ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಏರಿಯಾ ಎಂದರೆ ಅದು ಹೆಬ್ಬಾಳ ಜಂಕ್ಷನ್. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವರು ಈ ಮಾರ್ಗವನ್ನೇ ಬಳಸಬೇಕಾದ ಕಾರಣ ದಿನದ ಬಹುತೇಕ ಸಮಯದಲ್ಲಿ ಈ ವಾಹನ ದಟ್ಟಣೆಯನ್ನು ದಾಟಿಯೇ ಹೋಗಬೇಕಿದೆ.
ಸದ್ಯ ಹೆಬ್ಬಾಳ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆ ನಿವಾರಣೆಗೆ ಅಧ್ಯಯನ ಮಾಡಲಾಗಿದೆ. ಬೆಂಗಳೂರು ಸಂಚಾರ ಪೊಲೀಸ್, ಬಿಬಿಎಂಪಿ, ಬಿಎಂಆರ್ ಸಿಎಲ್, ಎನ್ಎಚ್ಎ ಮುಂತಾದ ಇಲಾಖೆಗಳ ಸಹಯೋಗ ಮತ್ತು ಸಮನ್ವಯದೊಡನೆ ಹೊಸ ವ್ಯವಸ್ಥೆ ಜಾರಿ ಮಾಡಲು ತಯಾರಿ ನಡೆದಿದೆ.
ಈ ಜಂಕ್ಷನ್‌ನಲ್ಲಿರುವ ವಾಹನಗಳ ಓಡಾಟದ ಆಧ್ಯಯನ, ದತ್ತಾಂಶ ಮತ್ತು ವಾಹನ ದಟ್ಟಣೆಗೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸಿ, ಕೆಲವು ಬದಲಾವಣೆಗಳನ್ನು ಮಾಡಲು ಅಧಿಕಾರಿಗಳು ಉದ್ದೇಶಿಸಿದ್ದಾರೆ. ಹೀಗಾಗಿ ಜುಲೈ 8ರಿಂದ ಈ ಮಾರ್ಗದ ವಾಹನ ಓಡಾಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ | ಸಂಚಾರ ದಟ್ಟಣೆ ಹೆಚ್ಚಿರುವ 10 ಪ್ರದೇಶಗಳ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಎಲ್ಲಿಂದ ಎಲ್ಲಿಗೆ ಬರಬೇಕು?
-ಯಲಹಂಕ, ಕೊಡಿಗೇಹಳ್ಳಿ, ಕೆಂಪಾಪುರ, ಜಕ್ಕೂರು ಇತ್ಯಾದಿ ಕಡೆಗಳಿಂದ ಸರ್ವಿಸ್ ರಸ್ತೆಯ ಮೂಲಕ ನಗರಕ್ಕೆ ಹೋಗುವ ವಾಹನಗಳು ನೇರವಾಗಿ ಹೆಬ್ಬಾಳ ಫ್ಲೈಓವರ್ ಪ್ರವೇಶಿಸುವಂತಿಲ್ಲ. ಬದಲಿಗೆ ಹೆಬ್ಬಾಳ ಸರ್ಕಲ್‌ನಲ್ಲಿರುವ ಲೂಪ್ ರ‍್ಯಾಂಪ್ ಅನ್ನು ಬಳಸಿ ನಗರಕ್ಕೆ ಬರಬೇಕು.
-ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್‌ನಿಂದ ಬೆಂಗಳೂರು ನಗರದ ಕಡೆಗೆ ಬರುವ ಬಸ್‌ಗಳು ಹೆಬ್ಬಾಳ ಸರ್ಕಲ್‌ನಲ್ಲಿ ಬಸ್ ಪ್ರಯಾಣಿಕರನ್ನು ನಿಗದಿಪಡಿಸಿದ ಬಸ್ ವೇನಲ್ಲಿ ಲೂಪ್ ರ‍್ಯಾಂಪ್‌ಗಿಂತ ಮುಂಚಿತವಾಗಿ ಹತ್ತಿಸಿಕೊಳ್ಳಬೇಕು.
-ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ನಗರಕ್ಕೆ ಬರುವ ವಾಹನಗಳು ಮೊದಲಿನಂತೆ ಹೆಬ್ಬಾಳ ಫೈಓವರ್ ಮೂಲಕ ನಗರ ಪ್ರವೇಶಿಸಬಹುದು.
– ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಕೆ.ಆರ್.ಪುರಂ, ತುಮಕೂರು ಕಡೆಗೆ ಹೋಗುವವರಿಗೆ ಮೊದಲಿನಂತೆ ಸರ್ವಿಸ್ ರಸ್ತೆ ಮೂಲಕ ಹೋಗಲು ಅನುವು ಮಾಡಿಕೊಡಲಾಗಿದೆ.
– ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿ ಮೂಲಕ ಕೆಂಪಾಪುರಕ್ಕೆ ಹೋಗುವವರು ವಿದ್ಯಾಶಿಲ್ಪ/ಯಲಹಂಕ ಬೈಪಾಸ್ ಬಳಿ ಸರ್ವಿಸ್ ರಸ್ತೆಯನ್ನು ಬಳಸಬೇಕು.
ಈ ವ್ಯವಸ್ಥೆ ಜಾರಿಗಾಗಿ ಪೂರಕವಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಮತ್ತು ಸೂಚನಾ ಫಲಕಗಳನ್ನು ಹಾಕಲಾಗುವುದೆಂದು ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ಈ ವ್ಯವಸ್ಥೆಯನ್ನು ಜುಲೈ 8ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಪ್ರಾರಂಭಿಸಲಾಗುವುದು. ಹೆಬ್ಬಾಳ ಜಂಕ್ಷನ್‌ನಲ್ಲಿ ಬಸ್‌ಗಳ ನಿಲುಗಡೆ ಸ್ಥಳ ಬದಲಾವಣೆ, ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲ, ಅಡ್ಡಾದಿಡ್ಡಿ ಬಸ್ ನಿಲುಗಡೆಯ ನಿಷೇಧ ಸೇರಿದಂತೆ ಮುಂತಾದ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.
ಇದನ್ನೂ ಓದಿ | Traffic | ಬೆಂಗಳೂರು ಟ್ರಾಫಿಕ್ ಜಾಮ್ ಮುಕ್ತಿಗೆ ನಾನಾ ಇಲಾಖೆಗಳ ಸಮನ್ವಯ