ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಹೊಂಡಗಳ (potholes) ದುಃಸ್ಥಿತಿಯನ್ನು ಸರಿಪಡಿಸಲು ಹಲವರು ಹಲವು ವಿಶಿಷ್ಟ ರೀತಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಈ ಟೆಕ್ಕಿಯ (bangalore techie) ಪ್ರಯತ್ನವೂ ಕುತೂಹಲಕಾರಿಯಾಗಿದೆ. ಇವರು ಬೆಂಗಳೂರಿನ ರಸ್ತೆ ಹೊಂಡಗಳನ್ನು ಸರಿಪಡಿಸಲು ಸಾಲ ಮಾಡಿ ಪ್ರಯತ್ನ ಮಾಡುತ್ತಿದ್ದಾರೆ. ಇದುವರೆಗೆ ಅವರು ಇದಕ್ಕಾಗಿ ಮಾಡಿರುವ ಬ್ಯಾಂಕ್ ಸಾಲದ ಮೊತ್ತ 2.5 ಲಕ್ಷ ರೂ.
ಆರಿಫ್ ಮುದ್ಗಲ್ ಇವರ ಹೆಸರು. ಬೆಂಗಳೂರಿನ ರಸ್ತೆಗಳ ಕಳಪೆ ಸ್ಥಿತಿ ನೋಡಿ, ಇದರಲ್ಲಿ ಬಿದ್ದು ಒದ್ದಾಡಿದ, ಗಾಯಗೊಂಡ, ಸತ್ತ ಮಂದಿಯನ್ನು ನೋಡಿದ ಬಳಿಕ ತಡೆಯಲಾಗದೆ ಇವರು ಸಾಧ್ಯವಾದಷ್ಟು ರಸ್ತೆ ಗುಂಡಿಗಳನ್ನು ತಾವೇ ಸರಿಪಡಿಸಲು ನಿರ್ಧರಿಸಿದರು. ಇವರಿಗೆ ಈಗ 32 ವರ್ಷ.
ಇದಕ್ಕೂ ಮುನ್ನ ಇವರು ರಸ್ತೆ ಗುಂಡಿ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುವ “NoDevelopmentNoTax” ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದರು. ಕಳಪೆ ಗುಣಮಟ್ಟದ ರಸ್ತೆಗಳಿಂದಾಗಿ ಆಸ್ತಿ ತೆರಿಗೆ ಪಾವತಿಯನ್ನು ಬಹಿಷ್ಕರಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಯಿತು.
ಆರಿಫ್ ಮುದಗಲ್ ಅವರು ಬೆಂಗಳೂರಿನಲ್ಲಿ ಓಡಾಡುತ್ತಿದ್ದಾಗ ಸ್ವತಃ ಎರಡು ರಸ್ತೆ ಅಪಘಾತಗಳನ್ನು ಕಂಡರು. ಅದರ ಕುರಿತು ಅವರು ಹೇಳುವುದು ಹೀಗೆ: “ಆಗಸ್ಟ್ 14ರಂದು ರಾತ್ರಿ ಒಂದು ರಸ್ತೆ ಗುಂಡಿ ತಪ್ಪಿಸಲು ಪ್ರಯತ್ನಿಸಿದ ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅವರ ಕಾಲು ತುಂಡಾಯಿತು. ಅವರು ಮಂಡ್ಯದವರು ಎಂದು ನನಗೆ ನಂತರ ತಿಳಿಯಿತು. ಒಂಬತ್ತು ಸದಸ್ಯರ ಕುಟುಂಬದ ಏಕೈಕ ಆದಾಯ ಅವರದಾಗಿತ್ತು. ನಾನು ತುಂಬಾ ದುಃಖಿಯಾದೆ. ನಂತರ ನನ್ನ ಅಪಾರ್ಟ್‌ಮೆಂಟ್ ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಹೊಸ ರಸ್ತೆಯೊಂದರ ಗುಂಡಿಯಲ್ಲಿ ಏರಿಳಿಯುವಾಗ ಆಟೋ ಪಲ್ಟಿ ಹೊಡೆದ ಪರಿಣಾಮ ಬಿದ್ದು ಗಾಯಗೊಂಡರು.ʼʼ
ಇದಾದ ಬಳಿಕ ಆರಿಫ್, ತಾವೇ ಗುಂಡಿ ಸರಿಪಡಿಸಲು ಮುಂದಾದರು. ಮುದ್ಗಲ್ ಮತ್ತು ಇನ್ನೂ ಕೆಲವರು ಐದು ವರ್ಷಗಳ ಹಿಂದೆ “ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು” ಎಂಬ ಹೆಸರಿನ ಗುಂಪನ್ನು ಪ್ರಾರಂಭಿಸಿದರು. ಕೈಯಿಂದ ಹಣ ಹಾಕಿ ಗುಂಡಿ ತುಂಬತೊಡಗಿದರು. ಅವರು ಮತ್ತು ಅವರ ತಂಡ ಕೆಲಸ ಮುಂದುವರಿಸಲು ಹಣವಿಲ್ಲದೆ 2.7 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಳ್ಳಬೇಕಾಯಿತು. “ನಾನೂ ಗುಂಪಿನ ಇತರ ಸದಸ್ಯರೂ ಹಣ ಹಾಕಿದ್ದೇವೆ. ಕೆಲವು ಗುಂಡಿಗಳನ್ನು ಸರಿಪಡಿಸಿದ್ದೇವೆ. ಆದರೆ ನಮ್ಮಲ್ಲಿ ಹಣವಿಲ್ಲ, ಆದ್ದರಿಂದ ನಾನು ಸಾಲ ತೆಗೆದುಕೊಂಡೆ” ಎನ್ನುತ್ತಾರೆ ಅವರು.
ಮಿಥಿಲೇಶ್ ಕುಮಾರ್ ಈ ಗುಂಪಿನ ಸದಸ್ಯರಲ್ಲಿ ಒಬ್ಬರು. “ನೋ ಡೆವಲಪ್ಮೆಂಟ್ ನೋ ಟ್ಯಾಕ್ಸ್” ಅಭಿಯಾನವನ್ನು ಪ್ರಾರಂಭಿಸುವುದರ ಹಿಂದಿನ ಪ್ರಮುಖ ಕಾರಣವೆಂದರೆ ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ಸುಧಾರಿಸಲು ಉನ್ನತ ಅಧಿಕಾರಿಗಳ ಕಾಳಜಿಯ ಕೊರತೆ. ರಾಜಕಾರಣಿಗಳು ಈ ವಿಷಯಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಈ ಪ್ರದೇಶಗಳ ನಿವಾಸಿಗಳು ಬೇರೆ ರಾಜ್ಯಗಳು ಅಥವಾ ಸ್ಥಳಗಳಿಂದ ಬಂದವರು ಎಂದು ಅವರು ಭಾವಿಸುತ್ತಾರೆ. ಆದ್ದರಿಂದ ನಾವು ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನವನ್ನು ಪ್ರಾರಂಭಿಸಿದ್ದೇವೆ” ಎಂದು ಅವರು ಹೇಳಿದರು.
ಸುಧಾರಿತ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ ಎಂದು ಗುಂಪಿನ ಸದಸ್ಯರು ಹೇಳುತ್ತಾರೆ.
ಇದನ್ನೂ ಓದಿ: ತನ್ನ ಅಜ್ಜನಿಗಾದ ಸ್ಥಿತಿ ಯಾರಿಗೂ ಆಗಬಾರದು ಎಂದು ರಸ್ತೆ ಗುಂಡಿಗಳನ್ನೆಲ್ಲ ಏಕಾಂಗಿಯಾಗಿ ಮುಚ್ಚಿದ 13ವರ್ಷದ ಬಾಲಕ