ಬೆಂಗಳೂರು: ಬೆಂಗಳೂರು ನಗರದಲ್ಲಿ ಮೊದಲೇ ಪಾರ್ಕಿಂಗ್ (Traffic Violation) ಸಮಸ್ಯೆ ಹೆಚ್ಚಿದೆ. ಹೀಗಿರುವಾಗ ದಿನವಿಡೀ ಒಂದೇ ಸ್ಥಳದಲ್ಲಿ ವಾಹನವನ್ನು ಪಾರ್ಕ್ ಮಾಡಿ (Vehicle Parking) ಹೋಗುವವರಿಗೆ ಇನ್ಮೇಲೆ ಸಂಕಷ್ಟ ಎದುರಾಗಲಿದೆ. ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಬಿಸಿ ಮುಟ್ಟಿಸಲು ಶುರು ಮಾಡಿದ್ದಾರೆ.
ನಗರದಲ್ಲಿ ಟೋಯಿಂಗ್ ನಿಂತು ಹೋಗಿದೆ. ಬಹುತೇಕ ಡಿಜಿಟಲ್ ಆಗಿರುವ ಕಾರಣ ಟ್ರಾಫಿಕ್ ಫೈನ್‌ಗಳೂ ಕೂಡ ಡಿಜಿಟಲೈಸ್ ಆಗಿದೆ. ಇದರಿಂದ ಡಿಡಿ ಕೇಸ್‌ಗಳು ಬಿಟ್ಟು ಬೇರೆ ಟ್ರಾಫಿಕ್ ಅಫೆನ್ಸ್‌ಗಳಿಗಾಗಿ ಪೊಲೀಸರು ರಸ್ತೆಯ ತಿರುವಿನಲ್ಲಿ ಕೂಡ ನಿಲ್ಲುತ್ತಿಲ್ಲ. ಇದನ್ನೇ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಟೋಯಿಂಗ್ ಅವರು ಹಿಂಸೆ ಕೊಡುತ್ತಾರೆ ಎಂದು ಎಲ್ಲೆಡೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಕೆಲವರು ಈಗಲೂ ನಡು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ, ಉಳಿದ ವಾಹನ ಸವಾರರಿಗೆ ತೊಂದರೆ ಕೊಡುತ್ತಿರುವುದಂತೂ ಸತ್ಯ. ಒಂದೇ ಸ್ಥಳದಲ್ಲಿ ದಿನವಿಡೀ ವಾಹನ ಪಾರ್ಕಿಂಗ್ ಮಾಡೋದ್ರಿಂದ, ಅಗತ್ಯ ಇರುವ ಇತರೆ ಸವಾರರಿಗೆ ನಿಜಕ್ಕೂ ತೊಂದರೆ ಆಗುತ್ತಿದೆ.
ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!
ಸದ್ಯ ದಿನಗಟ್ಟಲೆ ವಾಹನವನ್ನು ಒಂದೇ ಕಡೆ ನಿಲ್ಲಿಸಿದವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪಾರ್ಕಿಂಗ್ ಸ್ಥಳವು ತುರ್ತು ಇದ್ದವರಿಗೆ ಉಪಯೋಗ ಆಗುತ್ತಿಲ್ಲ. ಪಾರ್ಕಿಂಗ್ ಜಾಗ ಇದೆ ಎಂದು ಕೆಲವರು ದಿನಗಟ್ಟಲೆ ವಾಹನಗಳನ್ನು ನಿಲ್ಲಿಸಿ ಹೋಗುವುದನ್ನು ಸಂಚಾರಿ ಪೊಲೀಸರು ಗಮನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಹಲವು ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಸಿಟಿವಿ ವಿಡಿಯೊ ಧರಿಸಿ ಸಮಯವನ್ನು ಪತ್ತೆ ಮಾಡಿರುವ ಪೊಲೀಸರು, ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಷ್ಟೆ ಅಲ್ಲದೆ ವಾಹನ ಅಡ್ಡಾದಿಡ್ಡಿ ನಿಲ್ಲಿಸಿದ ಕಾರಣ ಫುಟ್ ಪಾತ್‌ನಲ್ಲಿ ಓಡಾಡುವವರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 1,300 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ವಾಹನಗಳನ್ನು ಬಿಡಿಸಿಕೊಂಡು ಹೋಗದೆ ಇದ್ದರೆ ಅದನ್ನು ಹರಾಜು ಹಾಕಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 1,500 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1,388 ಮಾಲೀಕರು ದಂಡಕಟ್ಟಿ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಇನ್ನೂ ನಂಬರ್ ಪ್ಲೇಟ್ ಇಲ್ಲದ 64 ವಾಹನಗಳು ಮೈಲಸಂದ್ರ ಪಾರ್ಕಿಂಗ್ ಯಾರ್ಡ್‌ಗೆ ಹಸ್ತಾಂತರ ಮಾಡಲಾಗಿದೆ. ಮಾಲೀಕರು ಪತ್ತೆಯಾಗದ ವಾಹನಗಳನ್ನು ನ್ಯಾಯಾಲಯದ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ