ಬೆಂಗಳೂರು: ನಗರದಲ್ಲಿ ಫ್ಯಾಷನ್ ಶೋ ಆಯೋಜನೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅರ್ಧಕ್ಕೆ ನಿಂತು ಪೋಷಕರು ಹಾಗೂ ಮಕ್ಕಳು ಪರದಾಡುವಂತಾಯಿತು.
ನಗರದ ಹೊಟೇಲ್ ಶ್ಯಾಂಗ್ರಿಲಾದಲ್ಲಿ ಭಾನುವಾರ ಕಾರ್ಯಕ್ರಮ ಆಯೋಜಿಸಲು ಆಯೋಜಕ ಬಸವರಾಜು ಮತ್ತು ವಿಜಯ್‌ಕುಮಾರ್ ಎಂಬುವವರಿಗೆ ಹಣ ನೀಡಲಾಗಿತ್ತು. ಆದರೆ ಆಯೋಜಕ ಹಣ ಪಡೆದು ಹೊಟೇಲ್‌ನವರಿಗೆ ಅರ್ಧ ಹಣ ಕಟ್ಟಿ ಕಾರ್ಯಕ್ರಮದ ಮಧ್ಯದಲ್ಲೇ ಪರಾರಿಯಾಗಿದ್ದ. ಹೀಗಾಗಿ ಕಾರ್ಯಕ್ರಮ ಅರ್ಧಕ್ಕೆ ನಿಂತಿದ್ದರಿಂದ ಪೋಷಕರು, ಮಕ್ಕಳ ಪರದಾಡುವಂತಾಯಿತು. ಕಳೆದ ಒಂದೂವರೆ ತಿಂಗಳಿನಿಂದ ಫ್ಯಾಷನ್ ಶೋಗಾಗಿ ಮಕ್ಕಳು ತಯಾರಿ ನಡೆಸಿದ್ದರು.
ಶೋ ಆಯೋಜಕರು ಪ್ಲೇ ಹೋಮ್ ಸ್ಕೂಲ್‌ನ ಶಿಲ್ಪ ನಿರಂಜನ ಎಂಬುವವರಿಂದ ಒಂದು ಲಕ್ಷ ರೂಪಾಯಿ ಪಡೆದು ಕಾರ್ಯಕ್ರಮ ನಡೆಸದೆ ಮೋಸ ಮಾಡಿದ್ದಾರೆ. ಕಾರ್ಟನ್ ಮೀಡಿಯಾ ಇವೆಂಟ್ ಮ್ಯಾನೇಜ್ಮೆಂಟ್‌ನಿಂದ ವಿವಿಧ ಸಂಸ್ಥೆಗಳ ಮಾಲೀಕರಿಗೆ ಪ್ರಶಸ್ತಿ ಕೊಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಿಡ್ಸ್ ಫ್ಯಾಷನ್ ಶೋ ಸೆಗ್ಮೆಂಟ್‌ನಲ್ಲಿ ಪ್ಲೇ ಹೋಮ್ ಸ್ಕೂಲ್‌ನ 50 ಮಕ್ಕಳ ಭಾಗಿಯಾಗಿದ್ದರು. ಅವಾರ್ಡ್ ಕೊಟ್ಟು ಬಳಿಕ ಅರ್ಧದಲ್ಲಿ ಕಾರ್ಯಕ್ರಮ ನಿಲ್ಲಿಸಿ ಆಯೋಜಕರು ಪರಾರಿಯಾಗಿದ್ದಾರೆ. ಕೆಲ ಗಂಟೆ ಪೋಷಕರು ಹೋಟೆಲ್ ಮ್ಯಾನೆಜ್‌ಮೆಂಟ್ ಜತೆ ವಾಗ್ವಾದ ನಡೆಸಿ ಹಿಂತಿರುಗಿದ್ದಾರೆ.
ಇದನ್ನೂ ಓದಿ | ಸ್ವಾತಂತ್ರ್ಯೋತ್ಸವಕ್ಕೆ ಕಟ್ಟೆಚ್ಚರ; ಎಫ್ಆರ್ಎಸ್ ಬಳಕೆ ಮಾಡಲು ನಿರ್ಧರಿಸಿದ ದೆಹಲಿ ಪೊಲೀಸ್