ಹುಬ್ಬಳ್ಳಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಕೈಗೊಂಡ ಕ್ರಮ ಸರಿಯಾಗಿಯೇ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಉನ್ನತ ಹುದ್ದೆ, ಅಧಿಕಾರದಲ್ಲಿ ಇರುವವರಿಗೆ ಕಾನೂನು ಮತ್ತು ಸಂವಿಧಾನದ ಭಯ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಅಳೆದು ತೂಗಿ ಕ್ರಮ ಜರುಗಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Tungabhadra Dam: ಮುರಿದುಹೋದ 19ನೇ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿ, ಪೋಲಾಗುತ್ತಿದ್ದ ನೀರು ಬಂದ್!
ತನಿಖೆಗೆ ಸಿಎಂ ಸಹಕರಿಸಲಿ
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ. ಲೋಕಾಯುಕ್ತ ಅಥವಾ ಸ್ಥಳೀಯ ಅಧಿಕಾರಿಗಳಿಂದಲೇ ತನಿಖೆ ನಡೆಯುತ್ತದೆ. ಸಿಎಂ ಸಂಪೂರ್ಣ ತನಿಖೆಗೆ ಸಹರಿಸಲಿ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ
ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಆರೋಪ ಬರುತ್ತಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು ಎಂದು ಜೋಶಿ ನೆನಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಕಿದ್ದರೆ ಕಾನೂನು ಹೋರಾಟ ಮಾಡಲಿ. ಒಬ್ಬ ಸಾಮಾನ್ಯ ನಾಗರಿಕನಿಗೂ ಕಾನೂನು ಹೋರಾಟಕ್ಕೆ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದ ಸಚಿವರು, ಸಾರ್ವಜನಿಕ ಬದುಕಿನಲ್ಲಿ ಆಳುವವರು ಮೊದಲು ಶುದ್ಧ ಹಸ್ತರಾಗಿರಬೇಕು. ಆಗ ಪ್ರಜಾಪ್ರಭುತ್ವದ ಮೇಲೆ ಜನಕ್ಕೆ ನಂಬಿಕೆ ಬರುತ್ತದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ನೀಡಲಿ. ತನಿಖೆಗೆ ಸಹಕರಿಸಲಿ ಎಂದು ಜೋಶಿ ಒತ್ತಾಯಿಸಿದರು.
ಕೇಂದ್ರ ತನಿಖೆ ನಡೆಸುತ್ತಿಲ್ಲ
ಕೇಂದ್ರದ ಯಾವುದೇ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ. ಲೋಕಾಯುಕ್ತದಂತಹ ತನಿಖೆ ಎದುರಿಸಲಿ ಎಂದು ಹೇಳಿದರು.
ತನಿಖೆಗೆ ಸಿಎಂಗೆ ಏಕೆ ಭಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗಲೂ ತಾವು ಶುದ್ಧ ಹಸ್ತರು. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎನ್ನುತ್ತಾರೆ. ಹಾಗಿದ್ದರೆ ಯಾವುದೇ ತನಿಖೆ ನಡೆದರು ಭಯವೇಕೆ? ಎಂದು ಪ್ರಶ್ನಿಸಿದರು.
ರಾಜಕಾರಣ ಮಾಡಲು ಹೊರಟರೆ ಜನರೇ ಉತ್ತರ ಕೊಡುತ್ತಾರೆ: ರಾಜ್ಯಪಾಲರು ಸಿಎಂ ಮೇಲೆ ತನಿಖೆಗೆ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ರಾಜಕೀಯ ಮಾಡಲು ಹೊರಟರೆ ಜನರೇ ಅದಕ್ಕೆ ಉತ್ತರ ಕೊಡುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಈಗ ಕೇಂದ್ರದ ಯಾವುದೇ ತನಿಖಾ ಸಂಸ್ಥೆಗಳು ಬಂಧಿಸಲು ಹೊರಟಿಲ್ಲ. ಹಾಗಿದ್ದ ಮೇಲೆ ಪ್ರತಿಭಟನೆ, ಪ್ರತಿರೋಧವೇಕೆ? ಎಂದು ಸಚಿವ ಜೋಶಿ ಪ್ರಶ್ನಿಸಿದರು.
ಇದನ್ನೂ ಓದಿ: Dengue Vaccine: ಭಾರತದ ಮೊದಲ ಡೆಂಗ್ಯೂ ಲಸಿಕೆ; 3ನೇ ಹಂತದ ಪ್ರಯೋಗ ಪ್ರಾರಂಭ
ಹಂಸರಾಜ ಭಾರದ್ವಜ್ ಕಾಂಗ್ರೆಸ್ ಏಜೆಂಟರಾಗಿದ್ದರೆ?
ಪ್ರಸ್ತುತ ರಾಜ್ಯಪಾಲರನ್ನು ಬಿಜೆಪಿ ಏಜೆಂಟ್ ಎನ್ನುವುದು ಸರಿಯಲ್ಲ. ಹಾಗಾದರೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಇದ್ದ ರಾಜ್ಯಪಾಲ ಹಂಸರಾಜ ಭಾರದ್ವಜ್ ಅವರು ಕಾಂಗ್ರೆಸ್ ಏಜೆಂಟರಾಗಿದ್ದಾರೆ? ಎಂದು ಪ್ರಶ್ನಿಸಿದ ಪ್ರಲ್ಹಾದ್ ಜೋಶಿ, ಸಾಂವಿಧಾನಿಕವಾಗಿ ಗೌರವಾನ್ವಿತ ಹುದ್ದೆಯಲ್ಲಿ ಇರುವವರ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಖಂಡಿಸಿದರು.