Site icon Vistara News

V.Sunil kumar | ಅನಿಮಲ್ ಪ್ಲಾನೆಟ್, ನ್ಯಾಟ್ ಜಿಯೋ ವೈಲ್ಡ್, ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡದಲ್ಲೂ ಬರಲಿ: ಕೇಂದ್ರಕ್ಕೆ ಪತ್ರ

V.Sunil kumar

ಬೆಂಗಳೂರು: ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನ್ಯಾಟ್‌ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್‌ಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿ. ಸುನಿಲ್ ಕುಮಾರ್‌ ಮನವಿ ಮಾಡಿದ್ದಾರೆ.

ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿವೆ. ಭೂ ಜೀವ ಜಗತ್ತಿನ ಅದ್ಭುತ ಸುಂದರ ವಿಷಯಗಳೆಲ್ಲಾ ಅಲ್ಲಿನ ಜನಗಳಿಗೆ ಅವರ ಅವರ ಪ್ರಾದೇಶಿಕ ಭಾಷೆಗಳಲ್ಲಿ ದೊರಕುತ್ತಿವೆ. ಆದರೆ ಕನ್ನಡದಲ್ಲಿ ಪ್ರಸಾರವಾಗುತ್ತಿಲ್ಲ ಎಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | The Kashmir Files | ಕಾಶ್ಮೀರ್‌ ಫೈಲ್ಸ್‌ ಅವಹೇಳನ ಖಂಡಿಸಿದ ಇಸ್ರೇಲ್‌ ರಾಯಭಾರಿಗೆ ಅಣ್ಣಾಮಲೈ ಅಭಿನಂದನೆ

ಈ ಭೂಮಿಯ ಮೇಲಿನ ಜೀವಜಗತ್ತಿನ ಅದ್ಭುತ ವೈವಿಧ್ಯತೆ, ಅವುಗಳ ನಿಗೂಢ ಜೀವನ ಕ್ರಮ ಹಾಗೂ ಅವು ಅಳಿವಿನಂಚೆಗೆ ಹೋಗುತ್ತಿರುವ ಭೀಕರತೆಗಳನ್ನೆಲ್ಲ ಜಗತ್ತಿನ ಎಲ್ಲ ಜನರು ಅವರವರ ಮಾತೃಭಾಷೆಗಳಲ್ಲಿ ಅರಿತುಕೊಳ್ಳುವ ಅನಿವಾರ್ಯತೆ ಇದೆ. ಆದರೆ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡ ಭಾಷೆಯಲ್ಲಿ ಪ್ರಸಾರವಾಗದೇ ಇರುವುದರಿಂದ ಅದರಲ್ಲಿ ಜೀವ ವೈವಿಧ್ಯದ ಜ್ಞಾನ ಕನ್ನಡಿಗರನ್ನು ತಲುಪುತ್ತಿಲ್ಲ. ಆದ್ದರಿಂದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡದಲ್ಲಿ ಪ್ರಸಾರವಾಗಬೇಕೆಂದು ಕನ್ನಡಿಗರು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನದ ಹಲವು ಸ್ವರೂಪಗಳ ಆವಿಷ್ಕಾರದಿಂದಾಗಿ ಜಗತ್ತಿನಲ್ಲಿ ಅವರವರ ಭಾಷೆಯಲ್ಲಿಯೇ ಸೇವೆಗಳು ಮತ್ತು ಮಾಹಿತಿಗಳು ಲಭಿಸುತ್ತಿರುವ ಸಂದರ್ಭದಲ್ಲಿ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡದಲ್ಲಿ ಸೇವೆ ಒದಗಿಸಬಹುದಾಗಿದೆ. ೨ ಸಾವಿರ ವರ್ಷಗಳ ಇತಿಹಾಸ ಹೊಂದಿರುವ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಹಾಗೂ ೬ ಕೋಟಿಗೂ ಅಧಿಕ ಜನ ಮಾತನಾಡುವ, ಬಳಸುವ ಕನ್ನಡ ಭಾಷೆಯಲ್ಲಿ ಈ ಚಾನೆಲ್‌ಗಳನ್ನು ಪ್ರಸಾರ ಮಾಡಿ ಕನ್ನಡಿಗರಿಗೆ ಭೂ ಜಗತ್ತಿನ ವಿಸ್ಮಯಗಳನ್ನು ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳುವ ಅವಕಾಶ ಒದಗಿಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Namma clinic | ನಮ್ಮ ಕ್ಲಿನಿಕ್‌ ಬಗ್ಗೆ ವೈದ್ಯರ ನಿರಾಸಕ್ತಿ, 3 ತಿಂಗಳಿಂದ ನೇಮಕಾತಿ ಪ್ರಕ್ರಿಯೆಗೆ ಝೀರೋ ರೆಸ್ಪಾನ್ಸ್!

Exit mobile version