Site icon Vistara News

R Ashok: ರಾಜ್ಯದಲ್ಲಿರುವುದು ತಾಲಿಬಾನ್‌ ಸರ್ಕಾರ; ಆರ್. ಅಶೋಕ್‌ ಆರೋಪ

There is a Taliban government in the state Opposition party leader R Ashok alleges

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Congress Government) ತಾಲಿಬಾನ್‌ ಸರ್ಕಾರವಾಗಿ ಬದಲಾಗಿದ್ದು, ಹಿಂದೂಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ (BJP) ಹೋರಾಟ ನಡೆಸಿ ಬುದ್ಧಿ ಕಲಿಸಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ (R Ashok) ಎಚ್ಚರಿಕೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ‌ ಹಿಡಿದಿದೆ. ಇದಕ್ಕಾಗಿಯೇ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್‌ ಸರ್ಕಾರ, ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದೆ. ಪಾಕಿಸ್ತಾನದ ಕುನ್ನಿಗಳು ಎಂದು ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ದಾಖಲೆ ಇಲ್ಲ.‌ ಬಿಜೆಪಿ ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಎಂದಿದ್ದರು. ಆದರೂ ಮುಸ್ಲಿಮರನ್ನು ರಕ್ಷಣೆ ಮಾಡಿ ಹಿಂದೂಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Road Accident : ಪ್ರತ್ಯೇಕ 5 ಕಡೆಗಳಲ್ಲಿ ಆ್ಯಕ್ಸಿಡೆಂಟ್‌; ಕಾರು ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಸವಾರ ಸಾವು

ಸಮರ್ಪಕ ತನಿಖೆ ನಡೆಯಲಿ

ಚಿತ್ರನಟ ದರ್ಶನ್‌ ಪೊಲೀಸರಿಗೆ ದೂರು ನೀಡಿ, ರೇಣುಕಾಸ್ವಾಮಿಗೆ ತಿಳಿ ಹೇಳಿಸಬಹುದಿತ್ತು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಕೊಂದಿದ್ದರೆ ಅದು ದೊಡ್ಡ ತಪ್ಪು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದರು.

ರಾಜ್ಯದಲ್ಲಿ ಅಪರಾಧಿ ಚಟುವಟಿಕೆ ಹೆಚ್ಚಿದೆ. ಚನ್ನಗಿರಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಾಕಲಾಗಿದೆ. ಪೊಲೀಸರಿಗೆ ಕಪಾಳ ಮೋಕ್ಷವಾಗಿದೆ. ಕಾನೂನು ಪೊಲೀಸರ ಹಿಡಿತದಲ್ಲೇ ಇಲ್ಲ. ಆದ್ದರಿಂದ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿ ಮುಚ್ಚುಮರೆ ಮಾಡುತ್ತಿದ್ದಾರೆ. ನಾವು ಕರ್ನಾಟಕದಲ್ಲಿದ್ದೇವೆಯೇ ಹೊರತು ಜಮ್ಮು ಕಾಶ್ಮೀರದಲ್ಲಿಲ್ಲ. ಇದನ್ನು ಟಿವಿ ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ಕ್ರಮ ವಹಿಸುವುದು ಸರಿಯಲ್ಲ ಎಂದು ತಿಳಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ತನಿಖೆ ಸರಿಯಾಗಿ ನಡೆದು ಸತ್ಯಾಂಶ ಹೊರಬರಲಿ. ಈ ಪ್ರಕರಣದಲ್ಲಿ ಮೃತನಾದ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆ ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಸಂದೇಶಗಳು ಬರುತ್ತವೆ. ಅದಕ್ಕಾಗಿ ಕೊಲೆ ಮಾಡಲು ಹೋಗಬಾರದು. ಇಂತಹ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವುದು ಇಡೀ ಚಿತ್ರೋದ್ಯಮಕ್ಕೆ ಕಳಂಕವಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದರು.

ಇದನ್ನೂ ಓದಿ: Stock Market: ಷೇರುಪೇಟೆಯಲ್ಲಿ ಗೂಳಿ ಗುಟುರು; ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ಮಕ್ಕಳಿಗೆ ಪುಸ್ತಕ ಇಲ್ಲ

ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಕೊಡದೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಗೊಂದಲದಲ್ಲಿಟ್ಟಿದೆ. ಸರ್ಕಾರಿ ಶಾಲೆಗೆ ಮಕ್ಕಳು ಬರುವುದೇ ಕಡಿಮೆಯಾಗಿರುವಾಗ ಇಂತಹ ಸಮಸ್ಯೆ ಉಂಟಾಗಿದೆ. ಒಂದು ಕಡೆ ಗ್ಯಾರಂಟಿಗಳನ್ನು ನೀಡಿ, ಮತ್ತೊಂದು ಕಡೆ ಪುಸ್ತಕಗಳನ್ನು ನೀಡಿಲ್ಲ. ಸರ್ಕಾರಿ ಖಜಾನೆ ಖಾಲಿಯಾಗಿದ್ದು, ಕಸಕ್ಕೂ ತೆರಿಗೆ ಹಾಕಲು ಮುಂದಾಗಿದ್ದಾರೆ. ಕರ್ನಾಟಕ ಮಾಡಲ್‌ ಯಾವುದು ಎಂದು ತಿಳಿಯಲು ಆರ್ಥಿಕ ಇಲಾಖೆಯ ಒಂದು ವರ್ಷದ ಪ್ರಗತಿ ಕಾರ್ಡ್‌ ಬಿಡುಗಡೆಗೊಳಿಸಲಿ ಎಂದು ಆಗ್ರಹಿಸಿದರು.

ಬರ ಪರಿಹಾರ ನೀಡಿಲ್ಲ

ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ಅಜ್ಞಾನ ಪ್ರದರ್ಶನ ಮಾಡುತ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಆರ್‌.ಅಶೋಕ್‌ ದೂರಿದರು.

ರೈತರಿಗೆ ತಲುಪಬೇಕಾದ ಪರಿಹಾರದ ಹಣ ಇನ್ನೂ ತಲುಪಿಲ್ಲ ಎಂದು ಸ್ವತಃ ಕಾಂಗ್ರೆಸ್‌ ಶಾಸಕರೇ ಪತ್ರ ಬರೆದು ರಾಜ್ಯ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ನೀಡಿದೆ. ಅದನ್ನು ರೈತರಿಗೆ ವಿತರಣೆ ಮಾಡಿ ಎಂದರೂ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ಆಗುತ್ತಿಲ್ಲ. ಬರ ಪರಿಹಾರ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ಕೊಡಲಿ, ರೈತರ ಬದುಕಿನ ಜತೆ ಚೆಲ್ಲಾಟವಾಡುವುದು ಬೇಡ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ಇಂದಿನ ದರ ಚೆಕ್‌ ಮಾಡಿ

ನನಗೆ ನಿಯಮ ಪ್ರಕಾರ ಸರ್ಕಾರಿ ನಿವಾಸ ನೀಡಲು ಸರ್ಕಾರ ಬಹಳ ತಡ ಮಾಡುತ್ತಿದೆ. ನಾನು ಡಿ.ಕೆ.ಶಿವಕುಮಾರ್‌ ಅವರ ಮನೆ ಕೇಳುತ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್‌ ಜತೆಗೆ ಮಾದರಿಯಾಗಿ ನಡೆದುಕೊಂಡಿತ್ತು. ಅದೇ ರೀತಿ ಈಗಲೂ ಸರ್ಕಾರ ನಡೆದುಕೊಳ್ಳಬೇಕು. ಈ ಬಗ್ಗೆ ಮೂರು ಪತ್ರ ಬರೆದರೂ ಸ್ಪಂದಿಸಿಲ್ಲ. ನಿವಾಸ ಕೊಡದಿದ್ದರೂ ಜನಸೇವೆ ಮಾಡುವ ಶಕ್ತಿ ಇದೆ ಎಂದು ತಿಳಿಸಿದರು.

Exit mobile version