Site icon Vistara News

Traffic | ಹೆಬ್ಬಾಳ ಜಂಕ್ಷನ್‌ ಯೋಜನೆ ಪರಿಶೀಲನೆಗೆ ಕನ್ಸಲ್ಟೆಂಟ್‌ ಸಂಸ್ಥೆ ನೇಮಕ: ಬಿಬಿಎಂಪಿ ಸಭೆಯಲ್ಲಿ ನಿರ್ಧಾರ

ಟ್ರಾಫಿಕ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ವಿವಿಧ ಆಡಳಿತಾತ್ಮಕ ಇಲಾಖೆಗಳ ಸಮನ್ವಯ ಸಭೆ ಸೋಮವಾರ ನಡೆಯಿತು. ಮುಖ್ಯವಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಇಬಿಎಂಪಿ ಹಾಗೂ ಬೆಂಗಳೂರು ಪೊಲೀಸ್‌ ಹಮ್ಮಿಕೊಂಡಿರುವ ವಿಶೇಷ ಯೋಜನೆಯ ಪರಿಶೀಲನೆಗೆ ಕನ್ಸಲ್ಟೆಂಟ್‌ ಸಂಸ್ಥೆಯನ್ನು ನೇಮಕ ಮಾಡಲು ನಿರ್ಧರಿಸಲಾಯಿತು. ಬಿಬಿಎಂಪಿ ಕಚೇರಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ನೇತೃತ್ವದಲ್ಲಿ 3ನೇ ಸಮನ್ವಯ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಪರಿಹಾರಗಳ ಜತೆಗೆ ಶಾಶ್ವತ ಪರಿಹಾರಗಳಿಗೂ ಹೆಚ್ಚು ಆದ್ಯತೆ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ರಾಕೇಶ್‌ ಸಿಂಗ್‌ ಸೂಚಿಸಿದರು.

ಸಭೆಯ ನಂತರ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ, ಬಿಬಿಎಂಪಿ ಹಾಗು ನಮ್ಮ ಇಲಾಖೆ ನಡುವೆ ಟ್ರಾಫಿಕ್ ಸಂಬಂಧ ಮಾತುಕತೆ ನಡೆದಿದೆ. ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಪ್ರಯತ್ನ ನಡೆಸಿದ್ದೇವೆ. ಅದನ್ನು ನಾವು ಸಮರ್ಪಕವಾಗಿ ನಿಭಾಯಿಸಬೇಕು. ಸಮರ್ಪಕವಾಗಿ ನಿರ್ವಹಣೆ ಆಗಿದೆಯೋ ಇಲ್ಲವೋ ಎಂಬುದನ್ನು ನಾವು ನಿರ್ಧಾರ ಮಾಡುವುದು ಬೇಡ. ಬದಲಾಗಿ ಥರ್ಡ್ ಪಾರ್ಟಿ ಕನ್ಸಲ್ಟೆಂಟ್‌ ಮೂಲಕ ಪರೀಶೀಲನೆ ಮಾಡಲು ಒಪ್ಪಿಗೆಯಾಗಿದೆ ಎಂದರು.

ಸಭೆಯಲ್ಲಿ ರಾಕೇಶ್‌ ಸಿಂಗ್‌ ಮಾತನಾಡಿ, ಗೊರೆಗುಂಟೆಪಾಳ್ಯ ಜಂಕ್ಷನ್‌ನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಪೈಕಿ ಈಗಾಗಲೇ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತಾಜ್ ವಿವಾಂತದ ಪಕ್ಕದಲ್ಲಿ ಉಚಿತ ಎಡ ತಿರುವು ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು. ಜತೆಗೆ ಗೊರಗುಂಟೆ ಪಾಳ್ಯದ ಹೊರ ವರ್ತುಲ ರಸ್ತೆಗೆ 990 ಮೀ. ಸಮಾನಾಂತರ ರಸ್ತೆಗೆ ಡಾಂಬರೀಕರಣವನ್ನು ತಕ್ಷಣವೇ ತೆಗೆದುಕೊಳ್ಳಬೇಕು.

ಇದನ್ನೂ ಓದಿ | ಟ್ರಾಫಿಕ್‌ ಕಿರಿಕ್‌ | ಹೆಬ್ಬಾಳ ಜಂಕ್ಷನ್ ಬಳಿ ಇಂದಿನಿಂದ ಹೊಸ ರೂಲ್ಸ್

ಶೌಚಾಲಯಕ್ಕಾಗಿ ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು 10 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬಿಡಿಎ ವತಿಯಿಂದ ಅಳವಡಿಸಬೇಕಿರುವ ಸೈನೇಜ್ ವಿನ್ಯಾಸ ಮುಗಿಯುವ ಹಂತಕ್ಕೆ ಬಂದಿದ್ದು, ವಾರದೊಳಗಾಗಿ ಅಳವಡಿಸಬೇಕು. ಪಾದಚಾರಿ ಮೇಲುಸೇತುವೆಯ ಟೆಂಡರ್ ಪ್ರಕ್ರಿಯೆಯನ್ನು ಕೂಡಲೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಎಂಟಿಸಿ ವತಿಯಿಂದ ಪ್ರಕಾಶಮಾನವಾಗಿರುವಂತಹ ಪ್ರದರ್ಶನ ಫಲಕಗಳನ್ನು ಹಾಕಲು ಮತ್ತು ವೀಕ್ಷಣಾ ಅಧಿಕಾರಿಗಳನ್ನು ನಿಯೋಜಿಸಲು ಬಿಎಂಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಎಲ್ಲ 6 ಪ್ರಮುಖ ಜಂಕ್ಷನ್‌ಗಳಲ್ಲಿ ತಲಾ 25 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಜನರಿಂದಲ್ಲೇ ಟ್ರಾಫಿಕ್‌ ಜಂಕ್ಷನ್‌ ಕುರಿತು ಮಾಹಿತಿ ಲಭ್ಯವಾಗುತ್ತಿದ್ದು, ಮೊದಲ ಪ್ರಾಯೋಗಿಕವಾಗಿ ಹೆಬ್ಬಾಳದಲ್ಲಿ ರೂಟ್‌ ಮ್ಯಾಪ್‌ ಹಾಕಲಾಗಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್‌ ಸಿಗಲಿದೆ ಎಂಬುದನ್ನು ಕಾದುನೋಡಬೇಕು ಎಂದರು.

ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ

ಸಭೆಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಶಿವಾನಂದ ಮೇಲುಸೇತುವೆ ಕಾಮಗಾರಿಯನ್ನು ಆಗಸ್ಟ್ 5ರಂದು ಪೂರ್ಣಗೊಳಿಸಲು ಯೋಜನಾ ವಿಭಾಗದ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು. ಜಯದೇವ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆಯಲ್ಲಿರುವ ಭಗ್ನಾವಶೇಷಗಳನ್ನು ಬಿಎಂಆರ್‌ಸಿಎಲ್‌ನಿಂದ ತೆರವುಗೊಳಿಸಲಾಗಿದೆ. ಬನ್ನೇರುಘಟ್ಟ ರಸ್ತೆಯ ಗುಣಮಟ್ಟವನ್ನು ಹೆಚ್ಚಿಸಬೇಕಿದ್ದು, ಜಯದೇವ ಕೆಳಸೇತುವೆ ಕಾಮಗಾರಿಯನ್ನು ಜುಲೈ 15ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜತೆಗೆ ಗಾಳಿ ಆಂಜನೇಯ ದೇವಸ್ಥಾನ ಜಂಕ್ಷನ್, ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಸುಮನಹಳ್ಳಿ ಜಂಕ್ಷನ್‌ನಲ್ಲಿ ಪಾದಚಾರಿ ಮೇಲುಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆಂಪೇಗೌಡ ರಸ್ತೆ(ಕೆ.ಜಿ.ರಸ್ತೆ)ಯ ಸಂತೋಷ್ ಚಿತ್ರಮಂದಿರದ ಬಳಿಯಿರುವ ಪಾದಚಾರಿ ಮೇಲುಸೇತುವೆಯು ಶಿಥಿಲಗೊಂಡಿದ್ದು, ಅದನ್ನು ಕೂಡಲೆ ತೆರವುಗೊಳಿಸಿ ಹೊಸದಾಗಿ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ | Traffic | ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಕಂಟ್ರೋಲ್‌ಗೆ ಜುಲೈ 8ರಿಂದ ಹೊಸ ರೂಲ್ಸ್‌?

Exit mobile version