ಬೆಂಗಳೂರು: ಸೋಮವಾರ ಬೆಳಗ್ಗೆ ಮೈಸೂರು ರಸ್ತೆಯಲ್ಲಿ, ಸ್ಯಾಟ್ ಲೈಟ್ ನಿಲ್ದಾಣದ ಬಳಿ ಕ್ಯಾಂಟರ್, ಟೆಂಪೋ, ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ ಸರಣಿ ಅಪಘಾತ ನಡೆದಿತ್ತು. ಪ್ರಕರಣದಲ್ಲಿ ಮೃತಪಟ್ಟ ಆಟೊ ಚಾಲಕ ಗಿರಿಸಾಗರ್ ಅವರ ಕಣ್ಣುಗಳನ್ನು ಕುಟುಂಬಸ್ತರು ದಾನ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ ಅಪಘಾತದ ಹೊಡೆತಕ್ಕೆ ಬಿಎಂಟಿಸಿ ಹಾಗೂ ಟೆಂಪೋ ನಡುವೆ ಆಟೋ ಸಿಲುಕಿಕೊಂಡು ಬಿಟ್ಟಿತ್ತು. ಅಪಘಾತದಲ್ಲಿ ಸಿಲುಕಿದ ಆಟೋ ಸಂಪೂರ್ಣವಾಗಿ ಜಖಂ ಆಗಿತ್ತು. ಆಟೋದಲ್ಲಿ ಸಿಲುಕಿದ್ದ ಆಟೋ ಚಾಲಕ ಗಿರಿಸಾಗರ್‌ನ ರಕ್ಷಣೆ ಮಾಡಲು ಅರ್ಧಗಂಟೆ ಸ್ಥಳೀಯರು ಹರಸಾಹಸ ಪಟ್ಟಿದ್ದರು.
ಅಪಘಾತದಿಂದ ಮೈಸೂರು ರಸ್ತೆ ಮೂರು ಕಿಲೋಮೀಟರ್‌ವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಅಪಘಾತಕ್ಕೊಳಗಾಗಿದ್ದ ನಾಲ್ಕು ವಾಹನಗಳನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು, ವಾಹನಗಳಡಿ ಸಿಲುಕಿದ್ದ ಗಿರಿಸಾಗರ್ ಅವರನ್ನು ಹೊರಗೆಳೆದರು. ಗಿರಿಸಾಗರ್ ಸ್ಥಿತಿ ಬಹಳ ಗಂಭೀರವಾಗಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗಿರಿಸಾಗರ್ ಸಾವನ್ನಪ್ಪಿದರು.
ನಂತರ ಆಸ್ಪತ್ರೆಗೆ ಬೇಟಿ ನೀಡಿದ ಗಿರಿಸಾಗರ್ ಮನೆಯವರು, ಗಿರಿಸಾಗರ್ ಕಣ್ಣುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಇಬ್ಬರು ಅಂಧರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ. ನೇತ್ರ ದಾನ ಮಹಾದಾನ ಎಂದು ಸಾರಿದ್ದಾರೆ.
ಇದನ್ನೂ ಓದಿ: ಕಲಬುರಗಿ ಬಸ್-ಟೆಂಪೊ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ