ಬೆಂಗಳೂರು: ದೇಶದ ಎರಡು ಐಟಿ ಹಬ್‌ಗಳನ್ನು ಜೋಡಿಸುವ ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Bengaluru-Hyderabad Vande Bharat Express Train) ಆಗಸ್ಟ್ 24ರಂದು ಚಾಲನೆ ದೊರೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಸೆ. 21ರಂದು (ಗುರುವಾರ) ಟ್ರಯಲ್ ರನ್ (Trial run today) ನಡೆಯುತ್ತಿದೆ. ಹಾಗಿದ್ದರೆ ಈ ರೈಲಿನ ಮಹತ್ವ, ಬೆಂಗಳೂರಿನಿಂದ ಹೈದರಾಬಾದ್ (Bangalore to Hyderabad) ತಲುಪಲು ಬೇಕಾದ ಸಮಯ, ವೇಳಾಪಟ್ಟಿ, ಮಧ್ಯೆ ಬರುವ ಸ್ಟಾಪ್‌ಗಳು ಎಲ್ಲದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.
ಐಟಿ ಹಬ್‌ಗಳಾಗಿರುವ ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳ ಮಧ್ಯೆ ಸಂಪರ್ಕ ಕಲ್ಪಿಸುವ ಮೂಲಕ ಈ ರೈಲು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆಯನ್ನು ಹೊಂದಿದ್ದು, ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲು ಹೈದ್ರಾಬಾದ್ ಮತ್ತು ಬೆಂಗಳೂರು ನಡುವಿನ 615 ಕಿ.ಮೀ ದೂರವನ್ನು 8 ಗಂಟೆ 30 ನಿಮಿಷದಲ್ಲಿ ಸಂಚರಿಸಲಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೆಪ್ಟೆಂಬರ್ 24ರಂದು ಕಾಚೇಗುಡ ಸ್ಟೇಷನ್‌ನಿಂದ (Kacheguda Station) ಹೈದರಾಬಾದ್-ಬೆಂಗಳೂರು ರೈಲಿಗೆ ಚಾಲನೆಯನ್ನು ನೀಡಲಿದ್ದಾರೆ. ಅಂದೇ ಅವರು ಇತರ ಕೆಲವು ರೈಲುಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಇದರಲ್ಲಿ ಹೈದರಾಬಾದ್ (ಕಾಚಿಗುಡ)- ಬೆಂಗಳೂರು (ಯಶವಂತಪುರ) ರೈಲು ಅಲ್ಲದೆ, ಚೆನ್ನೈ- ತಿರುನಲ್ವೇಲಿ, ವಿಜಯವಾಡ- ಚೆನ್ನೈ, ಪಟನಾ- ಹೌರಾ, ರೌರ್ಕೇಲಾ- ಪುರಿ, ಕಾಸರಗೋಡು-ಅಲಪ್ಪುಳ- ತಿರುವನಂತ ಪುರಂ ಮಾರ್ಗದ ರೈಲುಗಳೂ ಇವೆ. ಮೋದಿ ಅವರು ದಿಲ್ಲಿಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಕಾಸರಗೋಡು ತಿರುವನಂತಪುರ ರೈಲು ಕೇಸರಿ ಬಣ್ಣ
ಕಾಸರಗೋಡು-ತಿರುವನಂತಪುರ ಮಾರ್ಗದ ರೈಲು ಕೇಸರಿ ಬಣ್ಣದಲ್ಲಿರಲಿದೆ. ಉಳಿದ ರೈಲುಗಳು ನೀಲಿ- ಬಿಳಿ ಬಣ್ಣಗಳ ಸಂಯೋಜನೆಯಲ್ಲಿರಲಿವೆ. ಪ್ರಸ್ತುತ ದೇಶದಾದ್ಯಂತ 25 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ.
ಬೆಂಗಳೂರಿನಿಂದ ಮೊದಲ ಪಯಣ ಸೆಪ್ಟೆಂಬರ್ 25ರಂದು.
ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ವಂದೇ ಭಾರತ್ ರೈಲಿನ ಮೊದಲ ಪಯಣ ಸೆಪ್ಟೆಂಬರ್ 25ರಂದು ಮಧ್ಯಾಹ್ನ 2.45ಕ್ಕೆ ಆರಂಭವಾಗಲಿದೆ. ಇದು ಕರ್ನಾಟಕದ ಮೂರನೇ ವಂದೇ ಭಾರತ್ ರೈಲು ಆಗಿರಲಿದೆ. ಈಗಾಗಲೇ ಚೆನ್ನೈ-ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಧಾರವಾಡ ರೈಲುಗಳು ಜನಪ್ರಿಯತೆ ಪಡೆದಿವೆ.
ವಂದೇ ಭಾರತ್ ರೈಲು ವಾರದಲ್ಲಿ ಆರು ದಿನ, ಬುಧವಾರ ರಜೆ
- ಬೆಂಗಳೂರು-ಹೈದರಾಬಾದ್ ರೈಲು ಕ್ರಮಿಸಲಿರುವ ದೂರ : 609.81 ಕಿ.ಮೀ. ಅದರಲ್ಲಿ 355.03 ಕಿ.ಮೀ. ಡಬಲ್ ಲೈನ್ ಇದ್ದರೆ, 254.78 ಕಿ.ಮೀ. ಸಿಂಗಲ್ ಲೈನ್ ಇರುತ್ತದೆ.
- ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣದ ಅವಧಿ 8.30 ಗಂಟೆ. ಅಂದರೆ ಬೆಂಗಳೂರಿನಿಂದ ಸಂಜೆ 2.45ಕ್ಕೆ ಹೊರಡುವ ರೈಲು ರಾತ್ರಿ 11.15ಕ್ಕೆ ಹೈದರಾಬಾದ್ ತಲುಪಲಿದೆ.
- ಈ ರೈಲಿನಲ್ಲಿ 14 ಚಯರ್ ಕಾರ್‌ಗಳು ಮತ್ತು 2 ಎಕ್ಸಿಕ್ಯುಟಿವ್ ಕ್ಲಾಸ್ ಬೋಗಿಗಳು ಇರುತ್ತವೆ.
- ವಾರದ ಆರು ದಿನಗಳಲ್ಲಿ ಈ ರೈಲಿನ ಕಾರ್ಯಾಚರಣೆ ಇರುತ್ತದೆ. ಬುಧವಾರ ರೈಲು ಇರುವುದಿಲ್ಲ.
ವೇಳಾಪಟ್ಟಿ ಮತ್ತು ಯಾವ್ಯಾವ ನಿಲ್ದಾಣದಲ್ಲಿ ಎಷ್ಟು ಹೊತ್ತಿಗೆ?
ಬೆಂಗಳೂರು-ಹೈದರಾಬಾದ್ ರೈಲು
1.ಯಶವಂತಪುರ ರೈಲು ನಿಲ್ದಾಣ: ಮಧ್ಯಾಹ್ನ 2.45
2. ಧರ್ಮಾವರಂ ಸ್ಟೇಷನ್: ಸಂಜೆ 5.20
3. ಅನಂತಪುರ ನಿಲ್ದಾಣ: ಸಂಜೆ 5.41
4. ಕರ್ನೂಲು ನಗರ ನಿಲ್ದಾಣ: ಸಂಜೆ 7.51
5. ಮೆಹಬೂಬ್ ನಗರ: ರಾತ್ರಿ 9.40
6. ಕಾಚೆಗುಡ ಸ್ಟೇಷನ್: ರಾತ್ರಿ 11.15
ಹೈದರಾಬಾದ್- ಬೆಂಗಳೂರು ರೈಲು
1. ಕಾಚೆಗುಡ ಸ್ಟೇಷನ್: ಬೆಳಗ್ಗೆ 5.30
2. ಮೆಹಬೂಬ್ ನಗರ: ಬೆಳಗ್ಗೆ 7.00
3. ಕರ್ನೂಲು ನಗರ ನಿಲ್ದಾಣ: ಬೆಳಗ್ಗೆ 8.40
4. ಅನಂತಪುರ ನಿಲ್ದಾಣ: ಬೆಳಗ್ಗೆ 10.55
5. ಧರ್ಮಾವರಂ ಸ್ಟೇಷನ್: ಬೆಳಗ್ಗೆ 11.30
6.ಯಶವಂತಪುರ ರೈಲು ನಿಲ್ದಾಣ: ಮಧ್ಯಾಹ್ನ 2.00
ಗಮನಿಸಿ ಇದು ರಾಯಚೂರಿನ ಮೂಲಕ ಸಾಗುವುದಿಲ್ಲ!
ಹೈದರಾಬಾದ್‌ಗೆ ವಂದೇ ಭಾರತ್ ರೈಲು ಆರಂಭ ಎಂಬ ಸುದ್ದಿ ಕೇಳಿದಾಗ ಹೆಚ್ಚಿನವರು ಇದು ರಾಯಚೂರಿನ ಮೂಲಕ ಸಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಇದು ಆ ರೂಟ್‌ನಲ್ಲಿ ಹೋಗುವುದಿಲ್ಲ. ನಿಜ ಹೇಳಬೇಕು ಎಂದರೆ ಕರ್ನಾಟಕದಿಂದ ಅದರು ನೇರವಾಗಿ ಹೋಗುವುದು ಧರ್ಮಾವರಂಗೆ. ಕರ್ನಾಟಕದಲ್ಲಿ ಯಶವಂತಪುರ ನಿಲ್ದಾಣ ಬಿಟ್ಟರೆ ಬೇರೆ ಯಾವ ಸ್ಟಾಪ್ ಕೂಡಾ ಇಲ್ಲ!
ಇದನ್ನೂ ಓದಿ: Vande Bharat: ಶೀಘ್ರದಲ್ಲೇ ಬರಲಿವೆ ವಂದೇ ಭಾರತ್ ಸ್ಲೀಪರ್, ಮೆಟ್ರೋ ರೈಲು; ಇವುಗಳ ವೈಶಿಷ್ಟ್ಯ ಏನು?
ಇಂದು ಪ್ರಾಯೋಗಿಕ ಸಂಚಾರ ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಸೆಪ್ಟೆಂಬರ್ 21ರಂದು ಕಾಚಿಗುಡದಿಂದ ಆರಂಭಗೊಂದಿದೆ. ಗುರುವಾರ ಬೆಳಿಗ್ಗೆ ಹೈದರಾಬಾದ್‌ನ ಕಾಚಿಗುಡದಿಂದ ಈ ರೈಲು ಹೊರಟು ಮಧಾಹ್ನ 2 ಗಂಟೆಗೆ ಯಶವಂತಪುರಕ್ಕೆ ಬರಲಿದೆ. ಇನ್ನು ಹಿಂದಿರುಗಿ 2.45ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 11.15ಕ್ಕೆ ಕಾಚಿಗುಡ ತಲುಪಲಿದೆ.