ಬೆಂಗಳೂರು: ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಬೆಂಗಳೂರಿನ ವಿವಿಧೆಡೆ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಿಂದಾಗಿ ವಿವಿಧೆಡೆ ಸಂಚಾರ ದಟ್ಟಣೆ (Traffic Jam) ಉಂಟಾಯಿತು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಪ್ರಮುಖರು ಭಾಗವಹಿಸಿದ್ದ ಎಂ.ಜಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ಬಿಸಿ ಹೆಚ್ಚಾಗಿ ತಟ್ಟಿತು.
ಟ್ರಿನಿಟಿ ಚರ್ಚ್ ಬಳಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜಮಾವಣೆ ಹಿನ್ನೆಲೆ ಉಂಟಾದ ಟ್ರಾಫಿಕ್‌ನಿಂದ ವಾಹನ ಸವಾರರು ಪರದಾಡಿದರು. ಟ್ರಾಫಿಕ್ ನಿಯಂತ್ರಣ ಮಾಡಲು ಟ್ರಾಫಿಕ್ ಪೊಲೀಸರು ಹರ ಸಾಹಸಪಟ್ಟರು.
ಇದನ್ನೂ ಓದಿ | ಭ್ರಷ್ಟರು ಯಾರು? ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್, ಪೋಸ್ಟರ್ ಸಮರ
ಕೆ.ಆರ್. ಮಾರುಕಟ್ಟೆ ಬಳಿಯೂ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರತಿಭಟನೆ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಕೆ.ಆರ್.ಮಾರ್ಕೆಟ್ ಸಿಗ್ನಲ್ ಬಳಿ ಒಂದು ಬಸ್, 4 ಜೀಪ್ ಗಳ ಜೊತೆ ಪೊಲೀಸರು ನಿಯೋಜನೆಯಾಗಿದ್ದರು. ಆನಂದ್‌ರಾವ್ ವೃತ್ತ ಸೇರಿ ಕಮಿಷನರ್ ಕಚೇರಿವರೆಗೆ, ಅಶೋಕ ಪಿಲ್ಲರ್, ಎಂದಿಗಿಂತ ಹೆಚ್ಚಿನ ಸಂಚಾರ ದಟ್ಟಣೆ ಇದ್ದದ್ದು ಕಂಡುಬಂದಿತು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಎಸ್ಟೀಮ್ ಮಾಲ್ ಬಳಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.