ಬೆಂಗಳೂರು: ಮೊನ್ನೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರೋಡ್ನಲ್ಲಿ ನಿರ್ಮಿಸಿದ್ದ ಬಸ್ ನಿಲ್ದಾಣ ಕಳವಾಗಿರುವ (Bus stand Theft) ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಕಮೀಷನರ್ ಕಚೇರಿ ಹಿಂಭಾಗದಲ್ಲೆ ಆದ ಕಳವು (Theft Case) ಎಂದು ಸೋಶಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಲಾಗಿತ್ತು. ಇದರ ಹಿಂದೆ ಬಿದ್ದ ಬೆಂಗಳೂರು ನಗರ ಪೊಲೀಸರು (Bengaluru City Police) ಪ್ರಕರಣದ ಅಸಲಿ ರಹಸ್ಯ ಬಯಲಿಗೆಳೆದಿದ್ದಾರೆ.
ಬಿಬಿಎಂಪಿಯಿಂದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈ ಫೈ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. ಆದರೆ ರಾತ್ರೋ ರಾತ್ರಿ ಯಾರೋ ಕಳವು ಮಾಡಿದ್ದಾರೆ ಎಂದು ಬಸ್ ನಿಲ್ದಾಣ ನಿರ್ಮಿಸಿದ್ದ ಸೈನ್ ಬೋರ್ಡ್ ಎಂಬ ಸಂಸ್ಥೆಯ ಉದ್ಯೋಗಿ ರವಿರೆಡ್ಡಿ ಎಂಬಾತ ಆಗಸ್ಟ್ 28 ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
ಕಮೀಷನರ್ ಕಚೇರಿ ಹಿಂಭಾಗದಲ್ಲೇ ನಿರ್ಮಿಸಿದ್ದ ಬಸ್ ಬಿಲ್ದಾಣ ಕಳವಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಪೊಲೀಸರ ಕಾರ್ಯವೈಖರಿ ಬಗ್ಗೆ ನಾನಾ ರೀತಿಯ ಕಾಮೆಂಟ್ ಪಾಸ್ ಆಗಿತ್ತು.
ಇದರಿಂದ ಮುಜುಗರಕ್ಕೆ ಒಳಗಾದ ಪೊಲೀಸರು ಈ ಪ್ರಕರಣದ ಅಸಲಿ ಸತ್ಯ ಭೇದಿಸಲು ತನಿಖೆ ಕೈಗೊಂಡರು. ಕಳವು ಆಗಿದೆ ಎನ್ನಲಾದ ಬಸ್ ನಿಲ್ದಾಣದ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಬಸ್ ನಿಲ್ದಾಣ ಕಳವು ಆಗಿಲ್ಲ. ಬದಲಿಗೆ ಕಳಪೆ ಕಾಮಗಾರಿಯಿಂದ ಬಿಬಿಎಂಪಿಯೇ ತೆರವು ಮಾಡಿತ್ತು ಎಂಬ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Medical Negligence : ಇಂಜೆಕ್ಷನ್ ರಿಯಾಕ್ಷನ್ಗೆ ಮತ್ತೊಬ್ಬ ಬಾಲಕ ಬಲಿ!
ನಾಪತ್ತೆ ಆಗಿದ್ದು ಹೇಗೆ?
ಇಷ್ಟಕ್ಕೂ ಬಸ್ ನಿಲ್ದಾಣ ಹೇಗೆ ನಾಪತ್ತೆ ಆಗಿತ್ತು ಎಂಬುದರ ಕುರಿತು ವಿವರಿಸುತ್ತೇವೆ. ಬಿಬಿಎಂಪಿಯಿಂದ ಕನ್ನಿಂಗ್ ಹ್ಯಾಂ ರೋಡ್ನ ಕಾಫಿ ಡೇ ಮುಂಭಾಗ ಸೈನ್ ಬೋರ್ಡ್ ಎಂಬ ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿತ್ತು. ಆದರೆ ಕಾಮಗಾರಿ ಕಳಪೆ ಗುಣಮಟ್ಟದಿಂದಾಗಿ ಕೆಲಸ ಮುಂದುವರೆಸಲು ಬಿಬಿಎಂಪಿ ಅವಕಾಶ ಕೊಡದೇ ಕೆಲಸ ತಡೆ ಹಿಡಿದಿತ್ತು.
ಹೀಗಾಗಿ ಬಸ್ ನಿಲ್ದಾಣದ ಶೆಟರ್ ಅನ್ನು ಅಲ್ಲಿನ ಪುಟ್ ಪಾತ್ ಮೇಲೆಯೇ ಇಡಲಾಗಿತ್ತು. ಆದರೆ ಸಾರ್ವಜನಿಕರು ಓಡಾಡಕ್ಕೆ ಅನಾನುಕೂಲ ಆಗುತ್ತಿದೆ ಎಂದು ಬಿಬಿಎಂಪಿಗೆ ದೂರು ನೀಡಿದರು. ಸಾರ್ವಜನಿಕರ ದೂರಿನ ಆಧಾರದ ಮೇಲೆ ಪುಟ್ ಪಾತ್ ಮೇಲಿದ್ದ ಬಸ್ ನಿರ್ಮಾಣ ಹಂತದ ನಿಲ್ದಾಣವನ್ನು ಬಿಬಿಎಂಪಿ ತೆರವು ಮಾಡಿತ್ತು. ಬಳಿಕ ಅದನ್ನು ಗೋಡೌನ್ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು.
ಮಾರು ದಿನ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತಿದ್ದ ಕಂಪನಿಯ ಉದ್ಯೋಗಿ ರವಿರೆಡ್ಡಿ ಸ್ಥಳಕ್ಕಾಗಮಿಸಿದಾಗ ಇಲ್ಲದಿರುವುದನ್ನು ಕಂಡಿದ್ದಾರೆ. ಸರಿಯಾದ ಮಾಹಿತಿ ಇಲ್ಲದೆ, ಬಿಬಿಎಂಪಿ ಅಧಿಕಾರಿಗಳ ಮೇಲೆಯೂ ಗೂಬೆ ಕೂರಿಸಿ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಮಾತ್ರವಲ್ಲದೆ ಬಸ್ ನಿಲ್ದಾಣದ ಮೊತ್ತವನ್ನು ತಪ್ಪಾಗಿ ಲೆಕ್ಕಿಸಿದ್ದು, ಸಾರ್ವಜನಿಕವಾಗಿ ಬಿಬಿಎಂಪಿ ಹಾಗೂ ಪೊಲೀಸರ ಮಾನಹಾನಿಗೆ ಕಾರಣವಾಗಿದ್ದ. ಹೀಗಾಗಿ ಪ್ರಕರಣದ ಅಸಲಿ ಸತ್ಯ ಹೊರ ಬಂದಿದ್ದು, ಸುಳ್ಳು ದೂರು ದಾಖಲಿಸಿದ್ದ ರವಿರೆಡ್ಡಿ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ