Site icon Vistara News

Tungabhadra Dam: ರಾಜ್ಯದ ಎಲ್ಲ ಡ್ಯಾಮ್‌ಗಳ ಪರಿಶೀಲನೆಗೆ ಸಮಿತಿ ರಚನೆ: ಡಿ.ಕೆ. ಶಿವಕುಮಾರ್ ಸುಳಿವು

Tungabhadra Dam

ಬೆಂಗಳೂರು: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಜತೆಗೆ ನದಿಪಾತ್ರಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇದೀಗ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಎಲ್ಲ ಡ್ಯಾಮ್‌ಗಳ ಗುಣಮಟ್ಟ ಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದೆ. ತಜ್ಞರ ನೇತೃತ್ವದಲ್ಲಿ ಪರಿಶೀಲನೆ ಸಮಿತಿ ರಚಿಸುವ ಸಾಧ್ಯತೆ ಇದೆ. ಸಮಿತಿ ಅಣೆಕಟ್ಟುಗಳನ್ನು ಪರಿಶೀಲಿಸಿದ ಬಳಿಕ ವಾಸ್ತವಾಂಶವನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸುಳಿವು ನೀಡಿದ್ದಾರೆ.

ಕ್ರಮ ಕೈಗೊಂಡಿದ್ದೇವೆ

ತುಂಗಭದ್ರಾ ಡ್ಯಾಮ್‌ಗೆ ಭೇಟಿ ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ʼʼಟಿಬಿ ಡ್ಯಾಮ್‌ಗೆ ಹೋಗಿದ್ದೆ. ದುರಸ್ತಿಗೆ ಕ್ರಮ ತೆಗೆದುಕೊಂಡಿದ್ದೇವೆ. ಜತೆಗೆ ಯಾರಿಗೂ ತೊಂದರೆಯಾಗದಂತೆ ತಕ್ಷಣವೇ ಮುಂಜಾಗ್ರತೆ ವಹಿಸಲಾಗಿದೆ. ದುರಸ್ತಿ ಕುರಿತು ಎಲ್ಲ ಗುತ್ತಿಗೆದಾರರ ಜತೆ ಮಾತಾಡಿದ್ದೇನೆ. ಡ್ಯಾಮ್‌ನ ಸ್ಕೆಚ್‌ ಕಳಿಸಿಕೊಟ್ಟಿದ್ದೇವೆ. ನಾಲ್ಕೈದು ದಿನಗಳಲ್ಲಿ ದುರಸ್ತಿಯಾಗಲಿದೆʼʼ ಎಂದು ತಿಳಿಸಿದ್ದಾರೆ.

ನಾಳೆ ಸಿಎಂ ಭೇಟಿ

ʼʼನಾಳೆ (ಆಗಸ್ಟ್‌ 13) ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ನಾನು ತಂತ್ರಜ್ಞರೊಂದಿಗೆ ಚರ್ಚೆ ನಡೆಸಿದ್ದೇನೆ. ಯಾರು ಗಾಬರಿ ಪಡಬೇಕಿಲ್ಲ. ಬಹಳ ಅಪಾಯಕಾರಿ ಪರಿಸ್ಥಿತಿ ಇದ್ದಿದ್ದಂತೂ ಹೌದು. ಡ್ಯಾಂನ 70 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೀಗೆ ಆಗಿದೆ. ಸುರಕ್ಷತೆ ಖಚಿತಪಡಿಸಲು ಒಂದು ತಂಡ ಮಾಡಿ ಎಲ್ಲ ಡ್ಯಾಮ್‌ಗಳಿಗೂ ಕಳಿಸಿ ಕೊಡುತ್ತಿದ್ದೇವೆʼʼ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ʼʼನಾಳೆ ಅಥವಾ ನಾಡಿದ್ದು ತಜ್ಞರ ಸಮಿತಿ ರಚನೆ ಮಾಡುತ್ತೇವೆ. ಆ ಸಮಿತಿ ಎಲ್ಲ ಡ್ಯಾಮ್‌ಗಳಿಗೂ ತೆರಳಲಿದೆ. ಬೇರೆ ಕಡೆ ಎರಡೆರಡು ಆಯ್ಕೆ ಇದೆ. ಅಂದರೆ ಒಂದು ಗೇಟ್‌ಗೆ ಎರಡು ಲಿಂಕ್ ಇದ್ದಾವೆ. ಆದರೆ ತುಂಗಭದ್ರಾ ಡ್ಯಾಮ್‌ನಲ್ಲಿ ಒಂದೇ ಚೈನ್‌ ಇತ್ತು. ಅದು ಈಗ ತುಂಡಾಗಿದೆ. 55-60 ಟಿಎಂಸಿ ನೀರು ಉಳಿಸುವ ವ್ಯವಸ್ಥೆ ಆಗುತ್ತಿದೆʼʼ ಎಂದು ಅವರು ವಿವರಿಸಿದ್ದಾರೆ.

ಆರೋಪಕ್ಕೆ ತಿರುಗೇಟು

ಡ್ಯಾಮ್‌ಗೆ ಸರ್ಕಾರ ತಕ್ಕ ಮಾನ್ಯತೆ ಕೊಟ್ಟಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಡಿಕೆಶಿ, ʼʼಆರೋಪಗಳನ್ನು ಮಾಡುವವರು,
ರಾಜಕೀಯ ಮಾತನಾಡುವವರು ಏನು ಬೇಕಾದರೂ ಹೇಳಲಿ. ವಾಸ್ತವಾಂಶ ಬೇರೆಯದೇ ಇದೆ. ತುಂಗಭದ್ರಾ ಡ್ಯಾಮ್ ಅನ್ನು ಸರ್ಕಾರ ಕಂಟ್ರೋಲ್ ಮಾಡಲ್ಲ. ಅದಕ್ಕೆ ಆದ ಸಮಿತಿ ಇದೆ. ನಾವು ಅದರ ಸದಸ್ಯರು ಅಷ್ಟೇʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌; ನದಿಪಾತ್ರದಲ್ಲಿ ಪ್ರವಾಹ ಭೀತಿ

ಇನ್ನು ಇದೇ ವೇಳೆ ಬೆಂಗಳೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದ ಆದ ಅವಾಂತರಗಳ ಬಗ್ಗೆ ಮಾತನಾಡಿದ ಅವರು, ʼʼಬೆಂಗಳೂರಿನಲ್ಲಿರುವ ಯಾವ ಕೆರೆಗಳೂ ತುಂಬಿಲ್ಲ. ಹೀಗಾಗಿ ಮಳೆ ಬರಬೇಕು. ಅಪಾರ್ಟ್‌ಮೆಂಟ್​​ಗಳಿಗೆ ನೀರು ನುಗ್ಗಿದ್ದರೆ ಅದನ್ನು ಸರಿ ಮಾಡೋಣ. ಕನಕಪುರ, ಮಾಗಡಿ, ಚನ್ನಪಟ್ಟಣ, ತುಮಕೂರು, ಕುಣಿಗಲ್, ಕೋಲಾರ ಸುತ್ತಮುತ್ತಲೂ ಮಳೆ ಬಂದಿಲ್ಲ. ಹೀಗಾಗಿ ಉತ್ತಮ ಮಳೆಯಾಗಬೇಕುʼʼ ಎಂದು ಹೇಳಿದ್ದಾರೆ.

ರೈತರ ಒಂದು ಬೆಳೆಗಾದರೂ ನೀರನ್ನು ಉಳಿಸುತ್ತೇವೆ

ಭಾನುವಾರ ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ್ದ ಡಿಕೆಶಿ, ʼʼಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಗೇಟನ್ನು ಮತ್ತೆ ಹಾಕಬೇಕೆಂದರೆ ಒತ್ತಡ ಕಡಿಮೆ ಮಾಡಬೇಕಿದೆ. ಜಲಾಶಯದಲ್ಲಿ 150 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಜಲಾಶಯಕ್ಕೆ ಒಳಹರಿವು 28,000 ಕ್ಯೂಸೆಕ್ ಇದೇ. ಕನಿಷ್ಠ ನಮ್ಮ ರೈತರಿಗೆ ಒಂದು ಬೆಳಗಾದರೂ ಒದಗಿಸುವಷ್ಟು ನೀರನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ರೈತರು ಆತಂಕ ಪಡಬೇಕಾಗಿಲ್ಲ. ಸರ್ಕಾರ ನಿಮ್ಮ ಜತೆಗಿದೆ” ಎಂದು ತಿಳಿಸಿದ್ದರು.

Exit mobile version