Site icon Vistara News

Valentines Day : ಪ್ರೇಮಿಗಳಿಗೆ ಭಾರಿ ನಿರಾಸೆ; ವ್ಯಾಲೆಂಟೈನ್ಸ್‌ ಡೇ ದಿನ ಮದ್ಯ ಸಿಗಲ್ಲ!

Valentines day Alcohol ban

ಬೆಂಗಳೂರು: ಪ್ರೇಮ ಎನ್ನುವುದೇ ಒಂದು ನಶೆ. ಹೀಗಾಗಿ ಪ್ರೇಮಿಗಳ ದಿನಾಚರಣೆಯಂದು (Valentines Day) ಬೇರೆ ನಶೆಯೇ ಬೇಕಾಗಿಲ್ಲ ಎಂದು ಸರ್ಕಾರ ತೀರ್ಮಾನ ಮಾಡಿದೆಯೋ ಹೇಗೆ? ಈ ಪ್ರಶ್ನೆ ಉದ್ಭವವಾಗಿರುವುದು ಫೆಬ್ರವರಿ 14ರಂದು ಬೆಂಗಳೂರಿನ ಹಲವು (Bangalore news) ಭಾಗಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ (Sale of Alcohol banned) ವಿಧಿಸಿರುವುದರಿಂದ!

ಹೌದು ಪ್ರೇಮಿಗಳ ದಿನಾಚರಣೆಯಂದು ಸಂಜೆ 5ರಿಂದ ಫೆಬ್ರವರಿ 17ರ ಬೆಳಿಗ್ಗೆ 6 ಗಂಟೆವರೆಗೆ ನಗರದ ಕೆಲವು ಭಾಗಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಅಂದರೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟ ಇರುವುದಿಲ್ಲ.

ಇದಕ್ಕೆ ಕಾರಣ ಪ್ರೇಮಿಗಳ ದಿನಾಚರಣೆಯಲ್ಲ. ಬದಲಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16 ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆ.

1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 135(ಸಿ) ಅಡಿಯಲ್ಲಿ ಮತ್ತು ಕರ್ನಾಟಕ ಅಬಕಾರಿ ನಿಯಮ 1967ರ 10 (ಬಿ)ಯನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಉಪ ಆಯುಕ್ತ ಕೆ.ಎ.ದಯಾನಂದ ಅವರು ನಿಷೇಧವನ್ನು ಘೋಷಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಶಿಕ್ಷಕರು (ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್) ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದ್ದು, ಫೆ.23ರವರೆಗೆ ಮುಂದುವರಿಯಲಿದೆ.

ಬೆಂಗಳೂರಿನ ಹಲವು ರೆಸ್ಟೋರೆಂಟ್‌, ಪಬ್‌, ಬಾರ್‌ಗಳಲ್ಲಿ ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಹಲವು ಸಿದ್ಧತೆಗಳನ್ನು ಮಾಡಿದ್ದವು. ಆದರೆ, ಅಂದೇ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದಿರುವುದು ಅವರಿಗೂ ನಿರಾಸೆ ಮೂಡಿಸಿದೆ.

ಇದನ್ನೂ ಓದಿ: Love Case : ಪ್ರೇಮಿ ಜತೆ ಓಡಿಹೋದ 2 ಮಕ್ಕಳ ತಾಯಿ ; ಸಿಟ್ಟಿಗೆದ್ದ ಗಂಡನಿಂದ ಲವರ್‌ ಮನೆ ಧ್ವಂಸ

ರಾಜ್ಯದ ಬೇರೆ ಭಾಗಗಳಲ್ಲಿ ಸಮಸ್ಯೆ ಇಲ್ಲ

ನಿಜವೆಂದರೆ ಬೆಂಗಳೂರಿನ ಕಮಿಷನರೇಟ್‌ ವ್ಯಾಪ್ತಿ ಪ್ರದೇಶದಲ್ಲಿರುವ ಹೋಟೆಲ್‌ಗಳಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಮೋಜು ಮಸ್ತಿ ಮಾಡುವವರು ಬೆಂಗಳೂರು ನಗರದ ಒಳಗೇ ಬಂದು ಮದ್ಯ ಸೇವಿಸಲು ಅವಕಾಶವಿದೆ. ಅದರ ಜತೆಗೆ ರಾಜ್ಯದ ಬೇರೆ ಯಾವ ಭಾಗದಲ್ಲೂ ಮದ್ಯ ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಪ್ರೇಮಿಗಳು ರಾಜ್ಯದ ಬೇರೆ ಭಾಗಗಳಿಗೂ ಹೋಗಲು ಅವಕಾಶವಿದೆ.

Exit mobile version