Site icon Vistara News

ಎಟಿಎಂನಿಂದ 24 ಲಕ್ಷ ರೂ. ದೋಚಿದ್ದ ಗ್ಯಾಂಗ್​ ಅರೆಸ್ಟ್​; ಹಣ ಹಾಕಿದ್ದವನೇ ಕಳ್ಳರ ಲೀಡರ್​!

ATM Theft

ಪರಪ್ಪನ ಅಗ್ರಹಾರ ಬಳಿಯ ಎಟಿಎಂ ದೋಚಿದ್ದ (ATM Theft) ಗ್ಯಾಂಗ್​​ನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಜುಲೈ 5ರಂದು ಈ ಎಟಿಎಂನಿಂದ 24 ಲಕ್ಷ ರೂಪಾಯಿ ಕಳವಾಗಿತ್ತು. ಅಂದು ಹೆಲ್ಮೆಟ್​ ಹಾಕಿಕೊಂಡು ಬಂದಿದ್ದ ದರೋಡೆಕೋರರು, ಎಟಿಎಂನ ಸೇಫ್ಟಿ ಬಾಗಿಲು ತೆಗೆದು ಅದರಲ್ಲಿದ್ದ 24 ಲಕ್ಷ ರೂಪಾಯಿಯನ್ನು ದೋಚಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆರೋಪಿಗಳಾದ ಮಹೇಶ್, ಅರುಳ್​ ಕುಮಾರ್, ನದೀಂ ಮತ್ತು ಶ್ರೀರಾಮ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ (ATM Thieves Arrested).

ಜುಲೈ 5ರಂದು ಎಟಿಎಂಗೆ ಹಣ ಹಾಕಿದ್ದ ಕೆಲವೇ ಕ್ಷಣದಲ್ಲಿ ದರೋಡೆಯಾಗಿತ್ತು. ಈ ಅರುಳ್ ಕುಮಾರ್ ಅದರ ಮಾಸ್ಟರ್​ ಮೈಂಡ್ ಆಗಿದ್ದ. ಈತ ಸಿಎಂಎಸ್​ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿದ್ದ. ಎಟಿಎಂಗಳಿಗೆ ಹಣ ಹಾಕುವ ಕೆಲಸ ಮಾಡಿಕೊಂಡಿದ್ದ. ಪರಪ್ಪನ ಅಗ್ರಹಾರದ ಬಳಿಯ ಎಟಿಎಂಗೆ ಹಣ ಹಾಕುತ್ತಿರುವ ವಿಷಯವನ್ನು ಮೊದಲೇ ತನ್ನ ಗ್ಯಾಂಗ್​ಗೆ ತಿಳಿಸಿದ್ದ. ಅಂದು ಬ್ಯಾಂಕ್​​ನ ಇತರ ಸಿಬ್ಬಂದಿಯೊಂದಿಗೆ ಅರುಳ್​ ಕುಮಾರ್ ಎಟಿಎಂಗೆ ಹೋಗಿ ಹಣ ಹಾಕಿದ ಬಳಿಕ ಮಷಿನ್​​ನ ಸೇಫ್ಟಿ ಬಾಗಿಲನ್ನು ಸರಿಯಾಗಿ ಹಾಕದೆ ವಾಪಸ್​ ಬಂದಿದ್ದ. ಅತ್ಯಂತ ಸೂಕ್ಷ್ಮವಾಗಿ ಈ ಕೆಲಸ ಮಾಡಿದ್ದ.

ಇದನ್ನೂ ಓದಿ: Theft Case: ಭಟ್ಕಳ ಕಳ್ಳತನ ಪ್ರಕರಣದಲ್ಲಿ ಇಬ್ಬರ ಬಂಧನ, 12 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಹೀಗೆ ಹಣ ಹಾಕಿ ಸ್ವಲ್ಪ ಹೊತ್ತಲ್ಲಿ ಉಳಿದವರು ಇಲ್ಲಿಗೆ ಬಂದಿದ್ದರು. ಅಫ್ಜಲ್ ಅಲಿಯಾಸ್ ನದೀಂ, ಶ್ರೀರಾಮ್​ ಮತ್ತು ಇನ್ನೊಬ್ಬಾತ ಮಹೇಶ್ ಬಂದು ಎಟಿಎಂ ದೋಚಿದ್ದರು. ಕಳ್ಳರು ಹೆಲ್ಮೆಟ್ ಧರಿಸಿಯೇ ಬಂದಿದ್ದರು. ಸೇಫ್ಟಿ ಬಾಗಿಲು ಸರಿಯಾಗಿ ಹಾಕದ ಮಾಹಿತಿ ಅವರಿಗೆ ಗೊತ್ತಿದ್ದರಿಂದ ತುಂಬ ಸಲೀಸಾಗಿಯೇ ಕೆಲಸ ಮುಗಿಸಿಕೊಂಡು ಹೋಗಿದ್ದರು. ಆ ಬಾಗಿಲು ತೆರೆದು, ಅದರಲ್ಲಿದ್ದ ಕರೆನ್ಸಿ ಬಾಕ್ಸ್​ ಪಡೆದು ಪರಾರಿಯಾಗಿದ್ದರು. ರಾತ್ರಿ ಹೊತ್ತಲ್ಲಿ ಕಳ್ಳತನ ನಡೆದಿತ್ತು. ಇದು ಮರುದಿನವೇ ಗೊತ್ತಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೊದಲು ಅರುಳ್​ ಕುಮಾರ್​ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಇದೀಗ ನಾಲ್ವರ ಬಂಧನವಾಗಿದೆ.

Exit mobile version