Site icon Vistara News

Theft Case : ಚಿನ್ನದಂಗಡಿಗೆ ಕನ್ನ; ಮೈ ತುಂಬ ಪಂಚೆ, ಬೆಡ್ ಶೀಟ್ ಧರಿಸಿ ಬರುವ ಖತರ್ನಾಕ್‌ ಗ್ಯಾಂಗ್‌

Burglary at Benaka Jewellers near Netkalappa Circle

ಬೆಂಗಳೂರು: ಇತ್ತೀಚೆಗಂತೂ ಕಳ್ಳತನ ಪ್ರಕರಣಗಳು (Theft Case) ಹೆಚ್ಚಾಗುತ್ತಿದ್ದು, ಸಾಕ್ಷಿಗಳು ಸಿಗದ ರೀತಿಯಲ್ಲಿ ಕೃತ್ಯವನ್ನು ಎಸಗುತ್ತಿದ್ದಾರೆ. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಕಳ್ಳರು ತಮ್ಮ ಕೈ ಚಳಕ ತೋರುತ್ತಾರೆ. ಬೆಂಗಳೂರಿನ ಬಸವನಗುಡಿ ನೆಟ್ಕಲಪ್ಪ ಸರ್ಕಲ್ ಬಳಿ ಇರುವ ಬೆನಕ ಜ್ಯುವೆಲ್ಲರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ರೂ. ನಗದು ಜತೆಗೆ ಒಂದಷ್ಟು ಬೆಳ್ಳಿ ಪದಾರ್ಥಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಎಂಟ್ರಿ ಕೊಟ್ಟ ಕಳ್ಳರು ಯಾವುದೇ ಆತಂಕವಿಲ್ಲದೆ ಅನಾಯಾಸವಾಗಿ ಕೆಲಸ ಮುಗಿಸಿದ್ದಾರೆ. ಇವರ ನಡವಳಿಕೆಯನ್ನು ಗಮನಿಸಿದರೆ ಇವರೆಲ್ಲರೂ ಪ್ರೊಫೆಷನಲ್ ಕಳ್ಳರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಕೃತ್ಯ ನಡೆಸುವಾಗ ಪೊಲೀಸರಿಗೆ ಸಾಕ್ಷಿ ಸಿಗಬಾರೆಂದು ಸಂಪೂರ್ಣ ದೇಹವನ್ನು ಪಂಚೆ ಹಾಗೂ ಬೆಡ್ ಶೀಟ್‌ನಲ್ಲಿ ಸುತ್ತಿಕೊಂಡು ಕಳ್ಳತನ ಮಾಡಿದ್ದಾರೆ. ಜತೆಗೆ ಫಿಂಗರ್ ಪ್ರಿಂಟ್ ಸಿಗದಂತೆ ನೋಡಿಕೊಂಡಿದ್ದಾರೆ.

ಬೆನಕ ಜ್ಯೂವೆಲ್ಲರ್ಸ್‌ ಅನ್ನು ಟಾರ್ಗೆಟ್ ಮಾಡಿಯೇ ಈ ರೀತಿ ಕೃತ್ಯ ನಡೆಸಿದ್ದರಾ ಎಂಬ ಅನುಮಾನ ಕೂಡ ಮೂಡಿದೆ. ಯಾಕೆಂದರೆ ಇದೇ ಬೆನಕ ಜ್ಯೂವೆಲ್ಲರ್ಸ್‌ನ ಮತ್ತೊಂದು ಬ್ರಾಂಚ್ ರಾಮಮೂರ್ತಿನಗರದಲ್ಲಿದೆ. ಅಲ್ಲಿ ಕೂಡ ಕಳೆದ ಬುಧವಾರ (ಫೆ.7) ಇದೇ ಮಾದರಿಯಲ್ಲೇ ಕಳ್ಳತನವಾಗಿದೆ‌. ನೆಟ್ಕಲಪ್ಪ ಸರ್ಕಲ್‌ನಲ್ಲಿರುವ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಆದರೆ ರಾಮಮೂರ್ತಿನಗರದ ಬ್ರಾಂಚ್‌ನಲ್ಲಿ ಸಿಸಿಟಿವಿಗಳನ್ನೂ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

ಡಾಕ್ಯುಮೆಂಟ್‌ಗಳನ್ನು ಕದ್ದಿರುವ ಕಳ್ಳರು

ಸಾಮಾನ್ಯವಾಗಿ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕದ್ದು ಹೋಗುತ್ತಾರೆ. ಆದರೆ ಈ ಕಳ್ಳರು ಶಾಪ್‌ನಲ್ಲಿದ್ದ ಕೆಲ ಡಾಕ್ಯುಮೆಂಟ್‌ಗಳನ್ನೂ ಕಳ್ಳತನ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಹಲವಾರು ಅನುಮಾನಗಳು ಮೂಡಿವೆ. ಚಿನ್ನಂಗಡಿ , ಬ್ಯಾಂಕ್‌ಗಳಲ್ಲಿ ಬಲವಂತವಾಗಿ ಒಳ ನುಗ್ಗಲು ಪ್ರಯತ್ನಿಸಬಾರದು ಎಂದು ಅಲಾರಂ ಸಿಸ್ಟಂಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದರೆ ಇಲ್ಲಿ ಅಂತಹ ಯಾವುದೇ ಸೆಕ್ಯೂರಿಟಿ ಇರಲಿಲ್ಲ ಎನ್ನಲಾಗಿದೆ. ಸದ್ಯ ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version