ಬೆಂಗಳೂರು: ಇತ್ತೀಚೆಗಷ್ಟೇ ವಿಶ್ವವಿದ್ಯಾಯ ಸಿಂಡಿಕೇಟ್ ಸದಸ್ಯರು ಸ್ಥಳೀಯ ವಿಚಾರಣಾ ಸಮಿತಿಗಳ (ಎಲ್‌ಐಸಿ) ಸದಸ್ಯರಾಗುವುದನ್ನು ನಿರ್ಬಂಧಿಸಿದ್ದ ಉನ್ನತ ಶಿಕ್ಷಣ ಇಲಾಖೆ, ಇದೀಗ ವಿಶ್ವವಿದ್ಯಾಲಯದ ಎಲ್ಲ ಸಭೆಗಳನ್ನೂ ನೇರ ಪ್ರಸಾರ ಮಾಡುವ ನಿರ್ಧಾರ ಮಾಡಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿನಲ್ಲಿ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ ವನ್ನಾಗಿ ಆಚರಿಸುತ್ತಿದ್ದು, ಉನ್ನತ ಶಿಕ್ಷಣ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದೆ. ಅದರ ಒಂದು ಭಾಗವಾಗಿ ವಿಶ್ವವಿದ್ಯಾಲಯಗಳ ಅಕಡೆಮಿಕ್ ಕೌನ್ಸಿಲ್, ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳ ನೇರ ಪ್ರಸಾರಕ್ಕೆ ಚಾಲನೆ ನೀಡಲಾಗುವುದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
ಸಿಂಡಿಕೇಟ್ ಸದಸ್ಯರನ್ನು ನಿರ್ಬಂದಿಸುವ ಜತೆಗೆ, ವಿಶ್ವವಿದ್ಯಾಲಯಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ರಾಜ್ಯಾದ್ಯಂತ ಏಕೀಕೃತ ಪರೀಕ್ಷೆಯನ್ನು ನಡೆಸಲೂ ಉನ್ನತ ಶಿಕ್ಷಣ ಇಲಾಖೆ ಇತ್ತೀಚೆಗೆ ನಿರ್ಧಾರ ಮಾಡಿತ್ತು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 1ರಂದು ಸುಶಾಸನ ಮಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿಶ್ವವಿದ್ಯಾಲಯದ ಆಡಳಿತವನ್ನು ಪಾರದರ್ಶಕವಾಗಿಸುವುದು ಹಾಗೂ ಪರಿಣಾಮಕಾರಿಯಾಗಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಅಕಾಡೆಮಿ ಕೌನ್ಸಿಲ್, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ವ್ಯವಸ್ಥೆಯೂ ಸೇರಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ನೇರ ಪ್ರಸಾರ ನಡೆಯಲಿದೆ. ಒಮ್ಮೆ ಜಾರಿಗೆ ಬರುತ್ತಿದ್ದಂತೆ ಕಾಯಂ ವ್ಯವಸ್ಥೆಯಾಗಿ ಮುಂದುವರಿಯಲಿದೆ ಎಂದರು.
ಇದರ ಜತೆಗೆ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನೂ ಡಿಸೆಂಬರ್ 10ರೊಳಗೆ ಆಯಾಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ. ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಇದನ್ನು ಪಾಲಿಸಬೇಕು. ಒಂದೊಮ್ಮೆ ಘಟಕ ಕಾಲೇಜುಗಳಲ್ಲಿ ವೆಬ್‌ಸೈಟ್ ಇಲ್ಲದಿದ್ದರೆ ವಿವಿ ವೆಬ್‌ಸೈಟ್‌ನಲ್ಲಿಯೇ ವಿವರಗಳನ್ನು ಪ್ರಕಟಿಸಬೇಕು.
ಶುಲ್ಕ ವಿವರದಿಂದ ಹಿಡಿದು ವಿವಿಗಳಿಗೆ ಮಂಜೂರಾದ ಅನುದಾನದ ಮೊತ್ತ, ಕೈಗೊಳ್ಳಲಾಗಿರುವ ಪ್ರಾಜೆಕ್ಟ್‌ಗಳು, ಬೋಧಕ ಸಿಬ್ಬಂದಿ ಸಂಖ್ಯೆ, ಬೋಧಕೇತರ ಸಿಬ್ಬಂದಿ ಸಂಖ್ಯೆ, ಹೀಗೆ ಪ್ರತಿಯೊಂದು ಮಾಹಿತಿಯನ್ನೂ ಅಡಕಗೊಳಿಸಬೇಕು ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಇದನ್ನೂ ಓದಿ | Chanakya University | ಭಾರತೀಯ ಜ್ಞಾನ ಸಂಪತ್ತನ್ನು ಬೋಧಿಸುವ ಚಾಣಕ್ಯ ವಿಶ್ವವಿದ್ಯಾಲಯ ನ.19ಕ್ಕೆ ಉದ್ಘಾಟನೆ