ಬೆಂಗಳೂರು: ಬೇರೆ ಬೇರೆ ಕಾರಣಗಳಿಂದಾಗಿ ವಿಭಿನ್ನ ಫಿಲಂ ಚೇಂಬರ್‌ಗಳು ಅಸ್ತಿತ್ವದಲ್ಲಿರುವುದು ಸರಿಯಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಭಾ. ಮಾ. ಹರೀಶ್ ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ನಿರ್ಮಾಪಕ ಸಾ. ರಾ. ಗೋವಿಂದು ವಿರುದ್ಧ ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಮೊದಲ ಸುದ್ದಿಗೋಷ್ಠಿಯಲ್ಲಿ ಭಾನುವಾರ ಭಾ. ಮಾ. ಹರೀಶ್ ಮಾತನಾಡಿದರು.
ʼʼಕರ್ನಾಟಕದಲ್ಲಿ ಸಿನಿಮಾಗಳಿಗೆ ಒಂದೇ ಚೇಂಬರ್ ಇರಬೇಕು. ಬೇರೆ ಬೇರೆ ಚೇಂಬರ್ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಒಂದಾಗಿ ಸೇರಿಸಿ ಕೆಲಸ ಮಾಡಬೇಕು. ಹಿರಿಯರ ಸಹಕಾರ ಪಡೆದು ಒಂದಾಗುವ ಕೆಲಸ ಮಾಡುತ್ತೇವೆ. ಎಲ್ಲರ ಜತೆಗೂ ಮಾತುಕತೆ ನಡೆಸುತ್ತೇನೆʼʼ ಎಂದು ಹರೀಶ್ ಹೇಳಿದರು.
ಇದನ್ನೂ ಓದಿ | KFCC Election | ಭಾ. ಮಾ. ಹರೀಶ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಸಾ. ರಾ ಸೋಲು
ʼʼಈ ಚುನಾವಣೆಯನ್ನು ಕ್ರೀಡಾ ಮನೋಭಾವನೆಯಿಂದ ತೆಗೆದುಕೊಂಡಿದ್ದೇವೆ. ಯಾವುದೇ ದ್ವೇಷ, ಅಸೂಯೆ ನಮ್ಮಲ್ಲಿ ಇಲ್ಲ. ಚಲನಚಿತ್ರ ವರ್ಗ ಒಗ್ಗಟ್ಟಾಗಿ ಹೋಗಲಿದೆ. ಯಾವುದೇ ದ್ಷೇಷಕ್ಕೆ ಆಸ್ಪದ ಮಾಡಿಕೊಡದೇ ನಡೆಸಿಕೊಂಡು ಹೋಗುವ ಉದ್ದೇಶ ನಮ್ಮದುʼʼ ಎಂದವರು ಹೇಳಿದರು.
ಸಾ. ರಾ. ಗೋವಿಂದು ಅನೇಕ ದಶಕಗಳಿಂದಲೂ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಹಾಗೂ ಕನ್ನಡ ಪರ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದವರು. ಗೋಕಾಕ್ ಚಳವಳಿಯಂತಹ ಹೋರಾಟದಲ್ಲೂ ಮುನ್ನೆಲೆಯಲ್ಲಿದ್ದ ಗೋವಿಂದು ಅವರು ಕೊರೊನಾ ಸಮಯದಲ್ಲಿ ಕಲಾವಿದರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾ. ರಾ. ಗೋವಿಂದು ಗೆಲ್ಲುವುದು ಸುಲಭ ಎಂಬ ಮಾತುಗಳು ವಾಣಿಜ್ಯ ಮಂಡಳಿ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಭಾ. ಮಾ. ಹರೀಶ್ ಅವರು ಗೆದ್ದು ಗೆಲುವಿನ ನಗೆ ಬೀರಿದ್ದಾರೆ.
ಇದನ್ನೂ ಓದಿ | ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ