ಬೆಂಗಳೂರು: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯ (Tungabhadra Dam)ದ 19 ನಂಬರ್ ಕ್ರಸ್ಟ್ ಗೇಟ್ನ ಚೈನ್ ತುಂಡಾಗಿದ್ದು ಅಪಾರ ಪ್ರಮಾಣದ ನೀರು ನದಿಪಾತ್ರಕ್ಕೆ ಹರಿದು ಹೋಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ (Dr. G. Parameshwar) ಅವರು, ʼʼಸರ್ಕಾರ ಅಲ್ಲಿಗೆ ತಾಂತ್ರಿಕ ತಂಡವನ್ನು ಕಳುಹಿಸುತ್ತಿದೆ. ನದಿಪಾತ್ರದ ಊರುಗಳಲ್ಲಿ ಪ್ರವಾಹ ಆಗುವ ಭಯ ಬೇಡ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. ಕ್ರಸ್ಟ್ ಗೇಟ್ ರಿಪೇರಿ ಮಾಡಲು ಸಾಧ್ಯವಿದೆʼʼ ಎಂದು ಅಭಯ ನೀಡಿದ್ದಾರೆ.
ʼʼಪ್ರವಾಹ ಭೀತಿ ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳುತ್ತಿದ್ದಾರೆ. ತಾಂತ್ರಿಕ ತಂಡ ಹೋದ ನಂತರ ಎಲ್ಲ ಸರಿಯಾಗುವ ವಿಶ್ವಾಸ ಇದೆʼʼ ಎಂದು ತಿಳಿಸಿದ್ದಾರೆ.
ಸರ್ಕಾರ ಎಲ್ಲಿದೆ? ಮಾಜಿ ಸಚಿವ ಹಾಲಪ್ಪ ಆಚಾರ್ ಆಕ್ರೋಶ
ಕೊಪ್ಪಳ: ತುಂಗಭದ್ರಾ ಜಲಾಶಯ ಪರಿಶೀಲಿಸಿದ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼʼಜಲಾಶಯದ 19ನೇ ಗೇಟ್ ಅಡ್ರೆಸ್ ಇಲ್ಲದಂತೆ ನಾಪತ್ತೆಯಾಗಿದೆ. ಉಳಿದ ಗೇಟ್‌ಗಳಲ್ಲಿ ಕೂಡ ಬಿರುಕು ಕಂಡು ಬಂದಿದೆ. ಇಂತಹ ಘಟನೆ ನಡೆದಿದ್ದರೂ ಜವಾಬ್ದಾರಿ ಇರುವ ಸರ್ಕಾರ ಎಲ್ಲಿದೆ?ʼʼ ಎಂದು ಪ್ರಶ್ನಿಸಿದ್ದಾರೆ.
ʼʼ4 ಜಿಲ್ಲೆಯ 10 ಲಕ್ಷ ಎಕರೆ ಪ್ರದೇಶದ ರೈತರು ಇದೇ ಡ್ಯಾಂ ನೀರನ್ನು ನೆಚ್ಚಿಕೊಂಡಿದ್ದಾರೆ. ನೀರು ಅಪಾರ ಪ್ರಮಾಣದಲ್ಲಿ ಹರಿ ಹೋಗುತ್ತಿರುವುದಿಂದ ಪ್ರವಾಹ ಭೀತಿ ಜತೆಗೆ ಮುಂದೆ ನೀರು ಖಾಲಿಯಾಗುವ ಆತಂಕವೂ ಇದೆ. ರೈತರ ತಲೆ ಮೇಲೆ ಸರ್ಕಾರ ಬಂಡೆ ಹಾಕಿದಂತಾಗಿದೆ. ಯಾವುದೇ ಯೋಜನೆಯಿರಲಿ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಆದರೆ ಇಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ನಿರ್ಲಕ್ಷ್ಯದಿಂದ ಈ ರೀತಿ ಪರಿಸ್ಥಿತಿ ಎದುರಾಗಿದೆʼʼ ಎಂದು ದೂರಿದ್ದಾರೆ.
ʼʼಇದು ಸರ್ಕಾರದ ತಪ್ಪು. ಜಲಾಶಯದ ಸ್ಥಿತಿಗೆ ಸರ್ಕಾರವೇ ನೇರ ಹೊಣೆ. ಜಲಾಶಯ ನಿರ್ವಹಣೆಗೆ ಅನುದಾನ ಇರುತ್ತದೆ. ಒಂದುವೇಳೆ ಇಲ್ಲದಿದ್ದರೆ ರಾಜ್ಯ ಸರ್ಕಾರ ನೀಡಬೇಕು. ಕಾಂಗ್ರೆಸ್ ಸರ್ಕಾರದಿಂದ ಬೇಜವಬ್ದಾರಿತನದಿಂದ ಆಡಳಿತ ನಡೆಯುತ್ತಿದೆ. ಯುದ್ದೋಪಾದಿಯಲ್ಲಿ ಗೇಟ್ ರಿಪೇರಿ ಕೆಲಸವಾಗಬೇಕಿತ್ತು. ಆದರೆ ಇಲ್ಲಿವರಗೆ ರಿಪೇರಿ ಕೆಲಸ ಆರಂಭವಾಗಿಲ್ಲʼʼ ಎಂದು ಹೇಳಿದ್ದಾರೆ.
ನೀರು ಉಳಿಸಬೇಕು: ಸಂಸದ ತುಕಾರಾಂ
ವಿಜಯನಗರ: ʼʼತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿಯಲು ಏನು ಕಾರಣ ಎನ್ನುವುದು ಗೊತ್ತಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೋ ತಾಂತ್ರಿಕ ತೊಂದರೆಯೋ ಎನ್ನುವುದು ತಿಳಿದು ಬಂದಿಲ್ಲ. ಮೊದಲು ಹರಿದು ಹೋಗುತ್ತಿರುವ ನೀರನ್ನು ಉಳಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದೇನೆʼʼ ಎಂದ ಸಂಸದ ತುಕಾರಾಂ ತಿಳಿಸಿದ್ದಾರೆ.
ಜಲಾಶಯ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ʼʼಗೇಟ್ ದುರಸ್ತಿಗಾಗಿ ಪರಿಣಿತರನ್ನು ಕರೆಸುತ್ತಿದ್ದೇವೆ. ಈಗಾಗಲೇ ನೀರಾವರಿ ನಿಗಮದ ಎಂಡಿ ಬಂದಿದ್ದಾರೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಮತ್ತು ನಾನು ರೈತರ ಜತೆ ಇದ್ದೇ ಇರುತ್ತೇವೆʼʼ ಎಂದು ತಿಳಿಸಿದ್ದಾರೆ.
ಬಾಗಿನ ಅರ್ಪಣೆ ಕಾರ್ಯಕ್ರಮ ಮುಂದೂಡಿಕೆ
ಸೋಮವಾರ (ಆಗಸ್ಟ್ 13) ನಿಗದಿಯಾಗಿದ್ದ ಹೇಮಾವತಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Tungabhadra Dam: ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್; ನದಿಪಾತ್ರದಲ್ಲಿ ಪ್ರವಾಹ ಭೀತಿ