ಶುಲ್ಕ ಪಡೆದಿದ್ದರು.
ನಂತರ ಮಹಿಳೆ ಮಾರ್ಚ್‌ನಲ್ಲಿ ಶಾಂತಿನಗರದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಬಳಿಕ ಐಕಿಯಾ ಕಂಪನಿಯ ಭಾರತೀಯ ಘಟಕಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದರು. ಈ ಸಂಬಂಧ ಅ. 4 ರಂದು ಗ್ರಾಹಕ ನ್ಯಾಯಾಲಯ ವಿಚಾರಣೆ ನಡೆಸಿ, ಕಂಪನಿಯ ಗ್ರಾಹಕ ಸೇವೆಯಲ್ಲಿನ ಲೋಪಗಳ ಬಗ್ಗೆ ಆಕ್ಷೇಪ ವ್ಯಕಪಡಿಸಿದೆ.
ಇದನ್ನೂ ಓದಿ | Tiger Claw Pendant: ಹುಲಿ ಉಗುರು ಪೆಂಡೆಂಟ್ ಧರಿಸಿದ ಮತ್ತಿಬ್ಬರ ಬಂಧನ
ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ 1000 ರೂ. ಪರಿಹಾರ ನೀಡುವ ಜತೆಗೆ, ಕ್ಯಾರಿ ಬ್ಯಾಗ್‌ಗಾಗಿ ಸಂಗ್ರಹಿಸಿದ 20 ರೂ.ಯನ್ನು ಬಡ್ಡಿ ಸಮೇತ ನೀಡಬೇಕು ಹಾಗೂ ನ್ಯಾಯಾಲಯ ವೆಚ್ಚವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಕಂಪನಿಗೆ ಕೋರ್ಟ್ ಸೂಚಿಸಿದೆ.