ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳನನ್ನು (Theft Case) ಬಂಧಿಸಿದ್ದಾರೆ. ದೀಪಕ್ ಅಲಿಯಾಸ್ ದೀಪು ಬಂಧಿತ ಆರೋಪಿಯಾಗಿದ್ದಾನೆ. ದೀಪಕ್ ಸ್ವಿಗ್ಗಿ ಡೆಲಿವರಿ ಬಾಯ್ (Swiggy Boy) ಆಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 14 ಪ್ರಕರಣ ದಾಖಲಾಗಿವೆ.
ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ. ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೈಕ್ ಮಾರಾಟಕ್ಕೂ ಮೊದಲು ದಾಖಲಾತಿಯನ್ನೆಲ್ಲ ನಂತರ ಕೊಡುತ್ತೇನೆ ಎಂದು ಯಮಾರಿಸಿ, ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದ.
23 ವರ್ಷದ ದೀಪಕ್ ತನ್ನ 18ನೇ ವಯಸ್ಸಿನಲ್ಲೇ ಹತ್ತಕ್ಕೂ ಹೆಚ್ಚು ಗಾಡಿಗಳನ್ನು ಕದ್ದು ರಿಮ್ಯಾಂಡ್ ಹೋಮ್ ಸೇರಿದ್ದ. ಇಲ್ಲಿಂದ ಹೊರಬಂದ ದೀಪಕ್ ಹೊಸ ಜೀವನ ಕಟ್ಟಿಲಿಲ್ಲ, ಬದಲಿಗೆ ಈ ದಾರಿಯಲ್ಲಿ ಮತ್ತಷ್ಟು ಪಳಗಿ ನಟೋರಿಯಸ್ ಆಗಿದ್ದ. ದುಡಿಮೆ ಈತನಿಗೆ ಪಾರ್ಟ್ ಟೈಂ ಕೆಲಸವಾದರೆ, ಕದಿಯುವುದನ್ನೂ ಪ್ರವೃತ್ತಿ ಮಾಡಿಕೊಂಡಿದ್ದ.
ಬೆಂಗಳೂರಿನ ಬನಶಂಕರಿ ನಿವಾಸಿಯಾದ ದೀಪಕ್‌ಗೆ ತಂದೆ ಇಲ್ಲ. ತಾಯಿ ಇದ್ದರೂ ಅವರನ್ನು ಈತ ನೋಡಿಕೊಳ್ಳುತ್ತಿರಲಿಲ್ಲ. ದೀಪಕ್ ಹೆಚ್ಚು ಮಾವನ ಆಸರೆಯಲ್ಲೆ ಬೆಳೆದಿದ್ದ. ದೀಪಕ್ ಮಾವ ಮಂಜುನಾಥ್ ಅವರು ಬಿಜಿಎಸ್ ಮಠದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ನಂತರ ಅಮೇರಿಕಾದಲ್ಲಿರುವ ಬಿಜಿಎಸ್‌ನ ಬ್ರಾಂಚ್‌ಗೆ ಶಿಫ್ಟಾಗಿದ್ದರು. ಇದಾದ ಬಳಿಕವೇ ದೀಪಕ್ ದಾರಿ ತಪ್ಪಿದ್ದ. ಮೊದಲ ಬಾರಿ ಜೆಪಿ ನಗರದಲ್ಲಿ ರಾಬರಿ ಮಾಡಿ ರಿಮ್ಯಾಂಡ್ ಹೋಂ ಸೇರಿದ್ದ. ಒಮ್ಮೆ ಕಳ್ಳತನದ ರುಚಿ ಸವಿದ ನಂತರ ಇದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಸುಮಾರು 73ಕ್ಕೂ ಹೆಚ್ಚು ಬೈಕ್ ಹಾಗೂ ಟಾಟಾ ಏಸ್ ಗಾಡಿ ಕದ್ದಿರುವುದು ಬೆಳಕಿಗೆ ಬಂದಿದೆ.
ಅಷ್ಟೆ ಅಲ್ಲದೆ ವಿದ್ಯಾರಣ್ಯಪುರದಲ್ಲಿ ಮನೆ ಕಳ್ಳತನ ಮಾಡಿ ಜೈಲು ಸೇರಿದವನು 15 ದಿನಗಳ ಹಿಂದಷ್ಟೇ ಹೊರ ಬಂದಿದ್ದ. ಜೈಲಿನಲ್ಲಿದ್ದಾಗ ರಘು ಅಲಿಯಾಸ್ ಪೆಪ್ಸಿ ಎಂಬಾತ ಪರಿಚಯವಾಗಿದ್ದ. ಕಳ್ಳತನಕ್ಕೆ ಒಂದಷ್ಟು ಮನೆಗಳನ್ನು ಹುಡುಕು ಎಂದಿದ್ದ ಎನ್ನಲಾಗಿದೆ. ಅದರಂತೆ ಈತ ಬನಶಂಕರಿಯಲ್ಲಿ ಮೂರ್ನಾಲ್ಕು ಮನೆಗಳನ್ನೂ ಹುಡುಕಿಕೊಟ್ಟಿದ್ದನಂತೆ. ಇನ್ನು ಈತ ಫುಲ್ ಟೈಂ ಕಳ್ಳನಾಗಿದ್ದು, ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಆಗಾಗ ಕೆಲಸ ಮಾಡುತ್ತಿದ್ದ. ಸ್ವಿಗ್ಗಿ ಡೆಲಿವರಿ ಮಾಡುತ್ತಾ ಮನೆಗಳನ್ನು ಹಾಗು ಬೈಕ್‌ಗಳನ್ನು ಗುರುತಿಸಿ, ರಾತ್ರಿ ವೇಳೆ ಕದಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ .
ಸದ್ಯ ಬೈಯ್ಯಪ್ಪನಹಳ್ಳಿ ಪೊಲೀಸರು ಈ ಖತರ್ನಾಕ್ ಕಳ್ಳನಿಂದ ಮೂರು ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ
ಬುಲೆಟ್ ಬೈಕ್ ಕದಿಯಲು ಕಳ್ಳನ ಒದ್ದಾಟ
ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನಕ್ಕೆ ಕಳ್ಳನೊಬ್ಬ ವಿಫಲ ಯತ್ನ ನಡೆಸಿದ್ದಾನೆ. ಬುಲೆಟ್ ಬೈಕ್‌ನ ಹ್ಯಾಂಡಲ್ ಲಾಕ್ ಕಾಲಿನಿಂದ ಒದ್ದು ಮುರಿಯಲು ಯತ್ನಿಸಿದ್ದಾನೆ. ಬೈಕ್ ಕದಿಯಲು ಕಳ್ಳನ ಒದ್ದಾಟವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಏಪ್ರಿಲ್ 14ರ ಮಧ್ಯರಾತ್ರಿ 2:25ರ ಸುಮಾರಿಗೆ ಕಳ್ಳನೊಬ್ಬ ಬೆಂಗಳೂರಿನ ಜೆ.ಪಿ ನಗರದ ಮನೆ ಬಳಿ ಬಂದಿದ್ದ. ಒಂದೆರಡು ನಿಮಿಷ ಬುಲೆಟ್ ಬೈಕ್ ಅನ್ನೇ ನೋಡುತ್ತಾ, ಜತೆಗೆ ಧರಿಸಿದ್ದ ಟೀ ಶರ್ಟ್‌ನಲ್ಲೇ ಮುಖವನ್ನು ಮುಚ್ಚಿಕೊಂಡಿದ್ದ. ನಂತರ ಬುಲೆಟ್ ಬೈಕ್ ಏರಿ ಕುಳಿತು ಅತ್ತಿಂದಿತ್ತ ಕಣ್ಣಾಡಿಸಿ ಕಾಲಿನಿಂದ ಒದ್ದು ಹ್ಯಾಂಡಲ್ ಮುರಿಯಲು ಯತ್ನಿಸಿದ್ದಾನೆ. ಹೀಗೆ ನಾಲ್ಕೈದು ಬಾರಿ ಪ್ರಯತ್ನಿಸಿದ ನಂತರ ಮತ್ತ ಮನೆ ಮುಂದೆಯೇ ಬೈಕ್ ನಿಲ್ಲಿಸಿ, ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಹೊರಟು ಹೋಗಿದ್ದಾನೆ. ಸದ್ಯ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳತನವನ್ನೇ ಕಾಯಕ ಮಾಡಿಕೊಂಡ ಅಪ್ಪ-ಮಗ; ಗರಿ ಗರಿ ನೋಟು, ಡೈಮಂಡ್ ಕದ್ದವರು ಜೈಲುಪಾಲು
ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಕುಖ್ಯಾತ ಮನೆಗಳ್ಳರನ್ನು (Theft Case) ಬಂಧಿಸಿದ್ದಾರೆ. ಮಿರ್ಜಾ ಸೈಯದ್ ಬೇಗ್ ಅಲಿಯಾಸ್ ಎಂಎಸ್ ಬೇಗ್ ಹಾಗೂ ಮಿರ್ಜಾ ನೂರುದ್ದಿನ್ ಬೇಗ್ ಬಂಧಿತರು. ಕಳ್ಳತನವನ್ನೇ ಕೆಲಸ ಮಾಡಿಕೊಂಡಿದ್ದ ಅಪ್ಪ-ಮಗನಿಂದ ಪೊಲೀಸರು ಸುಮಾರು 1 ಕೋಟಿ ಮೌಲ್ಯದ 1.25 ಕೆಜಿ ತೂಕದ ಡೈಮಂಡ್ ಹಾಗೂ ಚಿನ್ನಾಭರಣ, 2 ಕೆಜಿ ಬೆಳ್ಳಿ, 21 ಲಕ್ಷ ರೂ. ನಗದು ಸೇರಿದಂತೆ ಪೂಜೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇವರಿಬ್ಬರು ರಿಹ್ಯಾಬಿಲೇಷನ್ ಸೆಂಟರ್‌ನಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ ನಗದು ಕದ್ದಿದ್ದರು. ಮಿರ್ಜಾ ಸೈಯದ್ ಬೇಗ್ ಕ್ಲೀನಿಂಗ್ ಕೆಲಸಕ್ಕೆಂದು 15 ದಿನಕ್ಕೊಮ್ಮೆ ಓಲ್ಡ್ ಏಜ್ ಹೋಮ್‌ಗೆ ಬರುತ್ತಿದ್ದಾಗ, ಚಿನ್ನಾಭರಣಗಳು ಇರುವುದನ್ನು ಕಂಡಿದ್ದ. ದುರಾಸೆಗೆ ಬಿದ್ದ ಬೇಗ್ ಓಲ್ಡ್ ಏಜ್ ಹೋಮ್ ಮಾಲೀಕರ ಮನೆಗೆ ಕನ್ನ ಹಾಕಲು ಸ್ಕೆಚ್ ಹಾಕಿದ್ದ.
ಮಾತ್ರವಲ್ಲ ಕಳ್ಳತನಕ್ಕೆ ತಂದೆಯನ್ನೇ ಪಾರ್ಟ್ನರ್ ಆಗಿ ಮಾಡಿಕೊಂಡು, ಕಳ್ಳತನಕ್ಕೆ ಸ್ಕೆಚ್ ಹಾಕಿರುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿ ಕಳ್ಳತನಕ್ಕೆ ಸಾಥ್ ನೀಡಿದ ತಂದೆ ಮಿರ್ಜಾ ನೂರುದ್ದಿನ್ ಬೇಗ್, ಮನೆ ಮಾಲೀಕರು ಇಲ್ಲದ ಸಮಯದಲ್ಲಿ ಬಂದು ಇಡೀ ಮನೆಯನ್ನೇ ದೋಚಿದ್ದರು. ಸಿಕ್ಕಿ ಬೀಳಬಾರದೆಂದು ನಂತರ ಖಾರದಪುಡಿ ಹಾಕಿ ಸಾಕ್ಷಿ ನಾಶಕ್ಕೆ ಮುಂದಾಗಿದ್ದರು.
ಇನ್ನು ಮಿರ್ಜಾ ಸೈಯದ್ ಬೇಗ್ ತಂದೆಗೆ ಹೃದಯ ಸಂಬಂಧಿ ಖಾಯಿಲೆ ಜತೆಗೆ ಮೂರು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು. ಹೀಗಾಗಿ ಚಿನ್ನಾಭರಣವನ್ನೆಲ್ಲ ಕದ್ದು ಅದನ್ನು ಮಾರಾಟ ಮಾಡಿದರೆ, ಅದರಿಂದ ಬಂದ ಹಣದಲ್ಲಿ ಆರಾಮವಾಗಿ ಇರಬಹುದು ಎಂದು ಕಳ್ಳತನದ ದಾರಿ ತುಳಿದಿದ್ದರು. ಆದರೆ ಕರ್ಮ ರಿರ್ಟನ್ಸ್ ಎಂಬಂತೆ ಅಪ್ಪ-ಮಗ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಈ ಸಂಬಂಧ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನವಾಗಿದೆ. ಮತ್ತಷ್ಟು ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ