Site icon Vistara News

UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌

KEA UGCET 2024

ಬೆಂಗಳೂರು: ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಯುಜಿಸಿಇಟಿ-24 (UGCET 2024) ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Updates) ಅವಕಾಶ ಕಲ್ಪಿಸಿದ್ದು, ಶನಿವಾರದಿಂದಲೇ ಆದ್ಯತಾ ಕ್ರಮದಲ್ಲಿ ಆಪ್ಷನ್ಸ್‌ಗಳನ್ನು ದಾಖಲಿಸಲು ವೆಬ್‌ಸೈಟ್‌ ನಲ್ಲಿ ಲಿಂಕ್‌ ಬಿಡುಗಡೆ ಮಾಡಿದೆ.

ಇದಲ್ಲದೆ, ಮೊದಲ ಎರಡೂ ಸುತ್ತುಗಳಲ್ಲಿ ಆಪ್ಷನ್‌ಗಳನ್ನು ದಾಖಲು ಮಾಡದವರು ಹಾಗೂ ಹಂಚಿಕೆಯಾದ ಸೀಟಿಗೆ ಯಾವುದೇ ಛಾಯ್ಸ್‌ ನೀಡದವರು ಹಾಗೂ ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದವರಿಗೂ ಆಪ್ಷನ್ಸ್‌ ದಾಖಲಿಸಲು ಸೆ.30ರಿಂದ ಅ.4ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಶನಿವಾರ ತಿಳಿಸಿದ್ದಾರೆ.

ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಅ.7ರಂದು ಮತ್ತು ಅಂತಿಮ ಫಲಿತಾಂಶವನ್ನು ಅ.8ರಂದು ಪ್ರಕಟಿಸಲಾಗುವುದು. ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳಲು ಅ.9ರಿಂದ 14ರವರೆಗೆ ಅವಕಾಶ ನೀಡಲಾಗುವುದು. ಅ.15, ಕಾಲೇಜಿಗೆ ವರದಿ ಮಾಡಿಕೊಳ್ಳಲು ಕೊನೆ ದಿನ ಎಂದು ಪ್ರಸನ್ನ ವಿವರಿಸಿದ್ದಾರೆ.

30ರೊಳಗೆ ಸಲ್ಲಿಸಿ:

3ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅಂಕಗಳ ಮಾಹಿತಿಯನ್ನು ಪಿಯುಸಿ ಇಲಾಖೆಯಿಂದ ನೇರವಾಗಿ ಪಡೆದು, ಅದರ ಆಧಾರದ ಮೇಲೆ ಸಿಇಟಿ ರ‍್ಯಾಂಕ್‌ ನೀಡಲಾಗಿದೆ. ಇತರೆ ಬೋರ್ಡ್ ಗಳಿಂದ 12ನೇ ತರಗತಿಯನ್ನು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೂಡ ತಮ್ಮ ಅಂಕಪಟ್ಟಿ ಮತ್ತು 2024ನೇ ಸಾಲಿನ ಸಿಇಟಿ ಪ್ರವೇಶ ಪತ್ರವನ್ನು ಸೆ.30ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಿ ರ್ಯಾಂಕ್‌ ಪಡೆದು, ಆಪ್ಷನ್‌ ದಾಖಲಿಸಬಹುದು.

ಎಚ್ಚರಿಕೆಯಿಂದ ಆಪ್ಷನ್ಸ್‌ ದಾಖಲಿಸಿ ಇಲ್ಲದಿದ್ದರೆ ಐದು ಪಟ್ಟು ದಂಡ

ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್‌ಗಳನ್ನು ದಾಖಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಸೀಟು ಸಿಕ್ಕ ನಂತರ ಪ್ರವೇಶ ಪಡೆಯಬೇಕು. ಒಂದು ವೇಳೆ ಪ್ರವೇಶ ಪಡೆಯದಿದ್ದರೆ ಸರ್ಕಾರ ನಿಗದಿಪಡಿಸಿರುವ ಎಂಜಿನಿಯರಿಂಗ್‌ ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದ ಆಪ್ಷನ್ಸ್‌ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟು ರದ್ದುಪಡಿಸಿಕೊಳ್ಳಲು ಅ.3ರ ಬೆಳಿಗ್ಗೆ 11ರವರೆಗೆ ಅವಕಾಶ ನೀಡಲಾಗಿದೆ. ಅಂತಹವರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಇನ್ನು ಮುಂದೆ ಪ್ರತ್ಯೇಕವಾಗಿ ನಡೆಯಲಿದ್ದು, ಸದ್ಯದಲ್ಲೇ ಅದರ‌ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದರು.

Exit mobile version