ಬೆಂಗಳೂರು: ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದಿಂದ ರಾಜ್ಯದಲ್ಲಿ ಕೋಮುಗಲಭೆ ಹಾಗೂ ಸರಣಿ ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಕಡಿವಾಣ ಹಾಕುವಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ ಪ್ರಕರಣ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾತನಾಡಿ, ದೇಶದಲ್ಲಿ ಕರ್ನಾಟಕ ಪ್ರಗತಿಪರರ ರಾಜಧಾನಿಯಾಗಿದೆ, ಇಂತಹ ರಾಜ್ಯದಲ್ಲಿ ಸ್ವಾತಂತ್ರ್ಯ ದಿನದಂದೇ ಕೋಮು ಗಲಭೆಯಾಗಿರುವುದು ನಂಬಲಸಾಧ್ಯ ವಿಚಾರವಾಗಿದೆ. ಎಸ್‌ಡಿಪಿಐ ಅನ್ನು ಮುಂದಿಟ್ಟುಕೊಂಡು ಕೋಮು ಗಲಭೆ ಸೃಷ್ಟಿ ಮಾಡಿ ಜನರ ಜೀವನದ ಜತೆ ಸರ್ಕಾರ ಆಟವಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Shimogga tense | ಉಸ್ತುವಾರಿ ಸಚಿವರ ಸಭೆ, ನಾಳೆ ಶಿವಮೊಗ್ಗ, ಭದ್ರಾವತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ನಾನು ಗೃಹ ಸಚಿವನಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿತ್ತು. ಹಾಲಿ ಗೃಹಮಂತ್ರಿ ಬಿಗಿ ಇಲ್ಲ, ಅವರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲ. ಆರ್‌ಎಸ್‌ಎಸ್‌ನವರ ನೈತಿಕ ಪೊಲೀಸ್ ಗಿರಿಯನ್ನೂ ತಡೆಯಲಾಗುತ್ತಿಲ್ಲ. ಹಲಾಲ್, ಹಿಜಾಬ್ ವಿವಾದ ನಿಯಂತ್ರಣ ವಿಚಾರದಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲರಾಗಿರುವುದು ಸಾಬೀತಾಗಿತ್ತು. ಹೀಗಾಗಿ ಬಿಜೆಪಿಯವರು ಒಳ್ಳೆ ಆಡಳಿತಗಾರರಲ್ಲ ಎಂದು ಹೇಳಿದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳುತ್ತಿದ್ದೇವೆ. ಮಂಗಳೂರು ಘಟನೆಗಳ ಬಳಿಕ ಸರ್ಕಾರ ಎಚ್ಚರವಾಗಬೇಕಿತ್ತು. ಆದರೆ ಈಗ ಗೃಹ ಸಚಿವರ ಜಿಲ್ಲೆಯಲ್ಲೇ ಘಟನೆ ನಡೆದಿದೆ. ಸಾವರ್ಕರ್, ಟಿಪ್ಪು ಬೆಂಬಲಿಸುವುದು ಈ ದೇಶದಲ್ಲಿ ಸಾಮಾನ್ಯ, ಈ ವಿಚಾರದಲ್ಲಿ ಎರಡು ಕೋಮುಗಳನ್ನು ಒಡೆಯುವುದು ತಪ್ಪು, ಗೃಹ ಸಚಿವಾಲಯ ಹಾಗೂ ಇಂಟೆಲಿಜನ್ಸ್ ವೈಫಲ್ಯ ಇದರಿಂದ ಗೊತ್ತಾಗುತ್ತದೆ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಾರತೀಯ ಜನತಾ ಪಕ್ಷದ ಯಾವುದೇ ಕಾರ್ಯಕ್ರಮ ಕೇಶವ ಕೃಪಾದಲ್ಲಿ ನಿರ್ಧಾರವಾಗುತ್ತದೆ. ಮೊದಲು ನಳಿನ್ ಕುಮಾರ್ ಕಟೀಲ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಂಘರ್ಷದ ಘಟನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರಲಿಲ್ಲ. ಸಮಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲ, ಪದೇ ಪದೇ ಹೀಗಾಗಲು ಕೋಮುವಾದಿಗಳ ಕೈಯಲ್ಲಿ ಸರ್ಕಾರ ಕೊಟ್ಟಿರುವುದು ಹಾಗೂ ಕಾನೂನು, ಪೊಲೀಸ್ ಇಲಾಖೆ ಭಯವಿಲ್ಲದಿರುವುದು ಕಾರಣ, ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಮೂಲಭೂತವಾದಿಗಳ ಸಂಖ್ಯೆ ಕಡಿಮೆ ಇದೆ, 10 ಪರ್ಸೆಂಟ್ ಜನ ಪ್ರಚೋದನಕಾರಿಯಾಗಿ ಮಾತನಾಡುತ್ತಾರೆ. ಸಾವರ್ಕರ್ ಫೋಟೋ ಆಗಿರಲಿ, ಟಿಪ್ಪು ಫೋಟೋ ಆಗಿರಲಿ ಈ ವಿಚಾರಗಳಿಗೆ ಇಂತಹ ಘಟನೆ ನಡೆಯಬಾರದು. ಸರ್ಕಾರ ನಡೆಸಲು ಬಿಜೆಪಿಯವರಿಗೆ ಆಗುತ್ತಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಿಜೆಪಿ ಬಂದಿದ್ದು, ಪೋಲಿಸ್ ಇಲಾಖೆಯಲ್ಲೂ ಆತ್ಮವಿಶ್ವಾಸವಿಲ್ಲ. ಗೃಹ ಮಂತ್ರಿಗಳು ಒಂದು ಹೇಳಿಕೆ ಕೊಟ್ಟರೆ ತೂಕ ಇರಬೇಕು, ಯಾರೇ ತಪ್ಪು ಮಾಡಿದರೂ ಕಾನೂನು ರೀತ್ಯಾ ನ್ಯಾಯಯುತ ಕ್ರಮ ಜರುಗಿಸಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ | ಶಿವಮೊಗ್ಗ ಉದ್ವಿಗ್ನ: ಸಾವರ್ಕರ್ ಭಾವಚಿತ್ರ ತೆರವು ಬೆನ್ನಲ್ಲೇ ಯುವಕನಿಗೆ ಇರಿತ