Site icon Vistara News

New Trains : ರಾಜ್ಯದ ಮೂರು ಹೊಸ ರೈಲುಗಳಿಗೆ ಮೋದಿ ಚಾಲನೆ; ಎಲ್ಲಿಂದ ಎಲ್ಲಿಗೆ ಓಡುತ್ತೆ?

Vande Bharat Modi

ಅಯೋಧ್ಯೆ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಅಯೋಧ್ಯೆಯಲ್ಲಿ ಒಟ್ಟು ಆರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಹಾಗೂ ಎರಡು ಅಮೃತ್‌ ಭಾರತ್‌‌ ಎಕ್ಸ್‌ಪ್ರೆಸ್‌ (Amrit Bharat Express) ರೈಲುಗಳಿಗೆ ಚಾಲನೆ ನೀಡಿದರು. ಅವುಗಳಲ್ಲಿ ಎರಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಮತ್ತು ಒಂದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕರ್ನಾಟಕಕ್ಕೆ ಸಂಬಂಧಪಟ್ಟಿದ್ದು (New Trains) ಎನ್ನುವುದು ವಿಶೇಷ. ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಶ್ರೀ ರಾಮ ಮಂದಿರದ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ನವೀಕೃತ ಅಯೋಧ್ಯೆ ರೈಲು ನಿಲ್ದಾಣದ ಉದ್ಘಾಟನೆ ಸಮಾರಂಭದಲ್ಲಿ ಅವರು ಈ ರೈಲುಗಳಿಗೆ ಚಾಲನೆ ನೀಡಿದರು.

ಮೋದಿ ಅವರು ಚಾಲನೆ ನೀಡಿದ ರೈಲುಗಳು ಇವು

ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್ಗಾಂವ್, ಜಲ್ನಾ-ಮುಂಬೈ, ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಇವು ಮೋದಿ ಅವರಿಂದ ಚಾಲನೆ ಪಡೆದ ಆರು ವಂದೇ ಭಾರತ್‌ ರೈಲುಗಳು. ಇವುಗಳಲ್ಲಿ ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್ಗಾಂವ್ ಕರ್ನಾಟಕಕ್ಕೆ ಸಂಬಂಧಪಟ್ಟವು.

ಹೊಚ್ಚ ಹೊಸ ಮಾದರಿಯ ಎರಡು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್ ರೈಲು ಸೇವೆಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇವು ದರ್ಭಾಂಗಾ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ನಡುವೆ ಓಡಾಡಲಿವೆ.

ಈಗ ರಾಜ್ಯದಲ್ಲಿ ಐದು ವಂದೇ ಭಾರತ್‌ ಸಂಚಾರ

ಈ ಮೂಲಕ ರಾಜ್ಯಕ್ಕೆ ಎರಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮತ್ತು ಒಂದು ಅಮೃತ್‌ ಭಾರತ್‌ ರೈಲು ಸಿಕ್ಕಂತಾಯಿತು. ಈಗಾಗಲೇ ರಾಜ್ಯದಲ್ಲಿ ಮೂರು ವಂದೇ ಭಾರತ್‌ ರೈಲುಗಳು ಓಡಾಡುತ್ತಿವೆ. ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೈದರಾಬಾದ್‌, ಮೈಸೂರು-ಚೆನ್ನೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು (Vande Bharat Trains) ಸಂಚರಿಸುತ್ತಿವೆ, ಇದೀಗ ಮಂಗಳೂರು-ಮುಂಡ್ಗಾವ್‌ ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆಯೂ ಸಂಚಾರ ಆರಂಭಗೊಂಡಿದೆ. ಅಂದರೆ ಒಟ್ಟು ಐದು ರೈಲುಗಳಾದಂತಾಗಿದೆ.

ಇದನ್ನೂ ಓದಿ : PM Narendra Modi: ಅಯೋಧ್ಯೆಗೆ ಪಿಎಂ ನರೇಂದ್ರ ಮೋದಿ ಆಗಮನ, ರೋಡ್‌ ಶೋ ಶುರು; ಇನ್ನೇನು ಕಾರ್ಯಕ್ರಮ?

ಅಮೃತ್‌ ಭಾರತ್‌ ರೈಲು ಆರಂಭ- ಏನು ವಿಶೇಷತೆ?

ಅಮೃತ್‌ ಭಾರತ್‌ ರೈಲು (Amrit Bharat Trains) ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನ ಆಧರಿತವಾಗಿರುವ ಅಮೃತ್‌ ಎಕ್ಸ್‌ಪ್ರೆಸ್‌ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತದೆ. 22 ಕೋಚ್‌ಗಳನ್ನ ಒಳಗೊಂಡಿದ್ದು, 1,800 ಪ್ರಯಾಣಿಕರು ಏಕಕಾಲಕ್ಕೆ ಪ್ರಕಾಣಿಸಬಹುದಾಗಿದೆ. ಅನೇಕ ಐಷಾರಾಮಿ ಸೌಲಭ್ಯಗಳನ್ನೂ ಈ ರೈಲು ಒಳಗೊಂಡಿದೆ.

ರೈಲಿನಲ್ಲಿ ಹೊರಟ ಸಂಸದ ನಳಿನ್‌, ಶಾಸಕರು

ಮಂಗಳೂರು: ಮಂಗಳೂರಿನಿಂದ ಗೋವಾ ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಚಾಲನೆ ನೀಡಿದ ಬೆನ್ನಿಗೇ ಮಂಗಳೂರು ರೈಲು ನಿಲ್ದಾಣದಲ್ಲೂ ಉದ್ಘಾಟನಾ ಸಮಾರಂಭ ನಡೆಯಿತು. ಮಂಗಳೂರು ಸೆಂಟ್ರಲ್ ರೈಲು‌ ನಿಲ್ದಾಣದಿಂದ ಹೊರಟ ವಂದೇ ಭಾರತ್ ರೈಲಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಹಾಗು ಬಿಜೆಪಿ ಕಾರ್ಯಕರ್ತರು ಪ್ರಯಾಣ ಬೆಳೆಸಿದರು.

Exit mobile version